Saturday, 23rd November 2024

Prabhu Chawla Column: ಶುರುವಾಗಲಿದೆ ಏಕವ್ಯಕ್ತಿಯ ವಿರುದ್ಧ ʼಗಾಂಧಿ ತ್ರಿಮೂರ್ತಿʼಗಳ ಸಂಘರ್ಷ

ಪ್ರಭು ಪ್ರವರ

ಪ್ರಭು ಚಾವ್ಲಾ

ಸಂಖ್ಯಾಬಲಕ್ಕೇ ಇನ್ನಿಲ್ಲದ ಮಹತ್ವವಿರುವ ನಮ್ಮ ಸಂಸತ್ತಿನಲ್ಲಿ ಸದನದ ಎರಡೂ ಕಡೆಗಳಿಂದ ಹುಯಿಲು, ಬೊಬ್ಬೆ, ಅಪಸ್ವರಗಳು ಕೇಳಿ ಬರುವುದು ಸಾಮಾನ್ಯ. ಈ ಸದ್ದು ಸದನಕ್ಕೆ ಅಪರಿಚಿತವೇನಲ್ಲ. ಇದುವರೆಗೆ ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕಡೆಯಿಂದ ಇಂಥ ದನಿ ಕೇಳಿ ಬರುತ್ತಿದ್ದುದುಂಟು. ಈ ಸಲ ವಯನಾಡಿನ ಉಪಚುನಾವಣೆಯಲ್ಲಿ ಒಂದೊಮ್ಮೆ ಪ್ರಿಯಾಂಕಾ ಗಾಂಧಿಯವರೂ ಗೆದ್ದು ಲೋಕಸಭೆಯನ್ನು ಪ್ರವೇಶಿಸಿ ಬಿಟ್ಟರೆ, ಕಾಂಗ್ರೆಸ್‌ನ ಈ ಹುಯಿಲುಗಾರರ ಪಟ್ಟಿಗೆ ಅವರೂ ಸೇರಿಕೊಂಡಂತಾಗುತ್ತದೆ.

ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನ ಈ ‘ತ್ರಿಮೂರ್ತಿ’ಗಳು ತಮ್ಮ ನಿಷ್ಠಾವಂತ ಅನುಯಾಯಿಗಳನ್ನು ಮುನ್ನಡೆಸಲು ಅನುವಾದಂತಾಗುತ್ತದೆ. ಸಾಮ್ರಾಜ್ಯದ ಸ್ಥಾಪನೆಯಲ್ಲಿ ಒಂದಿಡೀ ಕುಟುಂಬವು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದು ಒಂದು ರಾಜಪ್ರಭುತ್ವ ದಲ್ಲೋ ಅಥವಾ ನಿರಂಕುಶಾಧಿಕಾರದ ವ್ಯವಸ್ಥೆಯಲ್ಲೋ ಸಾಮಾನ್ಯವಾಗಿ ಕಂಡುಬರುವ ಪರಿಪಾಠ. ಆದರೆ ಈ ಸಲ, ಈ ತ್ರಿಮೂರ್ತಿಗಳಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಏಕೈಕ ಪಾತ್ರವೆಂದರೆ- ಸಂಸತ್ತಿನಲ್ಲಿ ನರೇಂದ್ರ ಮೋದಿಯವರಿಗೆ ಮುಖಾಮುಖಿಯಾಗುವುದು, ವಾಗ್ದಾಳಿಗೆ ನಿಲ್ಲುವುದು.

