Saturday, 23rd November 2024

Naxal Vikram Gowda: ವಿಕ್ರಂ ಗೌಡ ಎನ್‌ಕೌಂಟರ್‌ ನಕಲಿಯಾ? ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

parameshwara vikram gowda

ಬೆಂಗಳೂರು: ‌ನಕ್ಸಲ್‌ ವಿಕ್ರಂ ಗೌಡ (Naxal Vikram Gowda) ಅವರದ್ದು ನಕಲಿ‌ ಎನ್‌ಕೌಂಟರ್ (Fake encounter) ಅಲ್ಲ. ವಿಕ್ರಂಗೌಡ ಚಟುವಟಿಕೆಗಳ ಮೇಲೆ ಕಳೆದ 20 ವರ್ಷಗಳಿಂದ ನಿಗಾ ವಹಿಸಲಾಗಿತ್ತು. ಜನ ವಿರೋಧಿ ಕೆಲಸಗಳಲ್ಲಿ ತೊಡಗಿದ್ದ ಎಂಬ ಮಾಹಿತಿ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ (Home minister G Parameshwara) ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಬಾಹಿರವಾಗಿ, ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ. ನಕ್ಸಲ್ ನಿಗ್ರಹಕ್ಕಾಗಿ ರಾಜ್ಯದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ರಚಿಸಲಾಗಿದೆ. ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.

ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಶರಣಾಗುವಂತೆ ವಿಚಾರವಾದಿಗಳು ಮನವಿ ಮಾಡಿದ್ದಾರೆ. ಇದು ಸರಿಯಲ್ಲ.‌ ಸಮಾಜದಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ಮಾಡಿ, ನಕ್ಸಲ್ ಚಟುವಟಿಕೆಗೆ ಸೇರಬೇಡಿ ಎಂದಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಗಂಭೀರವಾಗಿ‌ ಪರಿಗಣಿಸಬೇಕು ಎಂದು ಹೇಳಿದರು.

ಈ ಹಿಂದೆ ತುಮಕೂರಿನ ಪಾವಘಡದ ಆಂಧ್ರಪ್ರದೇಶ ಗಡಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಇತ್ತು. ಇದೇ ರೀತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅನುಕೂಲಸ್ಥರಿಂದ ಹಣ ಕೇಳುವುದು, ಜಮೀನುಗಳಿಗೆ ಬೇಲಿ ಹಾಕುವುದು, ಪೊಲೀಸರನ್ನು ಹತ್ಯೆ ಮಾಡಿದ್ದರು. ಎಸ್.ಎಮ್.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನೂರಾರು ಜನ ನಕ್ಸಲರು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತಿಯಾದರು. ಅದೇ ರೀತಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಗತಿಪರ ಚಿಂತಕರು ಪ್ರಯತ್ನ ಮಾಡಬೇಕು ಎಂದರು.