Saturday, 23rd November 2024

Thimmanna Bhagawat Column: ನ್ಯಾಯದ ಕೋಣೆಯ ಬೀಗ ತೆರೆಯಲು ಚಿನ್ನದ ಕೀಲಿಕೈ ಬೇಕೆ ?

ನ್ಯೂನ ಕಾನೂನು

ತಿಮ್ಮಣ್ಣ ಭಾಗವತ್

ಅಪರಾಧಗಳ ತನಿಖೆ, ವಿಚಾರಣೆ ಹಾಗೂ ನ್ಯಾಯದಾನಗಳಲ್ಲಿ ಆಗುತ್ತಿರುವ ವಿಳಂಬ ಬಹುಚರ್ಚಿತ ವಿಷಯ. ಆರೋಪಿಗಳ ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಗಳು ಎಂಬ ಪೂರ್ವಕಲ್ಪನೆ ಭಾರತ ಸೇರಿದಂತೆ ಜಗತ್ತಿನ ಬಹುತೇಕ ನ್ಯಾಯಾಂಗ ವ್ಯವಸ್ಥೆಗಳಲ್ಲಿದೆ. ಆದರೆ ನ್ಯಾಯ ಪ್ರಕ್ರಿಯೆಯಲ್ಲಾಗುವ ವಿಳಂಬದಿಂದಾಗಿ ಬಡವರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ.

ನ್ಯಾಯದೇವತೆಯ ಮೂರ್ತಿಯ ಕಣ್ಣಿಗೆ ತೀರಾ ಇತ್ತೀಚಿನವರೆಗೂ ಕಪ್ಪುಬಟ್ಟೆ ಕಟ್ಟಲಾಗಿತ್ತು. ವಾದಗಳನ್ನು ಆಲಿಸುವ ಮತ್ತು ಸಾಕ್ಷಿ-ಪುರಾವೆ ಗಳನ್ನು ಅಳೆದು ತೂಗುವ ಮೂಲಕ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕೇ ಹೊರತು, ವಾದಿ-ಪ್ರತಿವಾದಿಗಳ ಸಂಪತ್ತು ಅಥವಾ ಸ್ಥಾನಮಾನಗಳನ್ನು ನೋಡಿ ಅಲ್ಲ ಎಂಬುದರ ಸಂಕೇತವದು ‌ ಎಂಬ ಕಲ್ಪನೆಯಿದೆ. ಆದರೆ ನ್ಯಾಯದಾನ ವ್ಯವಸ್ಥೆಯಲ್ಲಿರುವ ಸಂಕೀರ್ಣತೆ, ನ್ಯಾಯ ಪಡೆಯಲು ಜನಸಾಮಾನ್ಯರು ಭರಿಸಬೇಕಾಗುವ ವೆಚ್ಚ ಮತ್ತು ಇಡೀ ಪ್ರಕ್ರಿಯೆಯಲ್ಲಿ ಆಗುತ್ತಿರುವ ಅತಿರೇಕದ ವಿಳಂಬವನ್ನು ನೋಡಲಾಗದೆ ಆಕೆ ಕಣ್ಣು ಮುಚ್ಚಿಕೊಂಡಿರಬಹುದು ಎಂದು ಪೊಲೀಸ್ ಠಾಣೆ ಮತ್ತು ಕೋರ್ಟುಗಳಿಗೆ ಅಲೆದಾಡಿದವರಿಗೆ ಖಂಡಿತ ಅನಿಸಿರುತ್ತದೆ.