ಕಾಂಗ್ರೆಸ್‌ನಲ್ಲಿ ಈಗಿರುವ, ಇದುವರೆಗೆ ಆಗಿ ಹೋಗಿರುವ ಸಂಸದರ ಬಳಗ ಸಾಕಷ್ಟು ದೊಡ್ಡದೇ ಇದೆ; ಆದರೆ, ಪಕ್ಷದ ರಾಜಕೀಯ ಮುಖವಾಣಿಯ ಮತ್ತು ಸೈದ್ಧಾಂತಿಕ ಆತ್ಮದ ವಿಷಯ ಬಂದಾಗ ಅಲ್ಲಿ ‘ಹಕ್ಕುದಾರರು’ ಎನಿಸಿಕೊಳ್ಳುವುದು ‘ಗಾಂಧಿ ಕುಟುಂಬಿಕರು’ ಮಾತ್ರವೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕಾಂಗ್ರೆಸ್ ಸಂಘಟನೆಯ ಶ್ರೇಣೀಕೃತ ವ್ಯವಸ್ಥೆಯೆಂಬುದು ಕೇವಲ ಸಾಂಕೇತಿಕವಾಗಿದ್ದು, ಮೇಲೆ ಉಲ್ಲೇಖಿಸಿರುವ ಮೂವರು
‘ಗಾಂಧಿ’ಗಳ ಮಾತುಗಳೇ ಇಲ್ಲಿ ಅಲಿಖಿತ ಕಾನೂನು ಆಗಿರುತ್ತದೆ, ಅಂತಿಮ ನಿರ್ಧಾರವಾಗಿರುತ್ತದೆ. ಹೀಗಾಗಿ, ಶಾಸಕಾಂಗದ ವಿಷಯದಲ್ಲಿ ಈ ಗಾಂಧಿತ್ರಯರು ನಿರ್ವಹಿಸಲು ಹೊರಟಿರುವ ಪಾತ್ರವು ಪ್ರಸ್ತುತ ಪಕ್ಷದ ಕಟ್ಟಾ ಅನುಯಾಯಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಗೆ ಗ್ರಾಸವಾಗಿಬಿಟ್ಟಿದೆ. ಪೂರ್ವ ನಿದರ್ಶನಗಳನ್ನು ಆಧರಿಸಿ ಹೇಳುವುದಾದರೆ, ಈ ತ್ರಿಮೂರ್ತಿಗಳ ಪೈಕಿಯ ಪ್ರತಿಯೊಬ್ಬ ‘ಗಾಂಧಿ’ಯೂ, ತಮ್ಮ ಪಾತ್ರ ಹಾಗೂ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನಿಸುವ ವಿಷಯದಲ್ಲಿ ನಿಸ್ಸಂದಿಗ್ಧವಾಗಿ ವರ್ತಿಸುತ್ತಾರೆ ಎಂಬುದು ಸ್ಪಷ್ಟ. ಒಬ್ಬೊಬ್ಬ ‘ಗಾಂಧಿ’ ಯನ್ನೂ ವಿಶ್ಲೇಷಿಸುತ್ತಾ ಹೋದಲ್ಲಿ ನಿಮಗಿದು ನಿಚ್ಚಳವಾದೀತು.

ಸೋನಿಯಾ ಗಾಂಧಿ: ‘ಮೌನ’ ಎಂಬುದು ಇವರ ಬತ್ತಳಿಕೆಯಲ್ಲಿನ ಅತ್ಯಂತ ಪ್ರಬಲ ಅಸ್ತ್ರ; ಇದು ಅವರ ಕೌಟುಂಬಿಕ ಜೀವನದಲ್ಲಾದ ಒಂದಷ್ಟು ದುರಂತಗಳು ಮತ್ತು ಸುದೀರ್ಘ ರಾಜಕೀಯ ಜೀವನದ ಫಲಶ್ರುತಿ ಎಂದರೆ ತಪ್ಪಾಗದು.

ದಿನನಿತ್ಯದ ರಾಜಕೀಯ ಜಂಜಾಟಗಳಿಂದ ದೂರವುಳಿಯುವುದು ಇವರ ಅಭ್ಯಾಸ. ಬರೋಬ್ಬರಿ 26 ವರ್ಷಗಳಿಂದ ರಾಜಕೀಯವಾಗಿ ಸಕ್ರಿಯರಾಗಿರುವ 77ರ ಹರೆಯದ ಈ ‘ಕಾಂಗ್ರೆಸ್ ಅಧಿನಾಯಕಿ’, ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿರುದ್ಧ ತಮ್ಮನ್ನು ‘ಜೋನ್ ಆ- ಆರ್ಕ್’ಳ ರೀತಿಯಲ್ಲೇ ಬಿಂಬಿಸಿಕೊಂಡು ಬಂದವರು. ಪರಸ್ಪರ ವೈಯಕ್ತಿಕ ಚಾರಿತ್ರ್ಯವಧೆಗೆ ಇಳಿಯುವ ಕಾಂಗ್ರೆಸ್‌ನ ಇತರ ನಾಯಕರ ಹಾದಿಯನ್ನು ಅನುಸರಿಸದೆ, ಬಿಜೆಪಿಯೇತರ ಪಕ್ಷಗಳನ್ನೆಲ್ಲ ಒಂದೆಡೆ ಹಿಡಿದಿಟ್ಟುಕೊಳ್ಳುವುದನ್ನು ಇವರು ಬಲ್ಲರು. ಪಶ್ಚಿಮ ಬಂಗಾಳ,
ದೆಹಲಿ ಮತ್ತು ಕೇರಳ ರಾಜ್ಯಗಳಲ್ಲಿ ಸ್ಥಳೀಯ ನಾಯಕರು ಕ್ರಮವಾಗಿ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮತ್ತು ಪಿಣರಾಯಿ ವಿಜಯನ್‌ರಂಥ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರೂ, ಇಂಥ ವೈಯಕ್ತಿಕ ಕೆಸರೆರಚಾಟ ನಡೆಸುವುದು ಸೋನಿಯಾರ ಚಾಳಿಯಲ್ಲ.

