ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ರಾಹುಲ್ ಗಾಂಧಿಯವರ ಸ್ನೇಹಿತ ಜಾರ್ಜ್ ಸೊರೋಸ್ ತನ್ನ ಪ್ರಭಾವ ಬಳಸಿ ಟ್ರಂಪ್‌ರನ್ನು ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿದ. ಆದರೆ ಇದು ಅಮೆರಿಕನ್ನರಿಗೆ ತಿಳಿದು, ಟ್ರಂಪ್‌ರನ್ನು 2ನೇ ಅವಧಿಗೆ ಗೆಲ್ಲಿಸಿದರು. ಕಾಂಗ್ರೆಸ್‌ಗೆ ಭಾರತದಲ್ಲಿ ಮನ್ನಣೆ ಸಿಗದ ಕಾರಣ, ಸೊರೋಸ್ ಮೂಲಕ ಸುಳ್ಳು ನಿರೂಪಣೆಗಳ ದಾಳಿ ನಡೆಸಿ ಮೋದಿಯವರ ಘನತೆಗೆ ಧಕ್ಕೆ ತರುವ ಕೆಲಸವನ್ನು ಅದು ಮಾಡುತ್ತಾ ಬಂದಿದೆ.
ನಾವೆಲ್ಲ ಶಾಲೆಗಳಲ್ಲಿ ಓದುವಾಗ ‘ಎ’ ಫಾರ್ ಆಪಲ್ ಎಂದು ಹೇಳಿಕೊಟ್ಟಿದ್ದರು. ಆದರೆ ರಾಹುಲ್ ಗಾಂಧಿಯವರು ಓದಿದ ಶಾಲೆಯಲ್ಲಿ, ‘ಎ’ ಫಾರ್ ‘ಅದಾನಿ’ ಅಥವಾ ‘ಅಂಬಾನಿ’ ಎಂದು ಹೇಳಿಕೊಟ್ಟಿರಬೇಕು! ದೇಶದ ಕೈಗಾರಿಕೋದ್ಯಮಿಯೊಬ್ಬರ ಮೇಲೆ ವಿದೇಶದಲ್ಲಿ ಆಪಾದನೆ ಬಂದರೆ ಖುಷಿಪಟ್ಟು ಆನಂದಿಸುವ ಕೆಲವರು ಜಗತ್ತಿನಲ್ಲಿರುವುದು ಪ್ರಾಯಶಃ ಭಾರತದಲ್ಲೇ ಇರಬೇಕು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅಂಬಾನಿ ಮತ್ತು ಅದಾನಿ ಕೋಟ್ಯಧಿಪತಿಗಳಾದರು ಎಂಬಂತೆ ರಾಹುಲ್ ಗಾಂಧಿ ಮಾತನಾಡುತ್ತಾರೆ.
