Saturday, 23rd November 2024

Primary Healthcare Costs: ರಾಜ್ಯದ ಜನತೆಗೆ ಮತ್ತೊಂದು ಆಘಾತ; ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಚಿಕಿತ್ಸಾ ದರ ಹೆಚ್ಚಳ

Primary Healthcare Costs

ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ತರಕಾರಿ, ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆಯಲು ಮುಂದಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಚಿಕಿತ್ಸಾ ದರ ಹೆಚ್ಚಳಕ್ಕೆ ಮುಂದಾಗಿದೆ (Primary Healthcare Costs).

ಕೆಲವು ದಿನಗಳ ಹಿಂದೆಯಷ್ಟೇ ಮೆಡಿಕಲ್ ಕಾಲೇಜ್ ವ್ಯಾಪ್ತಿಯ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ದರ ಪರಿಷ್ಕರಣೆ ಮಾಡಿದ್ದ ಸರ್ಕಾರ ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿಕಿತ್ಸಾ ದರ ಹೆಚ್ಚಾಗಲಿದೆ. ಹೊಸ ನಿಯಮ ಜಾರಿಯ ಬಳಿಕ ಚಿಕಿತ್ಸೆ ದರ ಶೇ. 15ರಿಂದ 20 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಚಿಕಿತ್ಸಾ ದರ ಪರಿಷ್ಕರಣೆಗೆ ಈಗಾಗಲೇ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಒಂದು ವೇಳೆ ದರ ಹೆಚ್ಚಳ ಮಾಡಿದ್ದೇ ಆದಲ್ಲಿ ಬಡ ವರ್ಗದ ಜನರಿಗೆ ಇನ್ನಷ್ಟು ತೊಂದರೆಯಾಗಲಿದೆ.

ಸಚಿವರು ಹೇಳಿದ್ದೇನು?

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸಾ ದರ ಪರಿಷ್ಕರಣೆ ಮಾಡಲು ಮುಂದಾಗಿರುವುದನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸಡೆಸಲಾದ ಪರಿಷ್ಕರಣೆ ಇದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ʼʼಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ದರ ಪರಿಷ್ಕರಣೆ ಮಾಡುತ್ತಿಲ್ಲ. ಪ್ರತೀ ಎರಡರಿಂದ ಮೂರು ವರ್ಷಕ್ಕೊಮ್ಮೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ದರ ಪರಿಷ್ಕರಣೆ ಮಾಡಲಾಗುತ್ತದೆʼʼ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜೀವರಕ್ಷಕ ಔಷಧಗಳ ಬರ!

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಆರ್ಭಟದಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಳವಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್‌ಎಂಎಸ್‌ಸಿಎಲ್‌) ಬರೋಬ್ಬರಿ 250 ಔಷಧಗಳು ಶೂನ್ಯ ದಾಸ್ತಾನು ಇರುವುದು ಬೆಳಕಿಗೆ ಬಂದಿದೆ. ವಿವಿಧ ಟೆಂಡರ್‌ಗಳ ಕೊನೆಯ ಪ್ರಕ್ರಿಯೆ ಮುಗಿದಿದ್ದರೂ ಸರಬರಾಜು ಆದೇಶ ಪತ್ರ ನೀಡುವುದಕ್ಕೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳುವವರಿಗೆ ಔಷಧಗಳ ಅಭಾವ ಎದುರಾಗಿದೆ. ಇದರಿಂದಾಗಿ, ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್‌ ಸ್ಟೋರ್‌ಗಳಲ್ಲಿ ಸಾವಿರಾರು ರೂ. ಕೊಟ್ಟು ಜೀವ ರಕ್ಷಕ ಔಷಧಗಳನ್ನು ಖರೀದಿಸುವಂತಾಗಿದೆ.

ಕೆಎಸ್‌ಎಂಎಸ್‌ಸಿಎಲ್‌, ಪ್ರತಿ ವರ್ಷ ಹತ್ತಾರು ಟೆಂಡರ್‌ಗಳನ್ನು ನಡೆಸಿ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್‌ ಬಟ್ಟೆ, ಕಾಟನ್‌, ಸರ್ಜಿಕಲ್‌ ಗ್ಲೌಸ್‌, ಗ್ಲೂಕೋಸ್‌ ಬಾಟಲ್‌, ಆ್ಯಂಟಿ ಬಯೋಟಿಕ್‌ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಔಷಧಗಳನ್ನು ದಾಸ್ತಾನು ಮಾಡುತ್ತಿದೆ. ಔಷಧ ದಾಸ್ತಾನಿಗಾಗಿ ಪ್ರತಿ ವರ್ಷ ನೂರಾರು ಕೋಟಿ ರೂ. ಮೊತ್ತದ ಟೆಂಡರ್‌ ನಡೆಸಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಟೆಂಡರ್‌ ಆಹ್ವಾನಿಸಲಾಗುತ್ತದೆ. ಮಾರ್ಚ್‌ನಲ್ಲಿ ಅಂತಿಮ ಪ್ರಕ್ರಿಯೆ ಮುಗಿಸಿ ಏಪ್ರಿಲ್‌ನಲ್ಲಿ ಔಷಧ ಸ್ವೀಕರಿಸಲಾಗುತ್ತದೆ. ಆದರೆ ರಾಜ್ಯದಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಲು, ಸರಬರಾಜು ಆದೇಶ ಪತ್ರ ನೀಡುವಿಕೆಯಲ್ಲಿ ವಿಳಂಬ ಸೇರಿ ಇತರೆ ಕಾರಣಗಳಿಂದ ಎರಡು ವರ್ಷಗಳ ಹಳೆಯ ಟೆಂಡರ್‌ಗಳ ಪ್ರಕ್ರಿಯೆಗಳು ಇನ್ನೂ ನಡೆಯುತ್ತಿವೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: BPL Ration Card: ಲಕ್ಷಾಂತರ ಬಿಪಿಎಲ್‌ ರೇಷನ್‌ ಕಾರ್ಡ್‌ ರದ್ದು, ಅನರ್ಹರು ಯಾರು?