ಈಕೆಯಲ್ಲಿ ಕೆನೆಗಟ್ಟಿರುವ ತಟಸ್ಥತೆ ಮತ್ತು ಸಮಚಿತ್ತತೆಯಿಂದಾಗಿಯೇ, ಯುಪಿಎ ಮೈತ್ರಿಕೂಟದ ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಅವರ ಸ್ವೀಕಾರಾರ್ಹತೆಯು ಪರಮೋಚ್ಚ ಮಟ್ಟದಲ್ಲಿದೆ ಎನ್ನಬೇಕು. ವಿಪಕ್ಷಗಳನ್ನು ಒಗ್ಗಟ್ಟಾಗಿ ಇರಿಸಲೆಂದು ಹಾಗೂ ದೇಶವನ್ನು
ಒಂದು ದಶಕದವರೆಗೆ ಆಳಿದ ೧೬ ಪಕ್ಷಗಳ ಯುಪಿಎ ಮೈತ್ರಿಕೂಟವನ್ನು ಸ್ಥಾಪಿಸಲೆಂದು ೨೦೦೪ರಲ್ಲಿ ಸೋನಿಯಾ ಅವರು ಪ್ರಧಾನಮಂತ್ರಿ ಪಟ್ಟವನ್ನು ಸ್ವತಃ ನಿರಾಕರಿಸಿದ್ದು ಗೊತ್ತಿರುವಂಥದ್ದೇ. ಈ ವೈಶಿಷ್ಟ್ಯವೇ ಅವರನ್ನು ಸುತ್ತುವರಿದಿರುವ ‘ಸಂತಸದೃಶ ಪ್ರಭಾವಳಿ’ಗೆ ಕಾರಣವಾಗಿದೆ ಎನ್ನಲಡ್ಡಿಯಿಲ್ಲ. ಆದರೆ, ಮೋದಿಯವರಿಗೆ ಜನಾದೇಶ ದಕ್ಕಿ ಪ್ರಧಾನಿ ಗದ್ದುಗೆಯಲ್ಲಿ ಅವರು ಪ್ರತಿಷ್ಠಾಪಿಸಲ್ಪಟ್ಟ ನಂತರ, ಗೊಂದಲಗಳನ್ನು ತಿಳಿಗೊಳಿಸಿ ಪರಿಸ್ಥಿತಿಯನ್ನು ಸುಗಮಗೊಳಿಸುವ ಮತ್ತು ಸಮಸ್ಯೆಯ ನಿವಾರಣೆಗೆ ರಾಮಬಾಣವಾಗಿ ಪರಿಣಮಿಸುವ ಪಾತ್ರಕ್ಕೆ ಅವರು ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ.

ಲೋಕಸಭೆಯ ಅಧಿವೇಶನದ ಒಂದು ಸಂದರ್ಭದಲ್ಲಿ, ಕಾಂಗ್ರೆಸ್ ನ ಮಿತ್ರಪಕ್ಷಗಳ ಕೋಪೋದ್ರಿಕ್ತ ಸದಸ್ಯರು ಸದನದ ಬಾವಿಯೆಡೆಗೆ ಧಾವಿಸಿದರೂ, ಕಾಂಗ್ರೆಸ್‌ನ ಪ್ರಮುಖ ಸಂಸದರಾದ ಶಶಿ ತರೂರ್ ಹಾಗೂ ಕಾರ್ತಿ ಚಿದಂಬರಂ ಅವರು ತಂತಮ್ಮ ಸ್ಥಾನಗಳಲ್ಲೇ ಕುಳಿತಿದ್ದರು; ಇದನ್ನು ಕಂಡು ಡಿಎಂಕೆಯ ಸಂಸದರು ದೂರಿದಾಗ ಸೋನಿಯಾ ಅವರನ್ನುದ್ದೇಶಿಸಿ, “ಸದನದ ಬಾವಿಯ ಬಳಿಗೆ ನಾನು ಬರುತ್ತೇನೆ” ಎಂದು ನಗುತ್ತಲೇ ಹೇಳಿದ್ದು ಆಕೆಯ ಮಾನವೀಯ ಮಗ್ಗುಲನ್ನು ಅನಾವರಣಗೊಳಿಸಿತ್ತು. ಶ್ಲಾಘನೀಯವೆನಿಸಿದ ಅವರ ಈ ‘ಹೆಜ್ಜೆ’ಯನ್ನು ತರೂರ್ ಮತ್ತು ಕಾರ್ತಿ ಕೂಡ ಅನುಸರಿಸಬೇಕಾಗಿ ಬಂತು.

ಸಂತರು ಎನಿಸಿಕೊಂಡವರು ಪ್ರಶಾಂತಚಿತ್ತತೆಯನ್ನು ಕಾಯ್ದುಕೊಂಡು ಶಾಂತಿಪಾಲಕರಾಗಿರುವುದರ ಜತೆಜತೆಗೆ ಯೋಧರೂ ಆಗಿರುತ್ತಾರೆ. ಸಂಸತ್ತಿನ ಕೊನೆಯ ಅಽವೇಶನದ ಅವಧಿಯಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಅವರು ಹೀಗೆ ಘೋಷಿಸಿದ್ದುಂಟು: “ಕಳೆದೊಂದು ದಶಕದಿಂದ ಕಾಣಬರುತ್ತಿರುವಂತೆ ಸಂಸತ್ತಿನ ಅಽವೇಶನವು ಇನ್ನು ಮುಂದೆಂದೂ ಹೀಗೆ ಬಲವಂತವಾಗಿ ಅಥವಾ ಬೆದರಿಸಿ ನಿಗ್ರಹಿಸಲ್ಪಡುವಂತಾಗಬಾರದು.