ಅಪರಾಧಗಳ ತನಿಖೆ, ವಿಚಾರಣೆ ಹಾಗೂ ನ್ಯಾಯದಾನಗಳಲ್ಲಿ ಆಗುತ್ತಿರುವ ವಿಳಂಬ ಬಹುಚರ್ಚಿತ ವಿಷಯ. ಆರೋಪಿಗಳ ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಗಳು ಎಂಬ ಪೂರ್ವಕಲ್ಪನೆಯು ಭಾರತ ಸೇರಿದಂತೆ ಜಗತ್ತಿನ ಬಹುತೇಕ ನ್ಯಾಯಾಂಗ ವ್ಯವಸ್ಥೆಗಳಲ್ಲಿದೆ. ಆದರೆ ನ್ಯಾಯ ಪ್ರಕ್ರಿಯೆಯಲ್ಲಾಗುವ ವಿಳಂಬದಿಂದಾಗಿ ಬಡವರು, ಅನಕ್ಷರಸ್ಥರು ಹೆಚ್ಚಿನ ತೊಂದರೆ ಅನುಭವಿಸುತ್ತಾರೆ
ಎಂಬುದು ಖೇದದ ವಿಷಯ.

1977ರಷ್ಟು ಹಿಂದೆ, ಬಿಹಾರದ ವಿವಿಧ ಜೈಲುಗಳಲ್ಲಿ ಅನೇಕ ವಿಚಾರಣಾಧೀನ ಕೈದಿಗಳು ವರ್ಷಗಟ್ಟಲೆ ವಿಚಾರಣೆಯಿಲ್ಲದೆ ಸೆರೆವಾಸ ಅನುಭವಿಸುತ್ತಿದ್ದರು. ಅವರಲ್ಲಿ ಕೆಲವರಂತೂ ತಮ್ಮ ಮೇಲೆ ಹೊರಿಸಲಾದ ಆರೋಪ ಸಾಬೀತಾದರೆ ವಿಧಿಸಬಹುದಾದ ಗರಿಷ್ಠ 10 ವರ್ಷ ಶಿಕ್ಷೆಗಿಂತ ಹೆಚ್ಚು ಅವಧಿಯವರೆಗೆ ಜೈಲಿನಲ್ಲಿದ್ದರು. ಇನ್ನು ಕೆಲವರು 5-6 ವರ್ಷಗಳ ಜೈಲುವಾಸ ಮುಗಿಸಿದ್ದರು. ಹಲವು ಸಲ ಅವರನ್ನು ಕೋರ್ಟಿಗೆ ಕರೆತರಲಾಗುತ್ತಿತ್ತು ಮತ್ತು ಪೊಲೀಸರ ವಿನಂತಿಯ ಮೇರೆಗೆ ಪ್ರಕರಣವನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗುತ್ತಿತ್ತು. ಅವರಲ್ಲಿ ಬಹುತೇಕರು ಬಡವರು ಮತ್ತು ನಿರಕ್ಷರಿಗಳು. ಕಾನೂನಿನ ಪ್ರಕ್ರಿಯೆಗಳ ಗೋಜಲಿನ ಯಾವ ಜ್ಞಾನವೂ ಇರದ ಅವರಿಗೆ, ಕೋರ್ಟಿನಿಂದ
ಜಾಮೀನು ಪಡೆಯುವ ಅವಕಾಶವಿದೆ ಎಂತಲೇ ಗೊತ್ತಿರಲಿಲ್ಲ.