ಎರಡನೇ ಮಹಾಯುದ್ಧದ ಬಳಿಕ ಅಮೆರಿಕವು ವಿಶ್ವದ ದೊಡ್ಡಣ್ಣನ ಪಟ್ಟ ಗಿಟ್ಟಿಸಿಕೊಂಡ ನಂತರ, ಅದನ್ನು ಉಳಿಸಿಕೊಳ್ಳಲು ಅನೇಕ ಕೆಲಸಗಳನ್ನು
ಮಾಡುತ್ತಾ ಬಂದಿದೆ. ತನ್ನನ್ನು ಮೀರಿಸುವಂತಿರುವ ಇತರ ದೇಶಗಳ ಅಭಿವೃದ್ಧಿಯನ್ನು ಅದು ಸುಲಭವಾಗಿ ಸಹಿಸುವುದಿಲ್ಲ. ಮತ್ತೊಂದು ದೇಶ ತನಗೆ ಸ್ಪರ್ಧೆ ನೀಡುತ್ತಿದೆಯೆಂಬುದು ಗೊತ್ತಾಗುತ್ತಿದ್ದಂತೆ, ತನ್ನ ಗುಪ್ತದಳದ ಮೂಲಕ ಆ ದೇಶದ ಮಂಡಿಯೂರಿಸುವ ಕೆಲಸಕ್ಕೆ ಕೈಹಾಕುತ್ತದೆ. ಪಕ್ಕದ ದಕ್ಷಿಣ ಅಮೆರಿಕ ಖಂಡವಂತೂ ಒಂದು ಶತಮಾನದಷ್ಟು ಕಾಲ ಆಂತರಿಕ ಯುದ್ಧದಲ್ಲಿ ನಲುಗಿಹೋಗಿತ್ತು. ಅಮೆರಿಕದ ತನಿಖಾ ಸಂಸ್ಥೆಗಳು,
ಬೇಹುಗಾರಿಕಾ ಸಂಸ್ಥೆಗಳು, ಆಳವಾದ ಹಿಡಿದ ಹೊಂದಿರುವ ಮಾಧ್ಯಮಗಳು, ದೊಡ್ಡ ದೊಡ್ಡ ಉದ್ಯಮಿಗಳು ‘ವಿಶೇಷ ಸಂಸ್ಥೆ’ಗಳ ಮೂಲಕ ಇತರ ದೇಶಗಳ ಮೇಲೆ ಮಾನಸಿಕವಾಗಿ ಯುದ್ಧ ಸಾರುವ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ದಿಗ್ವಿಜಯ ಸಾಧಿಸಿದ ನಂತರ, ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ವಿಲವಿಲ ಒದ್ದಾಡುತ್ತಿದ್ದಾರೆ. ಟ್ರಂಪ್ ಅಧಿಕೃತವಾಗಿ ಅಧ್ಯಕ್ಷಗಾದಿ ಹಿಡಿಯುವ ಮುನ್ನ, ಬಾಕಿ ಉಳಿದಿರುವ ಕೆಲಸಗಳನ್ನು ಹಂಗಾಮಿ ಅಧ್ಯಕ್ಷರ ಮೂಲಕ
ಮಾಡಿಸುವಲ್ಲಿ ನಿರತರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಫಲಿತಾಂಶ ಬಂದ ಮರುಕ್ಷಣವೇ, ಸೋತ ಪಕ್ಷದವರು ಅಧಿಕಾರದಿಂದ ಕೆಳಗಿಳಿಯಬೇಕು. ಸೋತ ಪಕ್ಷವು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಂತಿರುವುದಿಲ್ಲ. ಅಧಿಕಾರ ನಡೆಸಲು ಅರ್ಹರಲ್ಲವೆಂಬ ಕಾರಣಕ್ಕೆ
ಜನರು ಅವರನ್ನು ಕೆಳಗಿಳಿಸಿರುತ್ತಾರೆ. ಆದರೆ ಚುನಾವಣೆ ಸೋತ ನಂತರವೂ ನಿರ್ಣಯಗಳನ್ನು ತೆಗೆದುಕೊಳ್ಳುವುದು ಯಾವ ಪ್ರಜಾಪ್ರಭುತ್ವ? ಇಂಥವರು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ.