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವುದಕ್ಕೆ, ಸಂಸದರನ್ನು ವಿಲಕ್ಷಣ ರೀತಿಯಲ್ಲಿ ನಡೆಸಿಕೊಳ್ಳುವುದಕ್ಕೆ ಅಥವಾ ಯಥೋಚಿತ ಪರಿಗಣನೆ ಮತ್ತು ಚರ್ಚೆಗಳಿಲ್ಲದೆಯೇ ಶಾಸನವೊಂದನ್ನು ಅಂಗೀಕರಿಸಿಬಿಡುವುದಕ್ಕೆ ಇನ್ನು ಮುಂದೆ ಅವಕಾಶ ನೀಡಲಾಗುವುದಿಲ್ಲ, ಆಡಳಿತಾರೂಢ ಸರಕಾರದ ಅಂಥ ಫರ್ಮಾನುಗಳಿಗೆ ಓಗೊಡಲಾಗುವುದಿಲ್ಲ. 2014ರಿಂದಲೂ ಮಾಡಿಕೊಂಡು ಬಂದಿರುವಂತೆ, ಸಂಸದೀಯ ಸಮಿತಿಗಳನ್ನು ನಿರ್ಲಕ್ಷಿಸುವ ಅಥವಾ ಕಡೆಗಣಿಸುವ ನಡೆಯನ್ನು ಹಾಗೂ ಮಾತನಾಡದಂತೆ ಸಂಸತ್ತನ್ನು ತಡೆಯುವ ಹಾಗೂ ಹತ್ತಿಕ್ಕುವ ಧೋರಣೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ”. ನಿಮಗೆ ನೆನಪಿರಬಹುದು, ಸೋನಿಯಾ ಅವರು 1998ರಲ್ಲಿ ಸಕ್ರಿಯ ರಾಜಕಾರಣಕ್ಕೆ ಹೆಜ್ಜೆಯಿಟ್ಟಾಗ, ಅವರ ಆ ಹೆಜ್ಜೆ ಸಾಕಷ್ಟು ಅಬ್ಬರದಿಂದಲೇ ಕೂಡಿತ್ತು- ಅಂದರೆ, ಕಾಂಗ್ರೆಸ್‌ನ ಅಧಿನಾಯಕಿ ಎನಿಸಿಕೊಳ್ಳಲು ಅಂದಿನ ಪಕ್ಷಾಧ್ಯಕ್ಷ ಸೀತಾರಾಮ್ ಕೇಸರಿ ಯವರನ್ನು ಸೋನಿಯಾ ನಿರ್ದಾಕ್ಷಿಣ್ಯವಾಗಿ ಪದಚ್ಯುತಗೊಳಿಸಿದರು.

ರಾಜಕೀಯದಲ್ಲಿನ ಮತ್ತು ಪಕ್ಷದ ಚಟುವಟಿಕೆಗಳಲ್ಲಿನ ಆಕೆಯ ಒಳಗೊಳ್ಳುವಿಕೆ ಮೇಲ್ನೋಟಕ್ಕೆ ಗೋಚರಿಸದಿರಬಹುದು, ಆದರೆ ಪಕ್ಷದ ಮಾರ್ಗದರ್ಶಕಿಯಾಗಿ ಮತ್ತು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಬೇಕಿರುವ ಓರ್ವ ತಾಯಿಯಾಗಿ ಆವರಿಗಿರುವ ಸರ್ವವ್ಯಾಪಿತ್ವ ಮತ್ತು ಪ್ರಭಾವ ಎದ್ದುಕಾಣುವಂತಿವೆ.

