Saturday, 23rd November 2024

Dr Sadhanashree Column: ಬಲವೃದ್ಧಿಗಾಗಿ ಸೇವಿಸಿ ಷಡ್ರಸ ಭೋಜನ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ಮನೆಯಮ್ಮೆ ಹಬ್ಬದ ವಾತಾವರಣ. ಅಜ್ಜಿಯ ನೇತೃತ್ವದಲ್ಲಿ ಹಬ್ಬದ ತಯಾರಿ ನಡೆದಿತ್ತು. ಹಬ್ಬದ ಹಿಂದಿನ ದಿನ ಮನೆಯನ್ನು ಸಜ್ಜು ಗೊಳಿಸಿ, ಪೂಜಾ ಸಾಮಗ್ರಿಗಳನ್ನು ಜೋಡಿಸಿ, ಮಂಟಪವನ್ನು ಕಟ್ಟಿ, ಹಣ್ಣು-ಹೂವು ಅಣಿಮಾಡಿಟ್ಟು ಎಲ್ಲರೂ ಭೋಜನಕ್ಕೆ ಕುಳಿತೆವು.

ಭೋಜನದ ನಂತರ ಒಂದು ಮುಖ್ಯವಾದ ಚರ್ಚೆ ಪ್ರಾರಂಭವಾಯಿತು. ಅದೇನಪ್ಪದರೆ, ನಾಳಿನ ಹಬ್ಬದ ಅಡುಗೆಯ ನಿರ್ಧಾರ.
ನಾವೆಲ್ಲರೂ ಮನಬಂದಂತೆ ನಮ್ಮಿಷ್ಟದ ತಿಂಡಿ-ತಿನಿಸುಗಳ ಪಟ್ಟಿಯನ್ನು ಅಜ್ಜಿಯ ಮುಂದಿಟ್ಟೆವು. ಅಜ್ಜಿ ಅವನ್ನು ಒಂದೊಂದಾಗಿ
ಪರಿಶೀಲಿಸಿ, “ಮಕ್ಕಳೇ, ಹಬ್ಬದಡುಗೆ ಮಾಡುವಾಗ 6 ರಸಗಳಿಂದ ಕೂಡಿರುವ ಖಾದ್ಯಗಳನ್ನು ತಯಾರಿಸಬೇಕೇ ಹೊರತು, ಯಾವು
ದೋ ಒಂದು ಅಥವಾ ಎರಡು ರಸಪ್ರಧಾನವಾದ ಆಹಾರವನ್ನಲ್ಲ. ಹಾಗೆ ಮಾಡಿದಾಗ ಮಾತ್ರ ಹಬ್ಬದ ಅಡುಗೆ ಸಾರ್ಥಕ” ಎಂದರು.

ಈ ಮಾತು ನನ್ನ ನೆನಪಿನಲ್ಲಿ ಆಳವಾಗಿ ಕುಳಿತಿತ್ತು. ಅಜ್ಜಿ ಯಾಕೆ 6 ರಸಗಳಿಗೆ ಅಷ್ಟೊಂದು ಮಹತ್ವ ನೀಡುತ್ತಿದ್ದರು ಎನ್ನುವ ಪ್ರಶ್ನೆ ನನ್ನಲ್ಲಿ ಸುಳಿಯುತ್ತಿತ್ತು. ಅಜ್ಜಿಯನ್ನು ಈ ಕುರಿತು ಕೇಳಿದಾಗ ಸಿಕ್ಕಿದ “ಅದು ಮನೆಯ ಸಂಪ್ರದಾಯ” ಎಂಬ ಉತ್ತರ ನನಗೆ ಸಂಪೂರ್ಣವಾಗಿ ಒಪ್ಪಿಗೆ
ಆಗಿರಲಿಲ್ಲ. ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಉತ್ತರ ಸಿಕ್ಕಿದ್ದು ನಾನು ಆಯುರ್ವೇದ ಶಾಸ್ತ್ರದ ಅಧ್ಯಯನಕ್ಕೆ ತೊಡಗಿದಾಗ.