ರಾಹುಲ್ ಗಾಂಧಿಯವರ ಸ್ನೇಹಿತ ಜಾರ್ಜ್ ಸೊರೋಸ್ ಹಣಬಲದ ಮೂಲಕ ತನ್ನ ಪ್ರಭಾವವನ್ನು ಬಳಸಿ ಡೊನಾಲ್ಡ್ ಟ್ರಂಪ್‌ರನ್ನು ಚುನಾವಣೆ ಯಲ್ಲಿ ಸೋಲಿಸಬೇಕೆಂದು ಶತಪ್ರಯತ್ನ ಪಟ್ಟ. ಆದರೆ ಆತನ ಈ ಷಡ್ಯಂತ್ರ ಅಮೆರಿಕನ್ನರಿಗೆ ತಿಳಿದು, ಟ್ರಂಪ್‌ರನ್ನು ಎರಡನೇ ಅವಧಿಗೆ
ಗೆಲ್ಲಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಭಾರತದಲ್ಲಿ ಜನಮನ್ನಣೆ ಸಿಗದ ಕಾರಣ, ಜಾರ್ಜ್ ಸೊರೋಸ್ ಮೂಲಕ ಭಾರತದ ಮೇಲೆ ಸುಳ್ಳು ನಿರೂಪಣೆ ಗಳಿಂದ ಕೂಡಿದ ದಾಳಿ ನಡೆಸಿ ಮೋದಿಯವರ ಘನತೆಗೆ ಧಕ್ಕೆ ತರುವಂಥ ಕೆಲಸವನ್ನು ಅದು ಸತತವಾಗಿ ಮಾಡುತ್ತಾ ಬಂದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲು ಕೆಲವು ದಿನಗಳಷ್ಟೇ ಉಳಿದಿದ್ದು, ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ.
ಮುಖ್ಯವಾಗಿ, ಅಸಾಂವಿಧಾನಿಕವಾಗಿರುವ ‘ವಕ್ಫ್’ ಕಾನೂನಿನ ತಿದ್ದುಪಡಿಗಳ ಬಗ್ಗೆ ಚರ್ಚೆಯಾಗುತ್ತದೆಂದು ಹೇಳಲಾಗುತ್ತಿದೆ. ವಿರೋಧ
ಪಕ್ಷಗಳು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ವಕ್ಫ್ ಮಂಡಳಿಗೆ ಆದಷ್ಟು ಜಾಗವನ್ನು ಸೇರಿಸುವ ಕೆಲಸವನ್ನು ತರಾತುರಿಯಲ್ಲಿ ಮಾಡುತ್ತಿವೆ. ಕರ್ನಾಟಕದಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಕೆಲ ಜಿಲ್ಲೆಗಳಿಗೆ ತೆರಳಿ ವಕ್ಫ್ ಅದಾಲತ್ ನಡೆಸಿ, ರೈತರ ಜಮೀನುಗಳು, ಮಠ- ಮಂದಿರ-ದಲಿತರ ಜಾಗಗಳನ್ನು ವಕ್ಫ್ ಮಂಡಳಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿಷಯವನ್ನು ಚರ್ಚಿಸದೆ ಸಂಸತ್ತಿನ ಗಮನವನ್ನು ಬೇರೆಡೆಗೆ ತಿರುಗಿಸಲು, ರಾಹುಲ್ ಗಾಂಧಿ ತಮ್ಮ ಆಪ್ತ ಜಾರ್ಜ್ ಸೊರೋಸ್ ಮೂಲಕ ಅದಾನಿ ವಿಷಯವು ಚರ್ಚೆಗೆ ಬರುವಂತೆ ಮಾಡಿ, ಮೋದಿಯವರ ಹೆಸರಿನೊಂದಿಗೆ ಮತ್ತೊಮ್ಮೆ ಅದಾನಿಯನ್ನು ಸೇರಿಸುವ ಷಡ್ಯಂತ್ರ ಮಾಡಿದ್ದಾರೆ. ಕಳೆದ ಬಾರಿಯ ಅಧಿವೇಶನದ ವೇಳೆ ‘ಹಿಂಡನ್‌ಬರ್ಗ್’ ಸಂಸ್ಥೆಯು ಅದಾನಿ ಸಮೂಹ ಸಂಸ್ಥೆಗಳ ಮೇಲೆ ಆರ್ಥಿಕ ಅಶಿಸ್ತಿನ ಆರೋಪವನ್ನು ಹೊರಿಸಿತ್ತು ಮತ್ತು ಈ ವಿಷಯವನ್ನು ಮೋದಿಯವರ ತಲೆಗೆ ಕಟ್ಟುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಈ ಬಾರಿ ಅದಾನಿ ಸಂಸ್ಥೆಗಳ ಮೇಲೆ ಅಮೆರಿಕದಲ್ಲಿ ಕೇಳಿ ಬಂದಿರುವ ಆರೋಪದಲ್ಲಿ, ಕಾಂಗ್ರೆಸ್ ಮತ್ತು ಅದರ
ಮಿತ್ರಪಕ್ಷಗಳು ಆಡಳಿತವಿದ್ದ ಕಾಲದ ರಾಜ್ಯಗಳಿವೆ.