ರಾಹುಲ್ ಗಾಂಧಿ: ಐದು ಅವಧಿಗೆ ಸಂಸದರೆನಿಸಿಕೊಂಡಿರುವ 54ರ ಹರೆಯದ ರಾಹುಲ್ ಗಾಂಧಿಯವರು ನಿರ್ವಹಿಸಿಕೊಂಡು ಬಂದಿರುವ ಪಾತ್ರಗಳು, ನಿಭಾಯಿಸುತ್ತಿರುವ ಹೊಣೆಗಾರಿಕೆಗಳು ಒಂದೆರಡಲ್ಲ. ಒಂದು ಕಾಲಕ್ಕೆ ಪ್ರಮಾಣೀಕೃತ ‘ಸ್ಕೂಬಾ ಜಿಗಿತಗಾರ’ ಎನಿಸಿಕೊಂಡಿದ್ದ
ಅವರು ಹಿಂದೆ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಎಂಬ ಹಣೆಪಟ್ಟಿಯನ್ನು ಲಗತ್ತಿಸಿಕೊಂಡಿದ್ದಾರೆ. ಭಾರತಕ್ಕೆ ಒಂದು ಮೂಲಾಗ್ರ ಆರ್ಥಿಕ ಮತ್ತು ಸಾಮಾಜಿಕ ಮಾದರಿಯನ್ನು
ಒದಗಿಸಲು ಜನಸಮೂಹದ ಭಾವನೆಗಳನ್ನು ಉತ್ತೇಜಿಸುವ ಆಶಯದೊಂದಿಗೆ ಕ್ರಾಂತಿಕಾರಕವಾಗಿ ಮಾತಾಡುವ, ತನ್ಮೂಲಕ ತಮ್ಮ ರಾಜಕೀಯ ಅಸ್ತಿತ್ವದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಹವಣಿಸುತ್ತಿರುವ ನಾಯಕರವರು.

ಜಾತಿ-ಆಧಾರಿತ ನೀತಿ ನಿರೂಪಣೆಗಳಿಗೆ ಸತತವಾಗಿ ಮತ್ತು ಪಟ್ಟಾಗಿ ಅಂಟಿಕೊಂಡಿರುವ ಅವರು ವ್ಯಾಪಾರ ಹಾಗೂ ವಾಣಿಜ್ಯೋದ್ಯಮ ವಲಯವು ಯಾವುದೋ ಒಬ್ಬ ವ್ಯಕ್ತಿಯ ಅಥವಾ ಒಂದೇ ಉದ್ಯಮ ಸಮೂಹದ ಬಿಗಿಮುಷ್ಟಿಗೆ ಸೇರಿಕೊಳ್ಳುವುದನ್ನು ವಿರೋಽಸಿಕೊಂಡೇ ಬಂದಿದ್ದಾರೆ. ಬಹುತೇಕರಿಗೆ ಗೊತ್ತಿರುವಂತೆ, ಒಂದಿಡೀ ಭಾರತವನ್ನು ತಲುಪುವ ಆಶಯದೊಂದಿಗೆ ದೇಶದ ದಕ್ಷಿಣದಿಂದ ಉತ್ತರ
ಭಾಗಕ್ಕೆ ಮತ್ತು ಪೂರ್ವದಿಂದ ಪಶ್ಚಿಮ ಭಾಗಕ್ಕೆ ಎರಡು ಸುದೀರ್ಘ ಪಾದಯಾತ್ರೆಗಳನ್ನು ಕೈಗೊಂಡ ಮೊಟ್ಟಮೊದಲ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ. ಇತಿಹಾಸದ ಪುಟದಿಂದ ಹಳೆಯ ನಿದರ್ಶನವೊಂದನ್ನು ಹೆಕ್ಕಿ, “ನೆಹರು ಮತ್ತು ಇಂದಿರಾ ಗಾಂಽಯವರು ‘ಟಾಟಾ-ಬಿರ್ಲಾ ಸಾಮ್ರಾಜ್ಯ’ಕ್ಕೆ ಇನ್ನಿಲ್ಲದ ಒತ್ತಾಸೆ ನೀಡಿದರು, ಪ್ರಯೋಜನ ಒದಗಿಸಿಕೊಟ್ಟರು” ಎಂದೆಲ್ಲಾ ಕೆಲವರು ಆರೋಪಿಸಿದಾಗ, “ಮೋದಿ ಸರಕಾರವು
ಅಂಬಾನಿ-ಅದಾನಿಗಳನ್ನು ಮಾತ್ರವೇ ಪೋಷಿಸುತ್ತಿದೆ” ಎಂದು ತಿರುಗೇಟು ನೀಡಿದರು ರಾಹುಲ್.