ಆಯುರ್ವೇದದ ಮುಖ್ಯವಾದ ಗ್ರಂಥ ‘ಚರಕ ಸಂಹಿತಾ’. ಇದರಲ್ಲಿ ‘ಅಗ್ರ ಪ್ರಕರಣ’ ಎಂಬ ಒಂದು ಭಾಗವಿದೆ. ಇದು ಜಗತ್ತಿನ ಎಲ್ಲಾ
ವಿಷಯಗಳಲ್ಲೂ ಅತ್ಯಂತ ಪ್ರಶಸ್ತವಾದ ಅಥವಾ ಹೀನವಾದ ವಸ್ತುಗಳ ಪಟ್ಟಿ. ಉದಾಹರಣೆಗೆ, ಇದರ ಪ್ರಕಾರ ನಮ್ಮ ದೈಹಿಕ-ಮಾನಸಿಕ ಶ್ರಮವನ್ನು ನೀಗಿಸುವ ವಸ್ತುಗಳಲ್ಲಿ ಸ್ನಾನವು ಶ್ರೇಷ್ಠವಾದದ್ದು. ಹಾಗೆಯೇ, ‘ವಿಷಾದ’ವು ರೋಗವನ್ನು ವರ್ಧಿಸುವ ವಸ್ತುಗಳಲ್ಲಿ ಪ್ರಮುಖವಾದದ್ದು.

ಇದೇ ಪಟ್ಟಿಯಲ್ಲಿ ‘ರಸ’ಗಳ ವಿಚಾರವನ್ನೂ ಹೇಳಿದ್ದಾರೆ. ‘ಸರ್ವರಸಾಭ್ಯಾಸೋ ಬಲಕರಾಣಾಂ ಶ್ರೇಷ್ಠಮ’ ಅಂದರೆ ನಿತ್ಯವೂ 6 ರಸಗಳ ಸೇವನೆಯು ನಮ್ಮ ಬಲ ಹೆಚ್ಚಿಸುವ ಅಭ್ಯಾಸಗಳಲ್ಲಿ ಶ್ರೇಷ್ಠವಾದದ್ದು. ಹಾಗೆಯೇ, ‘ಏಕರಸಾಭ್ಯಾಸೋ ದೌರ್ಬಲ್ಯಕರಾಣಂ ಶ್ರೇಷ್ಠಮ್’ ಅಂದರೆ ಯಾವುದೋ ಒಂದು ರಸ/ ರುಚಿಯನ್ನು ಹೆಚ್ಚಾಗಿ ಸೇವಿಸುವುದು ನಮ್ಮ ಶರೀರದ ಬಲವನ್ನು ಕುಗ್ಗಿಸುವುದರಲ್ಲಿ ಸಂಶಯವಿಲ್ಲ ಎಂದರ್ಥ. ಹಾಗಾದರೆ, ನಮ್ಮ ಸ್ವಾಸ್ಥ್ಯಸ್ಥಾಪನೆ, ಆರೋಗ್ಯ ರಕ್ಷಣೆ ಮತ್ತು ವಿಶೇಷವಾಗಿ ಬಲ ವೃದ್ಧಿಯಲ್ಲಿ ಷಡ್ರಸಗಳ ಪಾತ್ರವೇನು ಎಂಬುದನ್ನು ಅರಿಯೋಣ.

‘ರಸ’ವೆಂದರೆ ರುಚಿ. ವಿಶೇಷವಾಗಿ, ಇಂದು ನಾನು ಚರ್ಚಿಸುತ್ತಿರುವುದು ನಾವು ಸೇವಿಸುವ ಆಹಾರಗಳ ರುಚಿಗಳ ಬಗ್ಗೆ. ಆಯುರ್ವೇದದ
ಪ್ರಕಾರ ಆಹಾರದಲ್ಲಿ 6 ಬಗೆಯ ರುಚಿಗಳನ್ನು ಗುರುತಿಸಬಹುದು. ಮಧುರ ರಸ- ಸಿಹಿ ರುಚಿ, ಆಮ್ಲರಸ- ಹುಳಿ ರುಚಿ, ಲವಣ ರಸ- ಉಪ್ಪು
ರುಚಿ, ಕಟು ರಸ- ಖಾರ ರುಚಿ, ತಿಕ್ತ ರಸ- ಕಹಿ ರುಚಿ ಮತ್ತು ಕಷಾಯ ರಸ- ಒಗರು ರುಚಿ. ಆಯುರ್ವೇದದ ಪ್ರಕಾರ ‘ಸಮತೋಲನ
ಆಹಾರ’ವೆಂದರೆ 6 ರಸಗಳ ಸರಿಯಾದ ಸಂಯೋಗ. ಇವು ದೇಹದ ಪೋಷಣೆ, ಬೆಳವಣಿಗೆ ಮತ್ತು ಬಲಕ್ಕೆ ಕಾರಣ. ಆಯುರ್ವೇದವು ಪ್ರತಿಯೊಂದು ರಸದ ಗುಣ, ಪ್ರಯೋಜನ, ಅತಿಯಾಗಿ ಬಳಸಿದಾಗ ಆಗುವ ತೊಂದರೆಗಳನ್ನು ಸವಿಸ್ತಾರವಾಗಿ ಉಲ್ಲೇಖಿಸಿದೆ.