ವಕೀಲರನ್ನು ಸಂಪರ್ಕಿಸುವ ಬಗೆಗಿನ ಮಾಹಿತಿ ಮತ್ತು ಅದಕ್ಕೆ ತಗಲುವ ವೆಚ್ಚ ಭರಿಸುವ ಶಕ್ತಿಯೂ ಅವರಿಗಿರಲಿಲ್ಲ. ರಾಷ್ಟ್ರೀಯ ಪೊಲೀಸ್ ಆಯೋಗದ ಆರ್.ಎಫ್.ರುಸ್ತುಂ ಎಂಬ ಅಧಿಕಾರಿ ಕೆಲವು ಜೈಲುಗಳಿಗೆ ಭೇಟಿ ಯಿತ್ತಾಗ ಈ ವಿಷಯ ಅವರ ಗಮನಕ್ಕೆ ಬಂದು, ಅವರು ಈ ಕುರಿತು ವಿವರವಾದ ವರದಿ ಸಲ್ಲಿಸಿದರು. ಈ ವಿಷಯ ಪತ್ರಿಕೆಗಳಲ್ಲೂ ವರದಿ ಯಾಯಿತು. ಆಗಿನ್ನೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಪ್ರಚಲಿತವಿರಲಿಲ್ಲ. ‘ಲೋಕಸ್ ಸ್ಟಾಂಡಿ’ ಅಂದರೆ ‘ವಿವಾದಿತ ವಿಷಯದಲ್ಲಿ ಕೋರ್ಟಿಗೆ ಅರ್ಜಿ ಸಲ್ಲಿಸಲು ಮನವಿದಾರರಿಗೆ ಇರುವ ಹಕ್ಕು’ ಆಧಾರದಲ್ಲಿ ಸಂಬಂಧಿತ ವ್ಯಕ್ತಿಗಳಿಂದ ದಾಖಲಿಸಲ್ಪಟ್ಟ ಪ್ರಕರಣಗಳನ್ನು ಮಾತ್ರ ಕೋರ್ಟುಗಳು ಪರಿಗಣಿಸುತ್ತಿದ್ದವು.

ಪುಷ್ಪಾ ಕಪಿಲ ಹಿಂಗೋರಾಣಿ ಎಂಬ ನ್ಯಾಯವಾದಿಯು ಅಂಥ ಅನೇಕ ಕೈದಿಗಳ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ‘ಹೇಬಿಯಸ್ ಕಾರ್ಪಸ್’ ರಿಟ್ ಅರ್ಜಿಯನ್ನು ದಾಖಲಿಸಿದರು. ಇದರಲ್ಲಿ ಅವರು, ತನಿಖೆ ಹಾಗೂ ವಿಚಾರಣೆಯಲ್ಲಿ
ಆಗುತ್ತಿರುವ ವಿಳಂಬ, ಜೈಲುಗಳಲ್ಲಿನ ಕೆಟ್ಟ ಪರಿಸ್ಥಿತಿ, ಆಪಾದಿತರ ಬಡತನ ಹಾಗೂ ನಿರಕ್ಷರತೆಯಿಂದಾಗಿ ಜಾಮೀನು ಹಾಗೂ ನ್ಯಾಯ ಪಡೆಯಲು ಆಗುತ್ತಿರುವ ತೊಂದರೆಗಳನ್ನು ಮಾನ್ಯ ನ್ಯಾಯಾಲಯದ ಗಮನಕ್ಕೆ ತಂದರು. ಹುಸೈನಾರಾ ಖಾಟೂನ ಮತ್ತು ಇತರರು ವರ್ಸಸ್ ಬಿಹಾರ ಸರಕಾರ ಎಂಬ ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಪಿ.ಎನ್ .ಭಗವತಿಯವರು ನೀಡಿದ ಐತಿಹಾಸಿಕ ತೀರ್ಪು, ದೇಶದ ನ್ಯಾಯ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಈ ರಿಟ್ ಪ್ರಕರಣವನ್ನು ದಾಖಲಿಸಿದ ನ್ಯಾಯವಾದಿ ಪುಷ್ಪಾ ಕಪಿಲ್ ಹಿಂಗೋರಾಣಿ ‘ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ತಾಯಿ’ (mother of PIL) ಎಂದು ಪ್ರಸಿದ್ಧರಾದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಬಿಹಾರ ಸರಕಾರದ ಅಧಿಕಾರಿಗಳು, ಪೊಲೀಸ್ ವ್ಯವಸ್ಥೆ, ತನಿಖಾಧಿಕಾರಿಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಬಡವರು ಆರೋಪಿತರಾಗಿ ಜೈಲು ಸೇರಿದಾಗ, ಅವರ ವಿರುದ್ಧ ತನಿಖೆ ಮತ್ತು ಪ್ರಕರಣ ನಡೆಸಲು ಉತ್ತಮ ತರಬೇತು ಹೊಂದಿದ ಸುಶಿಕ್ಷಿತ-ಸಮರ್ಥ ಅಧಿಕಾರಿಗಳ ತಂಡವೇ ವ್ಯವಸ್ಥೆಯಲ್ಲಿದೆ.