ಅವರು ಇತ್ತೀಚೆಗೆ ಅಮೆರಿಕದಲ್ಲಿ ‘ನ್ಯಾಷನಲ್ ಪ್ರೆಸ್ ಕ್ಲಬ್’ ಅನ್ನು ಉದ್ದೇಶಿಸಿ ಮಾತನಾಡುತ್ತಾ, “ಭಾರತದಲ್ಲಿನ ಅಗ್ರಗಣ್ಯ 200
ವ್ಯಾಪಾರೋದ್ದಿಮೆಗಳ ಪೈಕಿ, ಭಾರತದ ಜನಸಂಖ್ಯೆಯ ಶೇ.90ರಷ್ಟು ಮಂದಿಗೆ ಹೆಚ್ಚುಕಮ್ಮಿ ಮಾಲೀಕತ್ವವೇ ಇಲ್ಲ. ದೇಶದ ಅತ್ಯುನ್ನತ ನ್ಯಾಯಾಲಯಗಳಲ್ಲಿ ಭಾರತದ ಶೇ.90ರಷ್ಟು ಮಂದಿಗೆ ಬಹುತೇಕವಾಗಿ ಭಾಗಿತ್ವದ ಅವಕಾಶವೇ ಇಲ್ಲ. ಮಾಧ್ಯಮ ವಲಯದಲ್ಲಂತೂ, ಕೆಳಜಾತಿಯವರ, ಒಬಿಸಿಗಳ ಮತ್ತು ದಲಿತರ ಭಾಗಿತ್ವದ ಪ್ರಮಾಣ ಬಹುತೇಕ ಶೂನ್ಯವಾಗಿದೆ” ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನ ಜಾಲತಾಣವು ಅವರ ದೃಷ್ಟಿಕೋನವನ್ನು ಜಾಹೀರುಗೊಳಿಸುವುದು ಹೀಗೆ: “ಸರಕಾರಗಳು ಉತ್ತರದಾಯಿಗಳಾಗಿರಬೇಕು, ಹೊಣೆಯರಿತು ನಡೆಯಬೇಕು ಹಾಗೂ ಜನರಿಗೆ ಸೇವೆ ಸಲ್ಲಿಸಬೇಕು ಎಂಬುದು ರಾಹುಲರ ನಿಶ್ಚಿತಾಭಿಪ್ರಾಯ. ನೀತಿ ನಿರೂಪಣೆಯ ಪ್ರಕ್ರಿಯೆಯು ಸಂಪನ್ಮೂಲಗಳ ಸಮಾನ ಹಂಚಿಕೆಯ ಮೇಲೆ ಗಮನ ಹರಿಸಬೇಕು; ಅಗಲವಾಗುತ್ತಲೇ ಹೋಗುತ್ತಿರುವ ಆರ್ಥಿಕ ಕಂದಕವನ್ನು ಕುಗ್ಗಿಸಲು, ಸನಿಹಕ್ಕೆ ತರಲು ಅದು ನೆರವಾಗಬೇಕು; ಭಾರತದ ಕೃಷಿಕರು, ಯುವಜನರು, ಕಾರ್ಮಿಕರು, ಮಹಿಳೆಯರು ಮತ್ತು ಅವಗಣನೆಗೆ ಒಳಗಾಗಿರುವ ಸಮುದಾಯಗಳಿಗೆ ಅದು ರಕ್ಷಣೆಯನ್ನು ಒದಗಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು ಎಂಬುದು ರಾಹುಲ್ ಗಾಂಧಿ ಯವರ ಗಾಢನಂಬಿಕೆ ಯಾಗಿದೆ”. ತಮ್ಮ ತಾಯಿಯವರು ಯುಪಿಎ ಕೂಟದ ಅಧ್ಯಕ್ಷೆಯಾಗಿರುವವರೆಗೆ, ಈ ಮೈತ್ರಿಕೂಟವನ್ನು ಮುನ್ನಡೆಸುವ ಕಸರತ್ತಿನಿಂದ ರಾಹುಲ್ ದೂರವೇ ಉಳಿಯುತ್ತಾರೆ. ಆದರೆ ಪ್ರಸ್ತುತ ರೂಪುಗೊಳ್ಳುತ್ತಿರುವ ‘ರಾಹುಲ್ ಕಾಂಗ್ರೆಸ್’ನಲ್ಲಿ ಅವರ ಆಯ್ಕೆಯವರೇ ಮತ್ತು ಅವರ ಸಿದ್ಧಾಂತಕ್ಕೆ ಓಗೊಡುವವರೇ ಆದಅನುಯಾಯಿಗಳು ತುಂಬಿಕೊಂಡುಬಿಟ್ಟಿದ್ದಾರೆ. ಪ್ರಸ್ತುತ ಪ್ರತಿಪಕ್ಷ ನಾಯಕರಾಗಿರುವ ರಾಹುಲರು, ಪ್ರಧಾನಿಯವರನ್ನು ಗುರಿಯಾಗಿಸಿಕೊಂಡಿರುವ ತಮ್ಮ ಪ್ರಚೋದನಕಾರಿ ರಾಜಕೀಯ ವಾಗ್ದಾಳಿಗಳೊಂದಿಗೆ ಸಮರಕ್ಕೆ ಇಳಿಯಲಿದ್ದಾರೆ. ವಿಪಕ್ಷ ನಾಯಕರಾಗಿ ಇನ್ನೂ ನಾಲ್ಕು ವರ್ಷಗಳವರೆಗಿರುವ ಅವರ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಅವರ ಸಲಹೆಗಾರರು ಈಗಾಗಲೇ ಇದಕ್ಕೆ ಸಂಬಂಧಿಸಿ ಮಾರ್ಗಸೂಚಿಯನ್ನು ರೂಪಿಸಿದ್ದಾರೆ ಎಂಬುದು ಗಮನಾರ್ಹ.