ಅಂದರೆ, ತಮಿಳುನಾಡು, ಒಡಿಶಾ, ಆಂಧ್ರಪ್ರದೇಶ, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆಡಳಿತವಿದ್ದ ಸಂದರ್ಭದಲ್ಲಿ ಅದಾನಿ ಲಂಚ ನೀಡಿದ್ದಾರೆಂಬ ಆರೋಪವಿದೆ.
ಅಮೆರಿಕದಲ್ಲಿ ‘ಇಕನಾಮಿಕ್ ಹಿಟ್‌ಮ್ಯಾನ್’ ಎಂಬುದು ಭರ್ಜರಿ ಹಣಗಳಿಸುವ ವೃತ್ತಿಯಾಗಿದೆ. ಇದರಲ್ಲಿ ತೊಡಗಿಸಿಕೊಂಡಿರುವವರು ಇತರ ದೇಶಗಳಿಗೆ ತೆರಳಿ, ಅಲ್ಲಿ ಆರ್ಥಿಕತೆ ಯನ್ನು ದುಸ್ಥಿತಿಗೆ ತರುವ ಕೆಲಸವನ್ನು ಮಾಡುತ್ತಾರೆ. ಈ ವೃತ್ತಿಯಲ್ಲಿರುವವರಿಗೆ ವಿವಿಧ ಸಂಸ್ಥೆಗಳು ಮತ್ತು ಪ್ರತಿಷ್ಠಿತ ಉದ್ಯಮಿಗಳ ಮೂಲಕ ಹಣಸಂದಾಯವಾಗುತ್ತದೆ. ‘ಟೂಲ್ ಕಿಟ್’ಗಳ ಮೂಲಕ ಸುಳ್ಳು ಆರ್ಥಿಕ ವರದಿಗಳನ್ನು ನೀಡುವುದು, ಚುನಾವಣೆ ಸಮಯದಲ್ಲಿ ಗಲಾಟೆ ಮಾಡಿಸಿ ಆ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವುದು, ಪ್ರಮುಖ ವಿಜ್ಞಾನಿಗಳನ್ನು ಕೊಲೆ ಮಾಡಿಸುವುದು, ಹನಿಟ್ರ್ಯಾಪ್ ಮೂಲಕ ಪ್ರಮುಖ ವಿಷಯಗಳನ್ನು ಸಂಗ್ರಹಿಸುವುದು ಇವು ‘ಇಕನಾಮಿಕ್ ಹಿಟ್‌ಮ್ಯಾನ್’ ವೃತ್ತಿಯಲ್ಲಿರುವವರ ಕೆಲಸ.
ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದಲ್ಲಿ ಯುರೋಪ್ ಮತ್ತು ಅಮೆರಿಕದ ಮಿಶ್ರ ಸಂಸ್ಕೃತಿಯಿದೆ. ಈಕ್ವೆಡಾರ್ ಎಂದಾಕ್ಷಣ ನೆನಪಿಗೆ ಬರುವುದು ಸಂಪದ್ಭರಿತ ಅರಣ್ಯ, ವಿಷಕಾರಿ ಹಾವುಗಳು, ಮನುಷ್ಯರನ್ನು ಕೊಲ್ಲುವ ಕಾಡುಮನುಷ್ಯರು. ಅಮೆರಿಕದ ಉದ್ಯಮಿಯೊಬ್ಬರು 1960ರ ದಶಕದಲ್ಲಿ ಅಲ್ಲಿನ ಕಾಡುಗಳ ನಡುವೆ ಅಗಾಧ ಪ್ರಮಾಣದ ಕಚ್ಚಾತೈಲ ನಿಕ್ಷೇಪಗಳನ್ನು ಪತ್ತೆಹಚ್ಚಿದ್ದರು. ಬಡತನದಿಂದ ಬಳಲುತ್ತಿದ್ದ ಆ ದೇಶದಲ್ಲಿ ಸಿಕ್ಕಿದ ಬಿಲಿಯನ್‌ಗಟ್ಟಲೆ ಬೆಲೆಬಾಳುವ ಸಂಪನ್ಮೂಲ ಅದಾಗಿತ್ತು.