ದಂಡ ಪ್ರಕ್ರಿಯಾ ಸಂಹಿತೆಯ ‌304ನೇ ಅಧಿನಿಯಮದ ಪ್ರಕಾರ ಸರಕಾರಿ ವೆಚ್ಚದಲ್ಲಿ ವಕೀಲರನ್ನು ನೇಮಿಸಿಕೊಳ್ಳುವ ಅವಕಾಶವಿದ್ದರೂ ಆಪಾದಿತರಿಗೆ ಅದರ ಮಾಹಿತಿ ಇರುವುದಿಲ್ಲ. ತನ್ನ ಮೇಲೆ ಮಾಡಲಾದ ಆರೋಪ ಸುಳ್ಳಾಗಿದ್ದರೂ ಬಡ ಆಪಾದಿತನು ಜಾಮೀನು ಪಡೆಯಲು ಅಥವಾ ಪ್ರಕರಣ ನಡೆಸಿ ಸುಳ್ಳೆಂದು ಸಾಬೀತುಪಡಿಸಲು ನ್ಯಾಯವಾದಿಗಳನ್ನು ನಿಯುಕ್ತಿಗೊಳಿಸುವ ಮತ್ತು ಜಾಮೀನು ಸಲುವಾಗಿನೀಡಬೇಕಾದ ಬಾಂಡ್ ಹಣದ ವೆಚ್ಚ ಭರಿಸುವ ಶಕ್ತಿಯಿಲ್ಲದೆ ಜೈಲಿನಲ್ಲಿ ಕೊಳೆಯುವಂತಾಗುತ್ತದೆ. ವರ್ಷಗಟ್ಟಲೆ ಜೈಲಿನಲ್ಲಿದ್ದು ಪ್ರಕರಣದ ವಿಚಾರಣೆ ಮುಗಿದಾಗ
ನಿರಪರಾಧಿಯೆಂದು ನಿರ್ಣಯವಾದರೆ, ಆತನಿಗೆ ಕಾಯಿದೆಬಾಹಿರವಾಗಿ ಜೈಲುಶಿಕ್ಷೆ ವಿಧಿಸಿದಂತಾಗುತ್ತದೆ. ಇದು ಅಮಾನವೀಯ ಹಾಗೂ ಸಂವಿಧಾನದ 21 ಮತ್ತು 39-ಎ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಅಶಿಕ್ಷಿತ ಆಪಾದಿತರಿಗೆ ಜಾಮೀನು ಪ್ರಕ್ರಿಯೆಯಂಥ ವ್ಯವಸ್ಥೆಯ ಕುರಿತು ಇರುವ ಅಜ್ಞಾನ ಹಾಗೂ ಕೆಲವು ಪೊಲೀಸರು ಮತ್ತು ನ್ಯಾಯವಾದಿ ಗಳಿಂದ ಆಗಬಹುದಾದ ಶೋಷಣೆಯಿಂದ ಈ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುತ್ತದೆ. ಸಂಕೀರ್ಣತೆಯಿಂದಾಗಿ ಕಾನೂನು ಮತ್ತು ನ್ಯಾಯ ಪ್ರಕ್ರಿಯೆಗಳು ಬಡವರಿಗೆ ಹಾಗೂ ಅಶಿಕ್ಷಿತರಿಗೆ ನಿಲುಕದಂತಾಗಿವೆ. ಕಾನೂನಿನ ಕೋಣೆಯ ಬೀಗವನ್ನು ಚಿನ್ನದ ಕೀಲಿಕೈ ಮೂಲಕವಷ್ಟೇ ತೆರೆಯಬಹುದಾದರೆ, ಕಾನೂನಿರುವುದು ಶ್ರೀಮಂತರ ರಕ್ಷಣೆಗಾಗಿ ಮಾತ್ರ ಎಂದಾಗುತ್ತದೆ; ಅದು ಬಡವರನ್ನು ಶಿಕ್ಷಿಸುತ್ತದೆಯೇ ಹೊರತು ಅವರಿಗೆ ಯಾವುದೇ ಪರಿಹಾರ ಅಥವಾ ಲಾಭ ದೊರಕಿಸಿಕೊಡುವುದಿಲ್ಲ ಎಂಬ ಗ್ರಹಿಕೆಯು ಬಡವರಲ್ಲಿ ಬೇರೂರುತ್ತದೆ.