ಇದನ್ನರಿತು ಆಹಾರದಲ್ಲಿ ಈ 6 ರಸಗಳನ್ನು ಬಳಸಿಕೊಂಡರೆ ನಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಬಹುದು. ಹಾಗಾಗಿ ಮೊದಲಿಗೆ ಈ 6 ರಸಗಳ ಸಾಮಾನ್ಯ ಗುಣಗಳನ್ನು ಅರಿಯೋಣ.

1. ಮಧುರ ರಸ- ಸಿಹಿ ರುಚಿಯನ್ನು ಇಷ್ಟಪಡದವರೇ ಇಲ್ಲ. ಇದು ಸರ್ವರಿಗೂ ಪ್ರಿಯವಾದ ರಸ. ನಮ್ಮ ಸರ್ವತೋಮುಖ ಬೆಳವಣಿಗೆಗೆ ಸಿಹಿರುಚಿ ಬೇಕೇ ಬೇಕು. ಇದು ನಾಲಿಗೆಗೆ ರುಚಿಸುವುದರ ಜತೆಗೆ ಇಂದ್ರಿಯಗಳಿಗೆ ಪುಷ್ಟಿ ನೀಡುತ್ತದೆ. ದೇಹದ ಪ್ರತಿಯೊಂದು ಜೀವಕೋಶಕ್ಕೂ ಚೈತನ್ಯವನ್ನು ತುಂಬುತ್ತದೆ. ದೇಹದ ಎಲ್ಲಾ ಧಾತುಗಳಿಗೆ ಪೋಷಣೆ ನೀಡಿ, ಅವು ತಮ್ಮ ಕಾರ್ಯ ನಿರ್ವಹಿಸಲು ಶಕ್ತಿ ನೀಡುತ್ತದೆ. ಹಾಗೆಯೇ,
ಮನಸ್ಸಿಗೆ ಆನಂದವನ್ನು ನೀಡುತ್ತದೆ. ಆದರೆ ಸಿಹಿಯನ್ನೇ ಅಥವಾ ಸಿಹಿಪ್ರಧಾನ ಆಹಾರವನ್ನೇ ಹೆಚ್ಚಾಗಿ ಸೇವಿಸುವುದರಿಂದ ಬೊಜ್ಜು,
ಪ್ರಮೇಹ, ಹೃದಯದ ತೊಂದರೆ, ಆಲಸ್ಯ, ಚರ್ಮದ ತೊಂದರೆಗಳು ಕಾಣಿಸಿಕೊಳ್ಳಬಹುದು.

ಸಿಹಿಪ್ರಧಾನ ಆಹಾರಗಳೆಂದರೆ, ಏಕದಳ ಧಾನ್ಯಗಳು, ಅಕ್ಕಿ, ಗೋಧಿ, ಬಾರ್ಲಿ, ಬೇಳೆ, ಹಾಲು, ತುಪ್ಪ, ಹಣ್ಣುಗಳು, ಮಾಂಸಾಹಾರಗಳಾದ ಮೀನು, ಮೊಟ್ಟೆ ಇತ್ಯಾದಿ.

ಆಯುರ್ವೇದದ ಪ್ರಕಾರ ನಮ್ಮ ಆಹಾರದಲ್ಲಿ ಸಿಹಿಯ ಪ್ರಮಾಣ ಅಧಿಕವಾಗಿರಬೇಕು. ಸಿಹಿ ಪದಾರ್ಥಗಳನ್ನು ಭೋಜನದಲ್ಲಿ ಮೊದಲ ಭಾಗ ವಾಗಿಯೇ ಸೇವಿಸಬೇಕು. ಆದರೆ ನೆನಪಿಡಿ- ಸಿಹಿರಸದ ಪದಾರ್ಥವು ಜೀರ್ಣಕ್ಕೆ ಜಡ. ಸಾಕಷ್ಟು ಶಾರೀರಿಕ ಶ್ರಮ ಮಾಡಿ ನಂತರ ಮಧುರ ರಸ ಪ್ರಧಾನ ಭೋಜನವನ್ನು ಆನಂದಿಸಿ.

