Saturday, 23rd November 2024

Belekeri iron ore scam: ಬೇಲೆಕೇರಿ ಅದಿರು ನಾಪತ್ತೆ ಕೇಸ್‌; ಶಾಸಕ ಸತೀಶ್‌ ಸೈಲ್‌ಗೆ ಬಿಗ್‌ ರಿಲೀಫ್‌, ಶಿಕ್ಷೆ ಅಮಾನತಿನಲ್ಲಿಟ್ಟ ಹೈಕೋರ್ಟ್

Belekeri case

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ (Belekeri iron ore scam) ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಹಾಗೂ ಇತರ ಆರೋಪಿಗಳಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಶಿಕ್ಷೆಯನ್ನು ಅಮಾನತಿನಲ್ಲಿಡಲು ಹೈಕೋರ್ಟ್‌ನ ನ್ಯಾ.ಎಂ.ನಾಗ ಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದ್ದು, ಆರೋಪಿಗಳು ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ದಂಡದ ಮೊತ್ತದಲ್ಲಿ ಶೇ. 25 ಮೊತ್ತವನ್ನು ಠೇವಣಿ ಇಡಲು ಆರೋಪಿಗಳಿಗೆ ಸೂಚಿಸಲಾಗಿದೆ. 6 ವಾರದಲ್ಲಿ ದಂಡದ ಮೊತ್ತ ಠೇವಣಿ ಇಡುವಂತೆ ಕೋರ್ಟ್‌ ಸೂಚಿಸಿದೆ. ಇದರಿಂದ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ಈ ಸುದ್ದಿಯನ್ನೂ ಓದಿ | Karnataka Bypoll: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.61.81 ಮತದಾನ

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಅ.26ರಂದು ಆದೇಶ ಹೊರಡಿಸಿತ್ತು. ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ್ ಬಿಳಿಯೆ ಸೇರಿ 7 ಜನರಿಗೆ 7 ವರ್ಷ ಜೈಲು ಶಿಕ್ಷೆ ಜತೆಗೆ ಭಾರಿ ದಂಡ ವಿಧಿಸಲಾಗಿತ್ತು.

ಸತೀಶ್ ಸೈಲ್‌ ಜತೆಗೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿಗೂ ಜೈಲು ಶಿಕ್ಷೆ ವಿಧಿಸಲಾಗಿತ್ತು. 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿತ್ತು.

ಏನಿದು ಪ್ರಕರಣ?

2010ರಲ್ಲಿ ಬೇಲೆಕೇರಿ ಬಂದರಿನಲ್ಲಿ ಸೀಜ್ ಆಗಿದ್ದಂತಹ 11,312 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಶಾಸಕ ಸತೀಶ್‌ ಸೈಲ್‌, ಅರಣ್ಯಾಧಿಕಾರಿ ಮಹೇಶ್ ಬಿಳಿಯ, ಮಲ್ಲಿಕಾರ್ಜುನ ಶಿಪ್ಪಿಂಗ್ ಸೇರಿ ಹಲವರ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು.‌ ಪ್ರಕರಣದ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಾದ-ಪ್ರತಿವಾದವನ್ನು ಆಲಿಸಿ, ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ ಬಂಧನಕ್ಕೆ ಕೋರ್ಟ್‌ ಸೂಚಿಸಿದ್ದರಿಂದ ಅ.24ರಂದು ಶಾಸಕನ ಬಂಧನವಾಗಿತ್ತು. ಅ.6ರಂದು ಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಕೋರ್ಟ್‌ ಪ್ರಕಟಿಸಿತ್ತು. ಕಾಂಗ್ರೆಸ್ ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಸೇರಿ ಹಲವರನ್ನು ದೋಷಿಗಳು ಎಂಬುದಾಗಿ ತೀರ್ಪು ನೀಡಿತ್ತು.