ಇಂಥ ಸಂಕೀರ್ಣ ಅಂಶಗಳನ್ನು ಗಮನಿಸಿದ ನ್ಯಾಯಾಲಯ, “ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಕ್ಷಿಪ್ರ ನ್ಯಾಯದಾನವನ್ನು ಖಾತ್ರಿಪಡಿಸಲು ಸರಕಾರಗಳು ತನಿಖಾ ವ್ಯವಸ್ಥೆಯನ್ನು ಬಲಪಡಿಸುವ, ಹೆಚ್ಚುವರಿ ಕೋರ್ಟು ಗಳನ್ನು ಸ್ಥಾಪಿಸುವ, ಹೆಚ್ಚಿನ ನ್ಯಾಯಾಧೀಶರನ್ನು ನೇಮಿಸುವ ಮತ್ತಿತರ ಅವಶ್ಯ ಕ್ರಮಗಳಿಗೆ ಕೂಡಲೇ ಮುಂದಾಗಬೇಕು. ಅತ್ಯಂತ ಸಕ್ರಿಯ-ಸಮಗ್ರ ಕಾನೂನು ಸೇವೆ ಮತ್ತು ಕಾನೂನು ನೆರವಿನ ವ್ಯವಸ್ಥೆ ಯನ್ನು ಜಾರಿಗೊಳಿಸಬೇಕು. ಬಡ ಹಾಗೂ ದುರ್ಬಲವರ್ಗದ ಆಪಾದಿತರಿಗೆ ಉಚಿತ ಕಾನೂನು ನೆರವು ಮತ್ತು ನ್ಯಾಯವಾದಿಗಳ ಸೇವೆ ಒದಗಿಸಬೇಕು. ಇಂಥ ಸೌಲಭ್ಯಗಳು ಲಭ್ಯವಿರುವ ಕುರಿತು ಅವಶ್ಯ ಮಾಹಿತಿಯನ್ನು ವಿಚಾರಣಾಪೂರ್ವದಲ್ಲಿ ಆಪಾದಿತರಿಗೆ ಒದಗಿಸಬೇಕು” ಎಂದು ಆದೇಶಿಸಿತು.

ನಾಲ್ಕು ಹಂತಗಳಲ್ಲಿ ಪ್ರತ್ಯೇಕ ಆದೇಶಗಳನ್ನು ನೀಡಿದ ನ್ಯಾಯಾಲಯ, ಪ್ರಕರಣದಲ್ಲಿ ಹೆಸರಿಸಲಾದ ಎಲ್ಲ ವಿಚಾರಣಾದೀನ ಕೈದಿಗಳನ್ನು ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನಿನ ಮೇಲೆ ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿತು. ಇದರ ಪರಿಣಾಮವಾಗಿ ದೇಶಾದ್ಯಂತದ ವಿವಿಧ ಜೈಲುಗಳಲ್ಲಿದ್ದ 40 ಸಾವಿರಕ್ಕೂ ಹೆಚ್ಚಿನ ವಿಚಾರಣಾದೀನ ಕೈದಿಗಳ ಬಿಡುಗಡೆಯಾಯಿತು. ದೇಶಾದ್ಯಂತ ಕಾನೂನು ಸೇವೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ 1987ರ ಕಾನೂನು ಸೇವೆ ಕಾಯಿದೆಯನ್ನು ಜಾರಿಗೊಳಿಸಲಾಯಿತು.