ಪ್ರಿಯಾಂಕಾ ಗಾಂಧಿ: 52ರ ಹರೆಯದ ಓರ್ವ ತಾಯಿಯೂ, ವಿಪಶ್ಶನ ಧ್ಯಾನದ ಅಭ್ಯಾಸಿಯೂ ಆಗಿರುವ ಪ್ರಿಯಾಂಕಾ ಅವರು ವಯನಾಡ್ ಕ್ಷೇತ್ರದಿಂದ ಒಂದೊಮ್ಮೆ ಚುನಾಯಿತರಾದಲ್ಲಿ, ಇದೇ ಮೊದಲ ಬಾರಿಗೆ ಲೋಕಸಭೆಯನ್ನು ಪ್ರವೇಶಿಸಲಿದ್ದಾರೆ; ಇದು ಅವರ ಸೋದರ ರಾಹುಲರೇ ಬಿಟ್ಟುಕೊಟ್ಟ ಸ್ಥಾನವಾಗಿದೆ ಮತ್ತು ಒಂದು ಸುರಕ್ಷಿತ ‘ರಾಜಕೀಯ ಚಿಮ್ಮುಹಲಗೆ’ಯೂ ಆಗಿದೆ ಎಂಬುದು ನಿಮಗೆ ಗೊತ್ತಿರುವಂಥದ್ದೇ. ತಾಯಿ ಸೋನಿಯಾರ ‘ರಾಜಕೀಯ ಆತ್ಮಸಾಕ್ಷಿಯ ಪಾಲಕಿ’ ಎಂದೇ ಈಗಾಗಲೇ ಬಿಂಬಿಸಲ್ಪಟ್ಟಿರುವ ಪ್ರಿಯಾಂಕಾ ಅವರು, ಪಕ್ಷದ ಪಾಲಿಗೆ ಒಂದು ‘ನವಿರು ಮುಖವಾಣಿ’ ಎನಿಸಿಕೊಳ್ಳಲಿದ್ದಾರೆ. ಸೋನಿಯಾರ ನಂತರ ಪಕ್ಷವು ಅವರನ್ನು ತನ್ನ ‘ಮಹಿಳಾ ಮುಖ’ವಾಗಿ ಪ್ರವರ್ತಿಸಿ ಪ್ರಚಾರ ಮಾಡುವುದಂತೂ ಖರೆ!

ಇದುವರೆಗೆ ಪ್ರಿಯಾಂಕಾ ಅವರು ಪಕ್ಷದ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳುವ ಪರಿಪಾಠದಿಂದ ದೂರವೇ ಉಳಿದಿದ್ದಾರೆ. ತಮ್ಮ ಸೋದರ ರಾಹುಲ್‌ರನ್ನು ಸಮರ್ಥಿಸಿಕೊಳ್ಳುವ ಅಥವಾ ಮೋದಿಯವರನ್ನು ಎದುರಿಸುವ ವಿಷಯದಲ್ಲಿ ಆಕೆ ತೀವ್ರ ಆಕ್ರಮಣಕಾರಿಯಾಗಿರುವು ದರಿಂದ, ಮೋದಿಯವರ ಮೇಲಿನ ರಾಹುಲರ ವಾಗ್ದಾಳಿಗಳನ್ನು ಮತ್ತಷ್ಟು ವರ್ಧಿಸುವುದು ಅವರ ಪ್ರಮುಖ ಕಾರ್ಯಸೂಚಿಯಾಗಿದೆ ಎನ್ನಲಡ್ಡಿಯಿಲ್ಲ. ಮೋದಿಯವರು ರಾಹುಲರನ್ನು ‘ಶಹಜಾದಾ’ (ರಾಜಕುಮಾರ) ಎಂದು ಕರೆದಾಗ, ಗುಜರಾತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯೊಂದರಲ್ಲಿ ಆಕೆ ಮೋದಿಯವರಿಗೆ ತಿರುಗೇಟು ನೀಡಿದ ಪರಿ ಹೀಗಿತ್ತು: “ಮೋದಿಯವರು ನನ್ನ ಸೋದರನನ್ನು ‘ಶಹಜಾದಾ’ ಎಂದೇನೋ ಕರೆದಿದ್ದಾರೆ. ಆದರೆ, ಜನರ ಸಮಸ್ಯೆಗಳನ್ನು ಆಲಿಸಲೆಂದೇ ಈ ಶಹಜಾದಾ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 4000 ಕಿ.ಮೀ. ಅಂತರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ ಎಂಬುದನ್ನು ಅವರಿಗೆ ತಿಳಿಸಬಯಸುತ್ತೇನೆ. ದೇಶದ ಉದ್ದಗಲಕ್ಕೂ ಇರುವ ನನ್ನ ಸೋದರ-ಸೋದರಿಯರು, ರೈತರು ಮತ್ತು ಕಾರ್ಮಿಕರನ್ನು ಅವನು ಮುಖತಃ ಭೇಟಿಯಾಗಿ ಅವರ ಸಮಸ್ಯೆಗಳೇನು ಎಂಬುದನ್ನು ಕೇಳಿದ.