ಕರಣ ಬೆಳಕಿಗೆ ತಂದಿದ್ದ ಸಂತೋಷ್ ಹೆಗ್ಡೆ

2010ರ ಮಾರ್ಚ್​​ನಲ್ಲಿ ಅಂದಿನ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಪ್ರಕರಣವನ್ನು ಬಯಲಿಗೆಳೆದಿದ್ದರು. ಲೋಕಾಯುಕ್ತ ಹಾಗೂ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಈ ಅಕ್ರಮ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ ಶಾಸಕ ಸತೀಶ್​ ಸೈಲ್ ಅದಿರನ್ನು ಖರೀದಿ ಮಾಡುತ್ತಿದ್ದರು. ಕಾನೂನು ಬಾಹಿರವಾಗಿ, ಅಂದರೆ, ಗುತ್ತಿಗೆ ಪಡೆಯದೇ ತೆಗೆದ ಅದಿರು ಖರೀದಿಸುತ್ತಿದ್ದರು. ಬಳ್ಳಾರಿ ಮತ್ತು ಹೊಸಪೇಟೆ ಸೇರಿ ಇತರೆ ಅರಣ್ಯದಲ್ಲಿ ತೆಗೆದಿದ್ದ ಅದಿರು ಕೊಂಡುಕೊಳ್ಳುತ್ತಿದ್ದರು. ಖರೀದಿ ಮಾಡಿದ್ದ ಅದಿರನ್ನು ಸರ್ಕಾರದ ಅನುಮತಿ ಪಡೆಯದೇ ಸ್ಥಳಾಂತರ ಮಾಡುತ್ತಿದ್ದರು. ಹೀಗೆ ತೆರಿಗೆ ವಂಚನೆ ಮಾಡಿ ಬೇಲೆಕೇರಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಲಾಗುತ್ತಿತ್ತು.

ಫ್ಲ್ಯಾಟ್​ನಲ್ಲಿ ಅಕ್ರಮವಾಗಿ ಅದಿರು ಸಂಗ್ರಹ

ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಅದಿರನ್ನು ಸತೀಶ್ ಸೈಲ್ ತಮ್ಮ ಫ್ಲ್ಯಾಟ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ದಾಸ್ತಾನು ಮಾಡಿದ ಅದಿರನ್ನು 17 ತಿಂಗಳಲ್ಲಿ ಸಂಪೂರ್ಣವಾಗಿ ರಫ್ತು ಮಾಡಲಾಗಿತ್ತು. ಇನ್ನು ಪೊಲೀಸರು ಅದಿರು ಸೀಜ್ ಮಾಡಿದ್ದರೂ ತಲೆಕೆಡಿಸಿಕೊಳ್ಳದೇ ಸತೀಶ್ ರಪ್ತು ಕಾರ್ಯ ಮುಂದುವರಿಸಿದ್ದರು ಎನ್ನಲಾಗಿದೆ. ಯಾವಾಗ 88 ಲಕ್ಷದ 6 ಸಾವಿರ ಮೆಟ್ರಿಕ್ ಟನ್ ಅದಿರಿನ ಅಕ್ರಮ ಬಯಲಾಯಿತೋ, ಆಗ 5 ಲಕ್ಷ ಮೆಟ್ರಿಕ್ ಟನ್ ಅದಿರು ಸೀಜ್ ಮಾಡಲಾಗಿತ್ತು. ಅಧಿಕಾರಿಗಳ ಕ್ರಮಕ್ಕೂ ಸುಮ್ಮನಾಗದ ಸತೀಶ್ ಸೈಲ್, ಮುಟ್ಟುಗೋಲು ಹಾಕಿದ್ದ ಅದಿರನ್ನೂ ಗೊತ್ತಿಲ್ಲದಂತೆ ರಫ್ತು ಮಾಡಿಸಿದ್ದರು.

2012ರ ಸೆ. 16ರಂದು ಸಿಬಿಐ ಸತೀಶ್ ಸೈಲ್ ಮನೆ ಮೇಲೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಇದಾದ ಬಳಿಕ 2013ರ ಸೆ. 20ರಂದು ಸೈಲ್ ಅರೆಸ್ಟ್ ಕೂಡ ಆಗಿದ್ದರು. ವರ್ಷಕ್ಕೂ ಅಧಿಕ ಕಾಲ ಜೈಲುವಾಸ ಅನುಭವಿಸಬೇಕಾಯಿತು. ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದುಹೊರ ಬಂದಿದ್ದರು.