ಇದರನ್ವಯ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಜ್ಯ-ಜಿಲ್ಲೆ-ತಾಲೂಕು ಮಟ್ಟಗಳಲ್ಲಿ ಕೂಡ ಕಾನೂನು ಸೇವಾ ಪ್ರಾಽಕಾರ ಮತ್ತು ಸಮಿತಿಗಳನ್ನು ರಚಿಸಲಾಯಿತು. ಪ್ರಕರಣಗಳ ತ್ವರಿತ ವಿಚಾರಣೆ (speedy trial) ಆಪಾದಿತರ ಮೂಲಭೂತ ಹಕ್ಕು ಎಂಬುದು ಕೇವಲ ಪ್ರಾರಂಭಿಕ ತನಿಖೆ, ವಿಚಾರಣೆಗಳಿಗಷ್ಟೇ ಅಲ್ಲದೆ ತೀರ್ಪುಗಳ ಮರುಪರಿಶೀಲನೆ, ಮೇಲ್ಮನವಿಗಳಿಗೂ ಅನ್ವಯವಾಗುತ್ತದೆ.

ಅಪರಾಧ ನಿರ್ಣಯದ ಹಿಂದಿನ ಬಂಧನ ಅಥವಾ ರಿಮಾಂಡ್ ಆದಷ್ಟು ಕಡಿಮೆ ಅವಽಗೆ ಸೀಮಿತವಾಗಬೇಕು. ಅಪರಾಧ ನಿರ್ಣಯದ ವಿಳಂಬ ತಡೆಯಲು ಸರ್ವೋಚ್ಚ ನ್ಯಾಯಾಲಯವು ಮುಂದಿನ ಪ್ರಕರಣಗಳಲ್ಲಿ ಅನೇಕ ನಿಯಮಾವಳಿಗಳನ್ನು ನೀಡಿತು (ಉದಾಹರಣೆಗೆ, ಎ.ಆರ್.
ಅಂತುಲೆ ವರ್ಸಸ್ ಆರ್.ಎಸ್.ನಾಯಕ್). ಈ ಎಲ್ಲ ಆದೇಶಗಳ ಹೊರತಾಗಿಯೂ ನ್ಯಾಯದಾನದಲ್ಲಿನ ವಿಳಂಬವು ಗಂಭೀರ ಸಮಸ್ಯೆಯಾಗಿಯೇ ಮುಂದುವರಿದಿದೆ. ಜತೆಗೆ ನ್ಯಾಯಪ್ರಕ್ರಿಯೆಯ ವೆಚ್ಚ ಕೂಡ. ಬಹುಶಃ ಬಿಹಾರದಲ್ಲಿ 1977ರಲ್ಲಿದ್ದ ಪರಿಸ್ಥಿತಿ ಕೆಲಮಟ್ಟಿಗೆ ಈಗಲೂ ಇರಬಹು ದೇನೋ. 2024ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶಾದ್ಯಂತದ ವಿವಿಧ ಕೋರ್ಟುಗಳಲ್ಲಿ 5.1 ಕೋಟಿ ಪ್ರಕರಣಗಳು ವಿಚಾರಣೆಯ ವಿವಿಧ ಹಂತಗಳಲ್ಲಿ ಬಾಕಿ ಯಿವೆ. ಈ ಪೈಕಿ 1..80 ಲಕ್ಷ ಪ್ರಕರಣಗಳು 30 ವರ್ಷಕ್ಕಿಂತ ಹಳೆಯವು. ಈಗಿರುವ ವ್ಯವಸ್ಥೆ ಮತ್ತು ವಿಲೇವಾರಿಯ
ಪ್ರಗತಿಯ ಗತಿಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಬಾಕಿಯಿರುವ ಇಷ್ಟೊಂದು ಪ್ರಕರಣಗಳ ವಿಲೇವಾರಿಗೆ ಸುಮಾರು 324 ವರ್ಷಗಳು ಬೇಕಾಗಬಹುದೆಂಬ ಅಂದಾಜಿದೆ. ಈ ಬಾಕಿಗೆ ಪ್ರತಿವರ್ಷ ಹೊಸ ಪ್ರಕರಣಗಳು ಸೇರಿಕೊಳ್ಳುತ್ತವೆ.