ತೈಲ ನಿಕ್ಷೇಪ ಪತ್ತೆಯಾದರೂ ಅದನ್ನು ಹೊರತೆಗೆದು ಬಳಸಿಕೊಳ್ಳುವಷ್ಟು ಹಣ ಅಲ್ಲಿನವರಲ್ಲಿ ಇರಲಿಲ್ಲ. ಹೀಗಾಗಿ ಅಮೆರಿಕದ ಉದ್ಯಮಿಗಳು ‘ಇಕನಾಮಿಕ್ ಹಿಟ್‌ಮ್ಯಾನ್’ ಮೂಲಕ ಆ ನಿಕ್ಷೇಪಗಳನ್ನು ಹೊರತೆಗೆದು ವ್ಯಾಪಾರಕ್ಕೆ ಬಳಸಿಕೊಳ್ಳುವ ಕೆಲಸಕ್ಕೆ ಕೈಹಾಕಿದರು. ಅಮೆರಿಕದ ಸಂಸ್ಥೆಗಳು ಮತ್ತು ಬ್ಯಾಂಕುಗಳ ಮೂಲಕ ಈಕ್ವೆಡಾರ್ ದೇಶಕ್ಕೆ ಸಾಲ ನೀಡಿ, ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವಂತೆ ಮಾಡಿದರು. ಈಕ್ವೆಡಾರ್ ದೇಶದಲ್ಲಿ ವಿದ್ಯುತ್ ಸಮಸ್ಯೆ ಯಿತ್ತು. ಅದನ್ನು ಬಗೆಹರಿಸಲು ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆಂದು ತಮ್ಮವರನ್ನು ಅಲ್ಲಿಗೆ ಕಳುಹಿಸಿದರು.
ತೈಲನಿಕ್ಷೇಪವನ್ನು ಪತ್ತೆಹಚ್ಚುವ ಕೆಲಸ ನಡೆದಿತ್ತು. ಈ ಉದ್ಯಮಿಗಳು ತಾವು ನೇಮಿಸಿದ್ದ ‘ಇಕನಾಮಿಕ್ ಹಿಟ್ ಮ್ಯಾನ್’ಗಳಿಗೆ ಯಾವ ಕೆಲಸ ಮಾಡಬೇಕೆಂದು ಹೇಳುತ್ತಿದ್ದರೇ ಹೊರತು, ಭವಿಷ್ಯದ ಉದ್ದೇಶಗಳನ್ನಲ್ಲ. ಈ ಉದ್ಯಮಿಗಳ ಉದ್ದೇಶಗಳನ್ನು ಅರಿಯುವಷ್ಟರಲ್ಲಿ ಹಿಟ್‌ಮ್ಯಾನ್‌ಗಳು ತಮಗರಿವಿಲ್ಲದಂತೆ ಕೆಲಸ ಮುಗಿಸುತ್ತಿದ್ದರು. ನಿಕ್ಷೇಪವಿರುವ ದೇಶಕ್ಕೆ ಬೇಕಿರುವ ಹಣ ಸಂದಾಯ ಮಾಡಿ, ಅಲ್ಲಿ ಆಗಬೇಕಿರುವ ಕೆಲಸಗಳನ್ನೂ
ಅಮೆರಿಕದ ಕಂಪನಿಗಳಿಗೆ ನೀಡಬೇಕಿತ್ತು. ಸರಳವಾಗಿ ಹೇಳಬೇಕೆಂದರೆ, ಅಮೆರಿಕನ್ ಡಾಲರ್ ಸಾಲದ ಮೂಲಕ ಹೊರದೇಶಕ್ಕೆ ಹೋಗಿ, ಅಲ್ಲಿನ ಸರಕಾರವು ಅಮೆರಿಕದ ಕಂಪನಿಗಳಿಗೆ ನೀಡುವ ಗುತ್ತಿಗೆಯ ಮೂಲಕ ವಾಪಸ್ ಬರುತ್ತಿತ್ತು.
