ನೊಯ್ಡಾ: ಕಸದಿಂದ ರಸವನ್ನು ಸೃಷ್ಟಿಸುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ನಾವು-ನೀವು ಸೇದಿ ಬಿಸಾಡಿದ ಸಿಗರೇಟ್ ತುಂಡುಗಳನ್ನು ರಿಸೈಕಲ್ ಮಾಡಿ ಅದರಿಂದ ಅಂದ ಚೆಂದದ ಮುದ್ದಾದ ಟೆಡ್ಡಿ ಬೆಯರ್ (teddy bears) ಗಳನ್ನು ತಯಾರು ಮಾಡುವ ಮಾದರಿ ಕೆಲಸವನ್ನು ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದ್ದು ಹಲವರು ಈ ವ್ಯಕ್ತಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನೂ ಕೆಲವರು ಈ ಟೆಡ್ಡಿ ಬೇರ್ ಗಳಿಂದ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹದೇ? ಎಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ, ಸುಮಾರು 60 ಸೆಕೆಂಡ್ ಗಳ ಈ ವಿಡಿಯೋಕ್ಕೆ ಈ ರೀತಿ ಕ್ಯಾಪ್ಷನ್ ನೀಡಲಾಗಿದೆ. “ಹೆಚ್ಚಿನ ಪೋಷಕರು ಸಿಗರೇಟ್ ಆಟದ ವಸ್ತುವಲ್ಲ ಎಂದು ಹೇಳುತ್ತಾರೆ. ಆದರೆ ನೋಯ್ಡಾದ (Noida) ಈ ನಮನ್ ಗುಪ್ತ, ಸಿಗರೇಟ್ ನ ತುಂಡುಗಳನ್ನು ರಿಸೈಕಲ್ ಮಾಡಲು ಒಂದೊಳ್ಳೆ ಉಪಾಯವನ್ನು ಕಂಡುಹಿಡಿದಿದ್ದಾರೆ… ಅವುಗಳನ್ನು ಗೊಂಬೆಗಳನ್ನಾಗಿಸುವುದು! ಗುಪ್ತ ಮತ್ತು ಆತನ ಸಹೋದರ ಪ್ರಾರಂಭಿಸಿರುವ ʼಕೋಡ್ ಎಫರ್ಟ್ ಪ್ರೈವೇಟ್ ಲಿಮಿಟೆಡ್ʼ ಎಂಬ ಸಂಸ್ಥೆಯ ಮೂಲಕ ಈ ಕ್ರಿಯೇಟಿವ್ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಂಸ್ಥೆಯು ವಿಷಕಾರಿ ಲೋಹಗಳನ್ನು ಸ್ಕ್ಯಾನ್ ಮಾಡಿ, ಅದನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆಗೆ ಒಳಪಡಿಸಿ ಅದು ಪುನರ್ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತ ಎಂದು ಖಚಿತವಾದ ಬಳಿಕ ಸಿಗರೇಟು ತುಂಡುಗಳನ್ನು ಅದರಲ್ಲಿ ತುಂಬಲಾಗುತ್ತದೆ.
ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿರುವ ವಿಡಿಯೋದಲ್ಲಿ ಗುಪ್ತ ತನ್ನ ಈ ಕೆಲಸದ ಬಗ್ಗೆ ಒಂದು ಸಂಕ್ಷಿಪ್ತವಾದ ವಿವರಣೆಯನ್ನು ನೀಡಿದ್ದಾರೆ. ಇಲ್ಲಿ ಅವರು, ಸಿಗರೇಟು ತುಂಡುಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಅವುಗಳನ್ನು ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಈ ವಿಡಿಯೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. “ಇದು ಸುರಕ್ಷಿತ ಎಂದು ಪ್ರಮಾಣೀಕೃತಗೊಂಡಿದೆ ಎಂದು ಅವರು ಹೇಳುತ್ತಿದ್ದಾರೆ. ಇವರು ಒಂದು ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾರೆ, ಇದರಲ್ಲಿ ತಪ್ಪು ಕಂಡುಹುಡುಕುವುದು ನಿಲ್ಲಿಸಿ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ನನಗೆ ಇದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ.. ಕಮೆಂಟ್ ಗಳನ್ನು ಓದುತ್ತಿರುವವಾಗ ಜನರ ಮನಸ್ಥಿತಿ ಬಗ್ಗೆ ಆಶ್ಚರ್ಯವಾಗುತ್ತಿದೆ. ಒಬ್ಬ ಒಂದೊಳ್ಳೆ ಕೆಲಸವನ್ನು ಮಾಡುತ್ತಿರುವಾಗ ಅದನ್ನು ಪ್ರಶಂಸಿಸುವುದು ಬಿಟ್ಟು ಅವರ ಕಾಲೆಳೆದರೆ, ಅವರಿಗೆ ಹೇಗಾಗಬೇಡ? ನನಗೆ ಆಶ್ಚರ್ಯವಾಗುತ್ತಿದೆ” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಕಮೆಂಟ್ ಮಾಡಿದ್ದು, “ನಾನಿದನ್ನು 100% ಬೆಂಬಲಿಸುತ್ತೇನೆ. ಎಂದು ಬರೆದುಕೊಂಡಿದ್ದಾರೆ. “ನಾನಿದನ್ನು 100% ಬೆಂಬಲಿಸುತ್ತೇನೆ. ಆದರೆ ಅವರು ಆ ಫೈಬರನ್ನು ಸುರಕ್ಷಿತವಾಗಿ ಹೇಗೆ ಸಂಸ್ಕರಿಸುತ್ತಾರೆ ಎಂಬುದೇ ನನ್ನ ಕಾಳಜಿಯಾಗಿದೆ, ಮತ್ತು ಅವರು ಈಗಾಗಲೇ ತೆಗೆದುಹಾಕಿರುವ ವಿಷಕಾರಿ ಭಾಗವನ್ನು ಏನು ಮಾಡುತ್ತಾರೆ? ಹೌದು, ಸಿಗರೇಟ್ ಒಂದು ಸಮಸ್ಯೆಯೇ.!” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Kichcha Sudeep: ಆಮೀರ್ ಖಾನ್- ಕಿಚ್ಚ ಸುದೀಪ್ ಒಟ್ಟಿಗೆ ಸಿನಿಮಾ ಮಾಡ್ತಿದಾರಾ?
ಇನ್ನು ಕೆಲವರು, ಸುಟ್ಟ ಸಿಗರೇಟಿನ ತುಂಡಿನಿಂದ ವಿಷಕಾರಿ ಅಂಶವನ್ನು ಸರಿಯಾಗಿ ತೆಗೆದಿಲ್ಲವಾದ ಕಾರಣ ಇದು ಮಕ್ಕಳಿಗೆ ಅಪಾಯಕಾರಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. “ನಾವು ಸಿಗರೇಟ್ ತುಂಡುಗಳನ್ನು ಸಂಗ್ರಹಿಸಿ ಅವುಗಳನ್ನು ಮೊದಲಿನಿಂದ ಕೊನೆಯವರೆಗೂ ಸರಿಯಾಗಿ ಸಂಸ್ಕರಿಸುತ್ತೇವೆ ನಮ್ಮ 3ಪಿ (ಸಂಗ್ರಹ, ಸಂಸ್ಕರಣೆ ಮತ್ತು ವಿಧಾನ) ಇದು ಪರಿಣಾಮಕಾರಿಯಾಗಿದೆ” ಎಂದು ಈ ಕಂಪೆನಿಯ ಅಧಿಕೃತ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.