2. ಆಮ್ಲ ರಸ- ಅಂದರೆ ಹುಳಿ ರುಚಿ. ಇದು ಅಗ್ನಿಯನ್ನು ಉತ್ತೇಜಿಸುತ್ತದೆ, ಮಲ- ಮೂತ್ರಗಳ ವಿಸರ್ಜನೆಗೆ ನೆರವಾಗುತ್ತದೆ. ಇದು ಹೃದಯಕ್ಕೆ ಪೋಷಣೆ ನೀಡಿ ನಾಲಿಗೆಯ ರುಚಿಗ್ರಹಣವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹುಳಿ ರುಚಿ ಪ್ರಧಾನ ಆಹಾರವು ದೇಹದಲ್ಲಿನ ಕಫ, ಪಿತ್ತ ಮತ್ತು ರಕ್ತವನ್ನು ಹೆಚ್ಚಿಸುತ್ತದೆ. ಆದರೆ ಅತಿಯಾಗಿ ಹುಳಿ ರುಚಿಯನ್ನು ಸೇವಿಸಿದರೆ ಅತಿ ಬಾಯಾರಿಕೆ, ಪದೇಪದೆ ಜ್ವರ, ಚರ್ಮದ ತೊಂದರೆ, ಪ್ರಮೇಹ, ಚರ್ಮ ಸುಕ್ಕುಗಟ್ಟುವುದು, ಕೂದಲು ಬೇಗ ಬೆಳ್ಳಗಾಗುವುದು, ಕಣ್ಣಿನ ದೃಷ್ಟಿ ಕುಂದುವುದು ಮೊದಲಾದ ತೊಂದರೆಗಳಿಗೆ ಅದು ಕಾರಣವಾಗಬಹುದು. ಕ್ರಮೇಣ ಶರೀರವು ಬಲ ಕಳೆದುಕೊಂಡು ಮಾಂಸಪೇಶಿಗಳು ಶಿಥಿಲವಾಗುತ್ತವೆ. ಹುಳಿ ರುಚಿಯ ಆಹಾರವನ್ನು ಸಿಹಿಗಿಂತ ಕಡಿಮೆ ಪ್ರಮಾಣದಲ್ಲಿ ಬಳಸಬೇಕು, ಸಿಹಿಯ ನಂತರ ಸೇವಿಸಬೇಕು. ಇದು ಬೇರೆ ರುಚಿಪ್ರಧಾನ ಆಹಾರದ ಜತೆಗೆ ಇರಬೇಕೇ ಹೊರತು ಹುಳಿ ರುಚಿಯ ಆಹಾರವನ್ನೇ ಪ್ರತ್ಯೇಕವಾಗಿ ಸೇವಿಸುವುದು ಒಳ್ಳೆಯದಲ್ಲ. ಹುಳಿಯ ಆಹಾರ ದ್ರವ್ಯಗಳೆಂದರೆ ನೆಲ್ಲಿಕಾಯಿ, ದಾಳಿಂಬೆ, ಹುಣಸೆಹಣ್ಣು, ನಿಂಬೆಹಣ್ಣು, ಮಾವಿನಕಾಯಿ, ಟೊಮೇಟೊ ಇತ್ಯಾದಿ.

