Saturday, 23rd November 2024

Maharashtra Jharkhand Election Result: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ

maharashtra elections

ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ (Maharashtra Jharkhand Election Result) ರಾಜ್ಯ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಈಗಾಗಲೇ ಆರಂಭಗೊಂಡಿದ್ದು, ಆರಂಭದಿಂದಲೇ ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡು ಬಂದಿದೆ.

288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿಕೂಟ – ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ), ಮತ್ತು ಪ್ರತಿಪಕ್ಷಗಳಾದ ಮಹಾ ವಿಕಾಸ್ ಅಘಾಡಿ (MVA) – ಕಾಂಗ್ರೆಸ್, ಶಿವಸೇನೆ(ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಡುವೆ ತೀವ್ರ ಹಣಾಹಣಿ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುಯಿ ಮೈತ್ರಿಕೂಟ 101ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 145 ಮ್ಯಾಜಿಕ್‌ ನಂಬರ್‌ನತ್ತ ಧಾವಿಸುತ್ತಿದೆ. ಕಾಂಗ್ರೆಸ್‌ ನೇತೃತ್ವದ MVA ಆರಂಭಿಕ ಹಿನ್ನಡೆ ಅನುಭವಿಸುತ್ತಿದ್ದು, 33 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ನವೆಂಬರ್‌ 20 ರಂದು ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮ್ಯಾಟ್ರಿಜ್‌ ಸಂಸ್ಥೆಯು ಚುನಾವಾಣೋತ್ತರ ಸಮೀಕ್ಷೆಯನ್ನು ನಡೆಸಿತ್ತು. ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿ ಒಳಗೊಂಡ ಮಹಾಯುತಿಗೆ ಮೈತ್ರಿಕೋಟ ಜಯ ಸಾಧಿಸಲಿದೆ ಎಂದು ಮ್ಯಾಟ್ರಿಜ್‌ ಸಮೀಕ್ಷೆ ತಿಳಿಸಿದೆ. ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನ ಸಭಾ ಕ್ಷೇತ್ರಗಳ ಪೈಕಿ ಮಹಾಯುತಿ ಮೈತ್ರಿಕೋಟವು 150 ರಿಂದ 170 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇದರೊಂದಿಗೆ ಬಿಜೆಪಿ ಒಳಗೊಂಡ ಎನ್‌ಡಿಎ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿತ್ತು. ಆದರೆ, ಶನಿವಾರ ಮತ ಎಣಿಕೆಯ ನಂತರ ಮಹಾರಾಷ್ಟ್ರದಲ್ಲಿ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟವಾಗಲಿದೆ. ಅಂದ ಹಾಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಸ್ಥಾನಗಳಲ್ಲಿ ಗೆಲುವು ಅಗತ್ಯವಿದೆ.

ಜಾರ್ಖಂಡ್‌ನಲ್ಲೂ ಬಿಜೆಪಿಗೆ ಮುನ್ನಡೆ

81 ಸ್ಥಾನಗಳ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ, ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಪುನರಾಗಮನವನ್ನು ಬಯಸುತ್ತಿದೆ, ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಆಡಳಿತಾರೂಢ ಮೈತ್ರಿಕೂಟದಿಂದ ಅದನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 26 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, 16ಕ್ಷೇತ್ರಗಳಲ್ಲಿ ಇಂಡಿಯಾ ಬ್ಲಾಕ್‌ ಮುನ್ನಡೆ ಸಾಧಿಸಿದೆ.

ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತದೊಂದಿಗೆ ಅಧಿಕಾರವನ್ನು ವಹಿಸಿಕೊಳ್ಳಲಿದೆ ಎಂದು ನವೆಂಬರ್‌ 20 ರಂದು ಪೀಪಲ್‌ ಪಲ್ಸ್‌ನ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿತ್ತು. ಜಾರ್ಖಂಡ್‌ನಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಲು 41 ಸ್ಥಾನಗಳಲ್ಲಿ ಗೆಲುವುದು ಅಗತ್ಯ. ಅದರಂತೆ ಎನ್‌ಡಿಎ ಚುನಾವಣೆಯಲ್ಲಿ 42 ರಿಂದ 48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪೀಪಲ್ಸ್‌ ಪಲ್ಸ್‌ ಸಮೀಕ್ಷೆ ಹೇಳಿತ್ತು. ಇನ್ನು ವಿರೋಧ ಪಕ್ಷವಾದ ಜೆಎಂಎಂ ಸಾರಥ್ಯದ ಇಂಡಿಯಾ ಮೈತ್ರಿಕೂಟವು 16 ರಿಂದ18 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್‌ ಪಕ್ಷ 8 ರಿಂದ 14 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದೆಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Maharashtra Assembly Elections: ʼಮಹಾವಿಕಾಸ ಅಘಾಡಿಗೆ ಮತ ಚಲಾಯಿಸಿ 3 ಸಾವಿರ ರೂ. ಪಡೆಯಿರಿ! ನಟಿಗೆ ಬಂತು ಕಾಲ್!