ಭಾರತದ ನ್ಯಾಯವ್ಯವಸ್ಥೆಗೆ ಇದೊಂದು ಭಾರಿ ಸವಾಲು ಮತ್ತು ನಾಗರಿಕರ ಹಿತದೃಷ್ಟಿಯಲ್ಲಿ ಗಂಭೀರ ವಿಷಯ. ನ್ಯಾಯಾಲಯಗಳಲ್ಲಿ ಪ್ರಕರಣ ಗಳು ಜಾಸ್ತಿಯಾಗಲು, ವಿಲೇವಾರಿ ವಿಳಂಬವಾಗಲು ಅನೇಕ ಕಾರಣಗಳಿವೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ನ್ಯಾಯಾಲಯಗಳ ಸಂಖ್ಯೆ ಕಡಿಮೆಯಿದ್ದು, ಹಲವೆಡೆ ಪ್ರಕರಣಗಳ ವಿಲೇವಾರಿಗೆ ಸಾಕಷ್ಟು ನ್ಯಾಯಾಧೀಶರ ಕೊರತೆಯಿದೆ. ಇರುವ ನ್ಯಾಯಾಲಯಗಳಲ್ಲಿ ಅನುದಾನ ಮತ್ತು ಮೂಲಸೌಲಭ್ಯಗಳ ಕೊರತೆಯಿಂದಾಗಿ ಅವುಗಳ ಕಾರ್ಯನಿರ್ವಹಣೆಗೆ ಅಡೆತಡೆಯಾಗುತ್ತಿದೆ.

ಮುಖ್ಯವಾಗಿ, ಕಾನೂನು ಮತ್ತು ನ್ಯಾಯಾಲಯ ವ್ಯವಸ್ಥೆಯ ದುರುಪಯೋಗದ ಕುರಿತೂ ಇಲ್ಲಿ ಉಲ್ಲೇಖಿಸಬೇಕು. ಕೆಲ ನ್ಯಾಯವಾದಿಗಳು ನಗಣ್ಯ
ವಿಷಯಗಳಿಗೂ ಪ್ರಕರಣ ದಾಖಲಿಸುವುದರಿಂದ ಕೋರ್ಟುಗಳ ಅಮೂಲ್ಯ ಸಮಯವು ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಿಗದಂತಾಗುತ್ತದೆ. ರಾಜಕಾರಣಿಗಳು, ನಟರು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳ ಪ್ರಕರಣಗಳು ಕೋರ್ಟುಗಳ ಹೆಚ್ಚಿನ ಸಮಯವನ್ನು ಕಬಳಿಸುತ್ತವೆ. ಪ್ರಕರಣಗಳಿಗೆ ಪದೇಪದೆ ಸಮಯ ಕೇಳುವಿಕೆ, ಅನವಶ್ಯಕ ವಾದ- ವಿವಾದ ಗಳು ಕೋರ್ಟುಗಳ ಅಮೂಲ್ಯ ಸಮಯವನ್ನು ಹಾಳುಮಾ ಡುವುದಲ್ಲದೆ, ಈ ಕಾರಣಕ್ಕೆ ಕಕ್ಷಿದಾರರು ವಕೀಲರಿಗೆ ಹೆಚ್ಚಿನ ಶುಲ್ಕ ನೀಡಬೇಕಾಗುತ್ತದೆ. ಪ್ರತಿವಾದಿಗಳು ಅಥವಾ ಆಪಾದಿತರೇ ಪ್ರಕರಣಗಳನ್ನು ಎಳೆದು
ವಿಳಂಬಿಸುತ್ತಾರೆ ಎಂಬ ಆರೋಪವೂ ಇದೆ. ಹೆಚ್ಚು ಹಣ ಕೀಳಲು ಕೂಡ ವಕೀಲರು ಪ್ರಕರಣಗಳ ಮುಂದೂಡಿಕೆಗೆ ಯತ್ನಿಸುತ್ತಾರೆ ಎಂಬ ಅಭಿಪ್ರಾ
ಯವಿದೆ. ಸಾಕಷ್ಟು ಪ್ರಕರಣಗಳಲ್ಲಿ ಸರಕಾರವೇ ಪ್ರತಿವಾದಿ; ಅಂಥ ಸಮಸ್ಯೆ/ಪ್ರಕರಣಗಳ ವಿಷಯದಲ್ಲಿ ಸರಕಾರ ನ್ಯಾಯಯುತವಾಗಿ ಸ್ಪಂದಿಸಿ ದರೆ ಕ್ಷಿಪ್ರ ವಿಲೇವಾರಿ ಸಾಧ್ಯವಾಗುತ್ತದೆ.