3. ಲವಣ ರಸ- ಅಂದರೆ ಉಪ್ಪು ರುಚಿ. ಇದು ರುಚಿಯ ಅತ್ಯಂತ ಶ್ರೇಷ್ಠ ರುಚಿ. ಉಪ್ಪು, ಹಸಿವಿನ ಶಕ್ತಿಯನ್ನು ಹೆಚ್ಚಿಸಿ ಆಹಾರವು
ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ, ದೇಹದಲ್ಲಿನ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಆದರೆ, ಅಗತ್ಯಕ್ಕಿಂತ
ಹೆಚ್ಚು ಉಪ್ಪನ್ನು ಬಳಸಿದಾಗ ಅತಿ ಬಾಯಾರಿಕೆ, ಸುಸ್ತು, ನಿಶ್ಶಕ್ತಿ, ಉರಿಯೂತ, ಚರ್ಮದ ತೊಂದರೆಗಳು ಉತ್ಪತ್ತಿಯಾಗುತ್ತವೆ, ಮುಪ್ಪಿನ
ಲಕ್ಷಣಗಳು ಬೇಗ ಶುರುವಾಗುತ್ತವೆ, ರಕ್ತ ದುಷ್ಟಿಯಾಗಿ ಸಂಧಿಗಳ ತೊಂದರೆಗಳು ಪ್ರಾರಂಭವಾಗುತ್ತವೆ. ಆಹಾರದಲ್ಲಿ ಉಪ್ಪಿನ
ಪ್ರಮಾಣವು ಸಿಹಿ ಮತ್ತು ಹುಳಿಯ ಪ್ರಮಾಣಕ್ಕಿಂತ ಕಡಿಮೆ ಇರಬೇಕು. ನಿತ್ಯಬಳಕೆಗೆ ಸೈಂಧವ ಅಥವಾ ಕಲ್ಲುಪ್ಪು ಯೋಗ್ಯ.

4. ಕಟು ರಸ- ಅಂದರೆ ಖಾರ ರುಚಿ. ಸಿಹಿಯು ಎಳೆಯ ಮಕ್ಕಳಿಗೆ ಎಷ್ಟು ಪ್ರಿಯವೋ, ಅದೇ ರೀತಿ ಖಾರ ರುಚಿಯು ದೊಡ್ಡವರಿಗೆ
ಬಲುಪ್ರಿಯ. ನಿಯಮಿತ ಬಳಕೆಯಿಂದಾಗುವ ಪ್ರಯೋಜನಗಳೆಂದರೆ- ಖಾರವು ಹಸಿವಿನ ಶಕ್ತಿ ಯನ್ನು ಹೆಚ್ಚಿಸಿ ಆಹಾರವು ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ, ಎಲ್ಲಾ ನಾಳಗಳಲ್ಲಿನ ಅಡೆತಡೆಗಳನ್ನು ನಿವಾರಿಸಿ ಸಂಚಾರವನ್ನು ಸರಿಯಾಗಿಸುತ್ತದೆ. ಆದರೆ, ಅತಿಯಾದ/ಅನಿಯಮಿತ ಸೇವನೆಯಿಂದ ಬಾಯಿಹುಣ್ಣು, ಎದೆ ಉರಿ, ಮೂತ್ರ ಉರಿ, ಕಣ್ಣುರಿ,
ನಿದ್ರಾಹೀನತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಟುಪ್ರಧಾನ ಆಹಾರ ಸೇವನೆಯು ದೇಹವನ್ನು ದುರ್ಬಲಗೊಳಸುತ್ತದೆ.

ಇದರಿಂದ ದೌರ್ಬಲ್ಯ, ಸುಸ್ತು ಆಗುತ್ತದೆ, ವೀರ್ಯಾಣುವಿನ ಪ್ರಮಾಣ ಕಡಿಮೆಯಾಗಿ ಸಂತಾನೋತ್ಪತ್ತಿಗೆ ತೊಂದರೆ ಆಗಬಹುದು. ರಕ್ತ ಪಿತ್ತಗಳನ್ನು ಕೆಡಿಸಿ ತಲೆ ತಿರುಗುವಿಕೆ, ಮೂರ್ಛೆರೋಗ, ಕಣ್ಣು ಕತ್ತಲೆಗಳನ್ನು ನೀಡುತ್ತದೆ. ಕಟಿಶೂಲ, ಸಂಧಿಶೂಲವನ್ನು ಹೆಚ್ಚಿಸುತ್ತದೆ.

ಕಟುಪ್ರಧಾನ ಆಹಾರಗಳೆಂದರೆ ಶುಂಠಿ, ಕಾಳು ಮೆಣಸು, ಹಿಪ್ಪಲಿ, ಜೀರಿಗೆ, ನುಗ್ಗೆ, ಮೆಣಸಿನ ಕಾಯಿ, ಬೆಳ್ಳುಳ್ಳಿ, ಹಿಂಗು ಇತ್ಯಾದಿ.