ಇದರಿಂದಾಗಿ ವಿದೇಶಿ ವಿನಿಮಯದ ಒತ್ತಡ ಇರುತ್ತಿರಲಿಲ್ಲ. 1960-70ರ ದಶಕದಲ್ಲಿ ಅಮೆರಿಕದ ಮಾತನ್ನು ಕೇಳದ ದೇಶಗಳನ್ನು ‘ಸೋವಿಯತ್ ಒಕ್ಕೂಟದ ಸ್ನೇಹಿತ’ನೆಂದು ಹೇಳಲಾಗುತ್ತಿತ್ತು. ಯಾವುದಾದರೊಂದು ದೇಶ ತನ್ನ ಮಾತನ್ನು ಕೇಳಲಿಲ್ಲವೆಂದರೆ ಅಲ್ಲಿನ ಸರಕಾರದ ಆಂತರಿಕ ವಿಷಯದಲ್ಲಿ ತಲೆಹಾಕಿ ಅಭದ್ರತೆ ಸೃಷ್ಟಿಸಲಾಗುತ್ತಿತ್ತು. ಹೀಗೆಂದು ‘ಇಕನಾಮಿಕ್ ಹಿಟ್‌ಮ್ಯಾನ್’ಗಳೇ ಹೇಳಿದ್ದಾರೆ.
‘ಇಕನಾಮಿಕ್ ಹಿಟ್‌ಮ್ಯಾನ್’ಗಳು ಕೆಲಸ ಮಾಡುವ ಸಂಸ್ಥೆಗಳನ್ನು ಕೆಲವೇ ಮಂದಿ ನಿಯಂತ್ರಿಸುತ್ತಾರೆ. ಅಂದರೆ, ಸುಮಾರು 2000 ಕೆಲಸ ಗಾರರಿರುವ ಸಂಸ್ಥೆಯನ್ನು ನಾಲ್ಕರಿಂದ ಐದು ಮಂದಿ ಮಾತ್ರ ನಿಯಂತ್ರಿಸುತ್ತಾರೆ. ಇಂಥ ಸಂಸ್ಥೆಯ ಪಾಲುದಾರರು ರಾಜ್ಯಗಳ ಮುಖ್ಯಸ್ಥರು, ಸರಕಾರದ ಉನ್ನತಾಽಕಾರಿಗಳು, ಬೃಹತ್ ಉದ್ಯಮಿಗಳು, ಪ್ರತಿಷ್ಠಿತ ಮಾಧ್ಯಮಗಳ ಮುಖ್ಯಸ್ಥರು, ಕಾನೂನು ಪಂಡಿತರ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ‘ಇಕನಾಮಿಕ್ ಹಿಟ್‌ಮ್ಯಾನ್’ಗಳಿಗೆ ಕಠಿಣ ನಿಯಮ ಅನ್ವಯವಾಗುತ್ತದೆ. ಅವರು ಮಾಧ್ಯಮಗಳ ಮತ್ತು ಸರಕಾರಿ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸುವಂತಿಲ್ಲ, ತಮ್ಮ ಕೆಲಸದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಇಲ್ಲಿ ಕೆಲಸ ಮಾಡುವವರು ಮಾಜಿ ಸೈನಿಕರು ಅಥವಾ ಎಂಜಿನಿಯರ್‌ಗಳು ಆಗಿರುತ್ತಾರೆ. ಅವರಿಗೆ ನೀಡಿದ ಕೆಲಸ ಮೊದಮೊದಲಿಗೆ ಸಾಮಾನ್ಯ ವೃತ್ತಿಯಂತೆ
ಕಾಣುತ್ತದೆ. ಆದರೆ ಉದ್ಯಮಿಗಳು ತಮಗೆ ನೀಡಿರುವ ಕೆಲಸದ ಉದ್ದೇಶವನ್ನು ಆ ಸಂಸ್ಥೆಗಳು ‘ಇಕನಾಮಿಕ್ ಹಿಟ್ ಮ್ಯಾನ್’ಗಳಿಗೆ ವಿವರವಾಗಿ ಹೇಳುವುದಿಲ್ಲ.
