Saturday, 23rd November 2024

Amit Shah : ದಿ ಸಬರಮತಿ ರಿಪೋರ್ಟ್‌ ಚಿತ್ರತಂಡವನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್‌ ಶಾ

Amit Shah 

ನವದೆಹಲಿ : 2002ರಲ್ಲಿ ಗುಜರಾತ್‌ನ ಗೋದ್ರಾದಲ್ಲಿ ನಡೆದ ರೈಲು ದುರಂತದ ಕಥೆಯನ್ನು ಆಧರಿಸಿ ದಿ ಸಬರಮತಿ ರಿಪೋರ್ಟ್‌ (The Sabarmati Report) ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ದೇಶದಾದ್ಯಂತ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಚಿತ್ರತಂಡವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶುಕ್ರವಾರ ನವೆಂಬರ್ 22 ರಂದು ಚಿತ್ರದ ನಾಯಕ ವಿಕ್ರಾಂತ್‌ ಮಾಸ್ಸೆ, (Vikrant Massey) ನಿರ್ದೇಶಕಿ ಏಕ್ತಾ ಕಪೂರ್‌ ( Ektaa Kapoor) ಸೇರಿದಂತೆ ಹಲವರನ್ನು ದೆಹಲಿಯಲ್ಲಿ ಭೇಟಿಯಾದರು.

ಚಿತ್ರ ತಂಡದೊಂದಿಗಿನ ಸಂವಾದವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು “ದಿ ಸಬರಮತಿ ರಿಪೋರ್ಟ್‌ ‘ಚಿತ್ರ ತಂಡವನ್ನು ಭೇಟಿ ಮಾಡಿ, ಸತ್ಯವನ್ನು ಜನರಿಗೆ ತಲುಪಿಸಲು ಪ್ರಯತ್ನಪಟ್ಟ ಅವರ ಧೈರ್ಯಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ದೀರ್ಘಕಾಲದಿಂದ ಮುಚ್ಚಿಟ್ಟಿದ್ದ ಸತ್ಯವನ್ನು ಅನಾವರಣಗೊಳಿಸಲು ಚಿತ್ರತಂಡ ಪ್ರಯತ್ನಪಟ್ಟಿದೆ ಅವರ ಈ ಕಾರ್ಯ ಶ್ಲಾಘನೀಯ” ಎಂದು ಬರೆದುಕೊಂಡಿದ್ದಾರೆ.

ಏತನ್ಮಧ್ಯೆ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇತ್ತೀಚೆಗೆ ಗೋವಾದಲ್ಲಿ ನಡೆಯುತ್ತಿರುವ 55 ನೇ ಆವೃತ್ತಿಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ದಿ ಸಬರಮತಿ ರಿಪೋರ್ಟ್‌ ಸಿನಿಮಾವನ್ನು ವೀಕ್ಷಿಸಿದ್ದಾರೆ. ನಂತರ ಅವರು ನಿರ್ಮಾಪಕ ಮಹಾವೀರ್ ಜೈನ್ ಅವರು ದೂರವಾಣಿ ಮೂಲಕ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಇಡೀ ಚಿತ್ರ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚಲನಚಿತ್ರವನ್ನು ವೀಕ್ಷಿಸಿದ ನಂತರ, ನಾನು ಗೋವಾದಲ್ಲಿ ತೆರಿಗೆ ಮುಕ್ತಗೊಳಿಸಲು ಯೋಚಿಸುತ್ತಿದ್ದೇನೆ; ನಾವು ಈ ನಿರ್ಧಾರವನ್ನು ಕೆಲವೇ ದಿನಗಳಲ್ಲಿ ಜಾರಿಗೆ ತರುತ್ತೇವೆ. ಚಲನಚಿತ್ರವು ಸತ್ಯ ಘಟನೆಯನ್ನು ಆಧರಿಸಿದೆ. ನಾನು ನಿರ್ಮಾಪಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಚಿತ್ರತಂಡದೊಂದಿಗೆ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ಸಿನಿಮಾ ನೋಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ಮತ್ತು ಅದರ ನಾಯಕ ನಟ ವಿಕ್ರಾಂತ್ ಮಾಸ್ಸೆಯನ್ನು ಶ್ಲಾಘಿಸಿದ್ದರು.

ಇದನ್ನೂ ಓದಿ : The Sabarmati Report: 6 ದಿನದಲ್ಲಿ ʼದಿ ಸಬರಮತಿ ರಿಪೋರ್ಟ್‌ʼ ಚಿತ್ರ ಗಳಿಸಿದ್ದೆಷ್ಟು? ಇಲ್ಲಿದೆ ಡಿಟೇಲ್ಸ್‌

ವಿಕ್ರಾಂತ್ ಮಾಸ್ಸೆ ಮತ್ತು ಅವರ ತಂಡವು ಶ್ಲಾಘನೀಯ ಪ್ರಯತ್ನ ಮಾಡಿದೆ. ಉತ್ತರ ಪ್ರದೇಶದ ಪರವಾಗಿ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಸಮಾಜದಲ್ಲಿ ದ್ವೇಷವನ್ನು ಉಂಟುಮಾಡುವ ಪ್ರಯತ್ನಗಳ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗೆ ಇದೆ. ಚಿತ್ರವನ್ನು ಮತ್ತಷ್ಟು ಉತ್ತೇಜಿಸಲು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಹೇಳಿದ್ದರು.