5. ತಿಕ್ತ ರಸ- ಅಂದರೆ ಕಹಿ ರುಚಿ. ‘ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎನ್ನುವಂತೆ ಕಹಿಯು ಮನಸ್ಸಿಗೆ ಹಿಡಿಸದ ರುಚಿ. ಆದರೆ
ಆರೋಗ್ಯ ವನ್ನು ಹೆಚ್ಚಿಸುತ್ತದೆ. ಕಹಿಯು ನಾಲಿಗೆಗೆ ರುಚಿಯನ್ನು ಚೋದಿಸುವ ಗುಣವುಳ್ಳದ್ದು. ಜೀರ್ಣಕ್ರಿಯೆಗೆ ಸಹಕಾರಿ. ಆದರೆ, ಕಹಿಯ ಪ್ರಮಾಣವು ಆಹಾರದಲ್ಲಿ ಬಹಳ ಕಡಿಮೆ ಇರಬೇಕು. ಇದು ಪಿತ್ತವನ್ನು ಶಮನಗೊಳಿಸಲು ನೆರವಾಗುತ್ತದೆ. ಕಫದ ವಿಕಾರಗಳನ್ನು ಸರಿದೂಗಿಸುತ್ತದೆ. ಕಫ ಪಿತ್ತ ದೋಷಗಳು ಹೆಚ್ಚಾಗಿ ಉಂಟಾಗುವ ಚರ್ಮರೋಗಗಳನ್ನು ಗುಣಪಡಿಸುತ್ತದೆ.

ಕ್ರಿಮಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಜ್ವರವನ್ನು ಶಮನಗೊಳಿಸುತ್ತದೆ. ಸಕ್ಕರೆ ಕಾಯಿಲೆ ಮತ್ತು ದೇಹತೂಕದ ನಿಯಂತ್ರಣಕ್ಕೆ ಇದು
ಸಹಕಾರಿ. ಹಾಗಂತ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ. ದೇಹದಲ್ಲಿನ ಸಪ್ತಧಾತುಗಳು ಕ್ರಮೇಣ ಒಣಗಿ ಶರೀರ
ತೆಳ್ಳಗಾಗುತ್ತದೆ. ಸಂದುನೋವು, ತಲೆನೋವು, ಪಾರ್ಶ್ವವಾಯು, ಹೃದಯ ಸಂಕುಚನ ಮತ್ತು ಇತರ ವಾತರೋಗಗಳು ಕಾಣಿಸಿಕೊಳ್ಳಬಹುದು.
ಕಹಿ ರುಚಿಯ ಪದಾರ್ಥಗಳೆಂದರೆ ಕಹಿಬೇವು, ಮೆಂತ್ಯ, ಹಾಗಲಕಾಯಿ ಇತ್ಯಾದಿ. ಕಹಿ ರುಚಿಯನ್ನು ಮಧುರ, ಅಮ್ಲ, ಲವಣ, ಕಟು
ರಸಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

6. ಕಷಾಯ ರಸ- ಅಂದರೆ ಒಗರು ರುಚಿ. ಇದು ಊಟದ ಕೊನೆಗೆ ಇರಬೇಕಾದ ರಸ. ಇದು ಶರೀರವನ್ನು ದೃಢಗೊಳಿಸುತ್ತದೆ.
ರಕ್ತವನ್ನು ಶುದ್ಧಿಗೊಳಿಸಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಗಾಯಗಳನ್ನು ಗುಣಪಡಿಸುತ್ತದೆ. ಶರೀರದಲ್ಲಿನ ದ್ರವಾಂಶ
ಮತ್ತು ಕೊಬ್ಬಿನಂಶವನ್ನು ನಿಯಂತ್ರಿಸಿ ಪ್ರಮೇಹ ಸ್ಥೌಲ್ಯಗಳಲ್ಲಿ ಪಥ್ಯವಾಗುತ್ತದೆ, ಅತಿಯಾದ ಮಲದ ಹರಿವನ್ನು ತಡೆಯುತ್ತದೆ. ಆದರೆ,
ಒಗರು ರುಚಿಯ ಅತಿ ಬಳಕೆಯಿಂದ ಹೊಟ್ಟೆಯುಬ್ಬರ, ಮಲಬದ್ಧತೆ ಉಂಟಾಗುತ್ತದೆ. ಇದು ದೇಹವನ್ನು ಒಣಗಿಸಿ ಶರೀರದ ಆಂತರಿಕ
ಪದರಗಳಲ್ಲಿ ರೂಕ್ಷತೆಯನ್ನು ಉಂಟುಮಾಡುತ್ತದೆ. ದೇಹದಲ್ಲಿನ ಸ್ನಿಗ್ಧಾಂಶವನ್ನು ತಗ್ಗಿಸಿ, ಎಲ್ಲಾ ಧಾತುಗಳ ಪೋಷಣೆಯನ್ನು
ಕುಗ್ಗಿಸುತ್ತದೆ. ದೇಹವನ್ನು ಕೃಶವಾಗಿಸುತ್ತದೆ.