ಹೀಗಾಗಿ, ಮೊದಮೊದಲು ಸಾಮಾನ್ಯ ನೌಕರರಂತೆ ಉದ್ಯೋಗಕ್ಕೆ ಸೇರಿ ತಮ್ಮ ಪಾಲಿನ ಕೆಲಸದಲ್ಲಿ ತೊಡಗುವ ಅವರು, ಕಾಲಕ್ರಮೇಣ ಪ್ರತಿಷ್ಠಿತ ಉದ್ಯಮಿಗಳು ಹೆಣೆದ ಬಲೆಯೊಳಗೆ ಸಿಕ್ಕಿಬಿಡುತ್ತಾರೆ. ತಮಗೆ ನಿಯೋಜಿಸಲಾಗಿರುವ ಕೆಲಸದ ನೈಜ ಉದ್ದೇಶ ಅರಿವಾದಾಕ್ಷಣ, ತಾವು
ಮಾಡುತ್ತಿರುವುದು ಕೊಳಕು ಕೆಲಸ ಎಂಬುದು ಅವರಿಗೆ ಅರಿವಾಗುತ್ತದೆ. ಆದರೆ ಅಷ್ಟು ಹೊತ್ತಿಗಾಗಲೇ ಅವರು ಬಹಳ ದೂರ ಬಂದಿರುತ್ತಾರೆ. ಹಿಂದಿರುಗಲು ಸಾಧ್ಯವಿಲ್ಲದ ಕಾರಣ ಒಲ್ಲದ ಮನಸ್ಸಿನಿಂದಲೇ ಕೆಲಸ ಮಾಡಬೇಕಾದಂಥ ಪರಿಸ್ಥಿತಿ ಎದುರಾಗುತ್ತದೆ. ಈ ಸಂಸ್ಥೆಗಳು ತಮ್ಮನ್ನು ನೇಮಕ ಮಾಡಿರುವ ಉದ್ಯಮಿಗಳು ಹೇಳಿದ ಕೆಲಸ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತವೆ. ‘ನಿಕ್ಷೇಪವಿರುವ ದೇಶಗಳು ಸಮಸ್ಯೆಯಲ್ಲಿವೆ’ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸುವುದು ಅವುಗಳ ಕೆಲಸ. ಸಾಬೀತುಪಡಿಸಿದ ನಂತರ ಆ ದೇಶಗಳಿಗೆ ಬೇಕಿರುವ ಹಣಕಾಸಿನ ನೆರವನ್ನು ಸಾಲದ ರೂಪದಲ್ಲಿ ನೀಡುವುದು, ಹೀಗೆ ನೀಡಿದ ಹಣವನ್ನು ಆ ದೇಶಗಳು ಹೇಗೆ ಬಳಸಬೇಕೆಂಬುದನ್ನು
ಹೇಳುವುದು, ನಿಕ್ಷೇಪಗಳನ್ನು ಹೊರತೆಗೆಯಲು ನಿರ್ಮಿಸಬೇಕಾದಂಥ ಮೂಲಭೂತ ಸೌಕರ್ಯಗಳ ಗುತ್ತಿಗೆಗಳನ್ನು ಅಮೆರಿಕದ ಕಂಪನಿಗಳಿಗೆ ನೀಡುವಂತೆ ಮಾಡುವುದು ಹೀಗೆ ಜಾಲವನ್ನು ಹೆಣೆಯಲಾಗುತ್ತದೆ.