ಇಂಥ ಅನೇಕ ಕೊರತೆಗಳು ಮತ್ತು ವ್ಯವಸ್ಥೆಯ ದೋಷಗಳನ್ನು ಸರಿಪಡಿಸಿ ನ್ಯಾಯದಾನ ಪ್ರಕ್ರಿಯೆಯನ್ನು ಸಬಲಗೊಳಿಸಬೇಕಾದ್ದು ಸರಕಾರಗಳ ಜವಾಬ್ದಾರಿ. ತ್ವರಿತ ನ್ಯಾಯದಾನವು, ಕೋರ್ಟಿನ ಮೊರೆಹೋಗುವ ಎಲ್ಲ ನಾಗರಿಕರ ಹಕ್ಕು. ನ್ಯಾಯದಾನದಲ್ಲಿ ವಿಳಂಬವಾದರೆ ನ್ಯಾಯ ನಿರಾಕರಣೆಯೇ ಆಗುತ್ತದೆ (justice delayed is justice denied ) ಎಂಬುದು ಸರ್ವತ್ರ ಸತ್ಯ.

ಪ್ರಕರಣ ವಿಳಂಬವಾದಂತೆಲ್ಲ ಸಾಕ್ಷಿಗಳ ಅಲಭ್ಯತೆ, ಸಾವು, ಕಣ್ಮರೆಯಾಗುವಿಕೆ, ಸಾಕ್ಷ್ಯ ತಿರುಚುವಿಕೆ ಮುಂತಾದವಕ್ಕೆ ಅವಕಾಶವಾಗಿ ನಿರ್ಣಯ ಗಳು ಏರುಪೇರಾಗುವ ಸಾಧ್ಯತೆ ಹೆಚ್ಚು. ಅಪರಾಧಿಗಳಿಗೆ ತ್ವರಿತ ಶಿಕ್ಷೆ ನೀಡುವುದು, ಅಪರಾಧ ನಿಯಂತ್ರಣಕ್ಕೂ ಅವಶ್ಯಕ ಎಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ನ್ಯಾಯವಾದಿಗಳು, ನ್ಯಾಯಾಲಯಗಳು, ಪೊಲೀಸರು, ಅಧಿಕಾರಿಗಳು ಮತ್ತು ಕಾಯಿದೆ ರೂಪಿಸ ಬೇಕಾದ ಸಂಸದರು-ಶಾಸಕರು ಪ್ರಾಮಾಣಿಕವಾಗಿ ಯತ್ನಿಸಬೇಕಿದೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)

ಇದನ್ನೂ ಓದಿ: Thimmanna Bhagwat Column: ಗುರಾಣಿಯನ್ನು ಅಸ್ತ್ರವಾಗಿ ಬಳಸುವುದು ಸಲ್ಲ