ಶುಕ್ರ ಧಾತುಗಳ ತೊಂದರೆ ಮತ್ತು ಹೃದಯ- ವಿಕೃತಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಆಹಾರದಲ್ಲಿ ಇದರ ಪ್ರಮಾಣ ಅತ್ಯಂತ
ಅಲ್ಪವಾಗಿರಬೇಕು. ಒಗರು ರಸಪ್ರಧಾನ ಆಹಾರಗಳೆಂದರೆ, ನೇರಳೆ ಹಣ್ಣು, ತ್ರಿಶೂಲ, ಅರಿಶಿಣ, ಮಜ್ಜಿಗೆ, ಅಳಲೇಕಾಯಿ, ದಾಳಿಂಬೆ
ಸಿಪ್ಪೆ, ಧನಿಯಾ ಇತ್ಯಾದಿ. ಹೀಗೆ, ಪ್ರತಿಯೊಂದು ರಸಕ್ಕೂ ಆರೋಗ್ಯವನ್ನು ಸುಧಾರಿಸುವ ಗುಣಗಳಿವೆ, ಸ್ವಾಸ್ಥ್ಯ ಹಾಳುಮಾಡುವ ಸ್ವಭಾವವೂ ಇದೆ. ಆದ್ದರಿಂದ, ೬ ರಸಗಳನ್ನು ಅವುಗಳ ಗುಣ ಕರ್ಮಗಳ ಆಧಾರದಲ್ಲಿ ಆಹಾರದಲ್ಲಿ ಸಂಯೋಜಿಸಿಕೊಂಡಾಗ ಅವು ಶರೀರವೃದ್ಧಿ, ಬಲವೃದ್ದಿ ಮತ್ತು ಆಯುವೃದ್ಧಿಗೆ ಪೂರಕವಾಗುತ್ತವೆ. ಅಂದಹಾಗೆ, ನಾವು ಅಂದು ಹಬ್ಬಕ್ಕೆ ಮಾಡಿದ್ದ ಅಡುಗೆಯೆಂದರೆ- ಮಧುರಪ್ರಧಾನ ಪಾಯಸ, ಹಾಲು ಬಾಯಿ, ಬಿಸಿಯನ್ನ, ಆಮ್ಲಕ್ಕಾಗಿ ಪುನರ್ಪುಳಿ ಸಾರು, ನಿಂಬೆಕಾಯಿ ಚಿತ್ರಾನ್ನ, ಆಮ್ಲ-ಲವಣ ಪ್ರಧಾನವಾದ ಕೋಸಂಬರಿ, ಕಟುರಸ
ಪ್ರಧಾನವಾದ ಹುಳಿ, ಕಹಿಗಾಗಿ ಮೆಂತ್ಯ ಗೊಜ್ಜು, ಒಗರು ರಸಕ್ಕಾಗಿ ದಾಳಿಂಬೆ ಸಿಪ್ಪೆಯ ತಂಬುಳಿ. ಜತೆಗೆ ಹಸುವಿನ ತುಪ್ಪ, ಸ್ವಲ್ಪ ಸಂಡಿಗೆ,
ಹೀರಲು ಬಿಸಿನೀರು. ನಂತರ ಜೀರ್ಣಕಾರಿ ತಾಂಬೂಲ ಸೇವನೆಯ ಸೊಗಸು. ಇದೇ ಅಲ್ಲವೇ ದೇಹ-ಇಂದ್ರಿಯ-ಮನಗಳಿಗೆ ಮುದ
ನೀಡುವ ನಿಜವಾದ ಸಂತುಲಿತ ಆಹಾರ?!

ಇದನ್ನೂ ಓದಿ: DR Sadhana Sri ok