Saturday, 23rd November 2024

Vishwavani Editorial: ಬಿಪಿಎಲ್ ಕಾರ್ಡ್ ದುರ್ಬಳಕೆ ತಪ್ಪಲಿ

ರಾಜ್ಯದಲ್ಲಿ ಪಡಿತರ ಚೀಟಿ ರದ್ದು ವಿವಾದ ತಾರಕಕ್ಕೇರಿದೆ. ಮೂಲಗಳ ಪ್ರಕಾರ 12 ಲಕ್ಷಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳನ್ನು
ರದ್ದು ಮಾಡಲಾಗಿದೆ. ಅರ್ಹರಲ್ಲದವರೂ ಬಿಪಿಎಲ್ ಚೀಟಿ ಪಡೆದಿದ್ದು, ಅದನ್ನು ಪತ್ತೆ ಹಚ್ಚಿ ರದ್ದು ಮಾಡಲಾಗಿದೆ ಎಂದಿತ್ತು ಸರಕಾರ. ಆದರೆ ಈ
ಕುರಿತ ವಿವಾದ ತೀವ್ರವಾಗುತ್ತಿದ್ದಂತೆಯೇ ಬಿಪಿಎಲ್ ಚೀಟಿ ಪರಿಶೀಲನೆ ವಿಚಾರವನ್ನೇ ಕೈಬಿಟ್ಟಿದೆ. ಕಾಂಗ್ರೆಸ್ ಸರಕಾರ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಪಿಎಲ್ ಚೀಟಿದಾರರಿಗೆ ಮಾಸಿಕ ತಲಾ 10 ಕಿಲೋ ಅಕ್ಕಿ ಘೋಷಿಸಿದ ಬಳಿಕ ಈ ಪಡಿತರ ಕಾರ್ಡುಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.

ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ವರಮಾನ 1.20 ಲಕ್ಷ ರು. ಒಳಗಿರಬೇಕು ಇತ್ಯಾದಿ ನಿರ್ಬಂಧಗಳಿದ್ದರೂ ಸರಕಾರಿ ನೌಕರರೂ ಸೇರಿದಂತೆ ಹಲವು ಅನರ್ಹರು ಚೀಟಿ ಪಡೆದಿದ್ದಾರೆಂದು ತಿಳಿದುಬಂದಿತ್ತು. ಆದರೆ ಇದೀಗ ಒತ್ತಡಕ್ಕೆ ಮಣಿದು ಅನರ್ಹ ಬಿಪಿಎಲ್ ಚೀಟಿಗಳ ರದ್ದು ನಿರ್ಧಾರ ವನ್ನೇ ಕೈಬಿಡಲಾಗಿದೆ. ಈ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಸರಕಾರ ತಿಳಿಸಿದೆ. ಇದು ನಿಜವಾಗಿದ್ದರೆ, ಬಡಜನರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಅನರ್ಹರು ಲೂಟಿ ಹೊಡೆಯಲು ಸರಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ. ಒಂದೆಡೆ ಸಂಪನ್ಮೂಲ ಸಂಗ್ರಹ ಕೊರತೆ ನೀಗಿಸಲು ನೀರು, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ಎಲ್ಲ ಬಾಬ್ತುಗಳನ್ನು ಹೆಚ್ಚಿಸುತ್ತಿರುವ ಸರಕಾರ, ಇನ್ನೊಂದೆಡೆ ಈ ಹಣವನ್ನು ಅನರ್ಹರಿಗಾಗಿ ವ್ಯಯಮಾಡುತ್ತಿರುವುದು ಸರಿಯಲ್ಲ.

ರಾಮಕೃಷ್ಣ ಹೆಗಡೆ ಸರಕಾರ ಸಾರ್ವತ್ರಿಕ ಪಡಿತರ ಯೋಜನೆ ಜಾರಿಗೆ ತಂದಾಗ,ಅಗತ್ಯವಿರುವ ಯಾರು ಬೇಕಿದ್ದರೂ ಪಡಿತರ ಪಡೆಯಬಹು ದಿತ್ತು. ಆಗ ಸಿರಿವಂತರು ಪಡಿತರಕ್ಕೆ ಕೈಚಾಚು ತ್ತಿರಲಿಲ್ಲ. ಈಗ ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ವಿವಿಧ ಯೋಜನೆಗಳನ್ನು ಬಿಪಿಎಲ್ ಕಾರ್ಡ್‌ಗೆ ಲಿಂಕ್ ಮಾಡಿರುವುದೇ ಈ ಕಾರ್ಡ್‌ಗೆ ಎಲ್ಲರೂ ಮುಗಿಬೀಳಲು ಕಾರಣವಾಗಿದೆ. ಸರಕಾರ ಈಗ ವಿತರಿಸುವ ಪಡಿತರವನ್ನು ಮುಕ್ತವಾಗಿ ಹಂಚಿದರೂ, ಇಷ್ಟೊಂದು ಬೇಡಿಕೆ ಬರುವ ಸಾಧ್ಯತೆ ಇಲ್ಲ.

ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್ ಕಾರ್ಡುಗಳು ಸೇರಿ 1,25,74,521 ಪಡಿತರ ಚೀಟಿಗಳಿವೆ. ಈ ಕಾರ್ಡುಗಳಲ್ಲಿ ಸುಮಾರು 4,35,33,099 ಕುಟುಂಬ ಸದಸ್ಯರಿದ್ದಾರೆ. ಅಂದರೆ ಕರ್ನಾಟಕದ ಜನಸಂಖ್ಯೆಯ ಶೇ.೬೫ಕ್ಕಿಂತ ಹೆಚ್ಚು ಜನರು ಬಡವರಾಗಿದ್ದಾರೆಂದಾ ಯಿತು! ಈ ಪ್ರಮಾಣ ದಲ್ಲಿ ಯೋಜನೆಯೊಂದು ದುರ್ಬಳಕೆಯಾಗುತ್ತಿರುವುದು ಅಕ್ಷಮ್ಯ.

ಇದನ್ನೂ ಓದಿ: editorial