ಆದರೆ ಮತ್ತೊಂದೆಡೆ ಜನರ ‘ಶಹೆನ್‌ಷಾ’ ಆಗಿರುವ ಮತ್ತು ಅರಮನೆಯಲ್ಲಿ ನೆಲೆಸಿರುವ ನರೇಂದ್ರ ಮೋದಿಯವರು ಮಾಡಿದ್ದೇನು? ನೀವು ಅವರನ್ನು ಟಿವಿಯಲ್ಲಿ ವೀಕ್ಷಿಸಿರಬಹುದು, ಅವರ ಮುಖದ ಮೇಲೆ ಒಂದೇ ಒಂದು ಧೂಳಿನ ಕಣವೂ ಕಾಣುವುದಿಲ್ಲ. ಹೀಗಿರುವಾಗ, ನಿಮ್ಮಂಥ ಜನರ ಸಮಸ್ಯೆಗಳನ್ನು ಅವರು ಹೇಗೆ ತಾನೇ ಅರ್ಥಮಾಡಿಕೊಳ್ಳಬಲ್ಲರು…?” ಒಂದೊಮ್ಮೆ, ವಯನಾಡು ಉಪಚುನಾವಣೆಯಲ್ಲಿ ಗೆದ್ದ
ಮಾತ್ರಕ್ಕೆ ಆಕೆಗೆ ವಿಪಕ್ಷಗಳ ಬೆಂಚುಗಳ ಮುಂದಿನ ಸಾಲಿನಲ್ಲೇ ಒಂದು ಸ್ಥಾನ ಸಿಗದಿರಬಹುದು, ಆದರೆ ಸದನದಲ್ಲಿ ತನ್ನ ಸೋದರ ನೀಡಿದ ಸಂದೇಶಗಳು ಮತ್ತು ಉಪದೇಶಗಳನ್ನು ಮತ್ತಷ್ಟು ವಽಸುವುದು ಮಾತ್ರವೇ ಆಕೆಯ ಉದ್ದೇಶ ವಾಗಿರುತ್ತದೆ ಎಂಬುದಂತೂ ಸತ್ಯ.

‘ಚುನಾವಣೆ ಮತ್ತು ಕಾನೂನು ಸಂಘರ್ಷದ ಯುದ್ಧಭೂಮಿ ಗಳಲ್ಲಿ ರಾಜಕೀಯದ ಕೆಸರನ್ನು ಮೆತ್ತಿಕೊಂಡಿರುವ ದೆಹಲಿಯ ಲ್ಯುಟೆನ್ಸ್ ಪ್ರದೇಶದ ಯೋಧರು’ ಎಂಬ ಹಣೆಪಟ್ಟಿಯು ಗಾಂಧಿ ಕುಟುಂಬಿಕರಿಗೆ ಈಗಾಗಲೇ ತಗುಲಿಕೊಂಡಿದೆ. ಈ ‘ಗಾಂಧಿ ತ್ರಿಮೂರ್ತಿ’ಗಳ ಮೇಲೆ ಮಾತಿನ ಸಮರ ವನ್ನೇ ಸಾರಿರುವ ಮೋದಿಯವರು, ಅವರ ವಿರುದ್ಧ ಪರಿಣಾಮಕಾರಿ ಅಸ್ತ್ರಗಳನ್ನೇ ಪ್ರಯೋಗಿಸುತ್ತಾರೆ ಎಂಬುದಂತೂ ಖರೆ. ಒಟ್ಟಾರೆ ಹೇಳುವು ದಾದರೆ, ಸಂಸತ್ತಿನಲ್ಲಿ ಕೇವಲ ಮೋದಿಯವರ ವಿರುದ್ಧವೇ ಈ ತ್ರಿಮೂರ್ತಿಗಳ ವಾಗ್ದಾಳಿ ಮತ್ತು ಹೋರಾಟ ನಡೆಯುವುದಂತೂ ಹೌದು. ‘ಒಂದು ಸಿದ್ಧಾಂತಕ್ಕೆ ಎದುರಾಗಿ ಮತ್ತೊಂದು ಪರ್ಯಾಯ ಸಿದ್ಧಾಂತ’ ಎಂಬ ಕಾಲವೆಲ್ಲ ಹೊರಟುಹೋಗಿದೆ, ಈಗೇನಿದ್ದರೂ ಮೋದಿ ಎಂಬ ಏಕವ್ಯಕ್ತಿಯ ವಿರುದ್ಧ ಈ ಗಾಂಧಿ ತ್ರಿಮೂರ್ತಿಗಳ ಸಂಘರ್ಷಕ್ಕೇ ಕಾಲ.

(ಲೇಖಕರು ಹಿರಿಯ ಪತ್ರಕರ್ತರು)

ಇದನ್ನೂ ಓದಿ: Prabhu Chawla Column: ಮೋದಿ ಮತ್ತು ಟ್ರಂಪ್:‌ ಈಡು-ಜೋಡು ಸರಿಯಾಗಿದೆ…!