ನಂತರದಲ್ಲಿ, ಆ ದೇಶವನ್ನು ದಿವಾಳಿ ಮಾಡಲು ತಂತ್ರಗಾರಿಕೆ ಹೂಡುವುದು, ಅಲ್ಲಿನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು, ಜನರನ್ನು
ಎತ್ತಿಕಟ್ಟಿ ದಂಗೆ ಏಳಿಸುವುದು, ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಇತ್ಯಾದಿ ನಡೆಯುತ್ತದೆ. ಇಷ್ಟೆಲ್ಲಾ ಮಾಡಿದ ನಂತರ ಆ ದೇಶವು ತನ್ನ
ಅಸ್ತಿತ್ವವಿರುವವರೆಗೂ ಅಮೆರಿಕವನ್ನು ಅವಲಂಬಿಸಬೇಕಾಗುತ್ತದೆ ಮತ್ತು ಅಲ್ಲಿ ಉದ್ಯಮಿಗಳ ಮಾತುಗಳನ್ನು ಕೇಳಬೇಕಾಗುತ್ತದೆ. ಜೀವನ ಪರ್ಯಂತ ಸಾಲಗಾರ ದೇಶವಾಗಿ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಣದ ಸಹಾಯವನ್ನು ಕೇಳುತ್ತಲೇ ಇರಬೇಕಾಗುತ್ತದೆ. ಹೀಗೆ ನೆರವಿನ ಮುಖವಾಡ ಧರಿಸುವ ಅಮೆರಿಕದ ಉದ್ಯಮಿಗಳು, ತಾವು ಮಾಡಿದ ಸಹಾಯಕ್ಕಾಗಿ ಅಲ್ಲಿನ ತೈಲನಿಕ್ಷೇಪಗಳು, ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುತ್ತಾರೆ.
ಅಮೆರಿಕದ ಮಿಲಿಟರಿ ನೆಲೆಗಳನ್ನು ಸ್ಥಾಪಿಸುವುದಕ್ಕೂ ಆ ದೇಶವನ್ನು ಬಳಸಿಕೊಳ್ಳಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತವು ದಾಖಲಿಸು ತ್ತಿರುವ ಅಭಿವೃದ್ಧಿಯ ವೇಗವನ್ನು ಸಹಿಸದ ಜಾರ್ಜ್ ಸೊರೋಸ್, ಅಮೆರಿಕದ ಹಲವು ಸಂಸ್ಥೆಗಳ ಮೂಲಕ ಭಾರತದಲ್ಲಿ ಮೋದಿಯವರ ವಿರುದ್ಧ ಹಲವು ನಿರೂಪಣೆಗಳನ್ನು ಸೃಷ್ಟಿಸಿ, ಭಾರತದ ಆರ್ಥಿಕತೆಯ ವೇಗಕ್ಕೆ ಕಡಿವಾಣ ಹಾಕಲು ವಿಫಲ ಯತ್ನ ನಡೆಸುತ್ತಿದ್ದಾನೆ. ಅವನ ಸಂಸ್ಥೆಯ ಮತ್ತೊಂದು ‘ಟೂಲ್‌ಕಿಟ್’ ಎರಡು ದಿನದಿಂದ ಚರ್ಚೆಯಲ್ಲಿದೆ. ರಾಹುಲ್ ಗಾಂಧಿಯವರು ಆತ ಆಡಿಸುವ ತೊಗಲುಬೊಂಬೆ ಆಗಿದ್ದಾರೆ!
ಇದನ್ನೂ ಓದಿ: mohanvishwagowda