ಲಖನೌ: ಉತ್ತರ ಪ್ರದೇಶದ ಒಂಬತ್ತು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ(UP Bypoll results) ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಈಗಾಗಲೇ ಮತ ಎಣಿಕೆ ಒಂದು ಹಂತಕ್ಕೆ ಬಂದು ತಲುಪಿದ್ದು, 9 ಸ್ಥಾನಗಳ ಪೈಕಿ 5ರಲ್ಲಿ ಭಾರತೀಯ ಜನತಾ ಪಕ್ಷ (BJP) ಮುನ್ನಡೆ ಸಾಧಿಸಿದೆ. ಎನ್ಡಿಎ ಮಿತ್ರಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅಭ್ಯರ್ಥಿ ಮಿಥಿಲೇಶ್ ಪಾಲ್ ಅವರು ಮೀರಾಪುರದಲ್ಲಿ ಸಮಾಜವಾದಿ ಪಕ್ಷದ ಸುಂಬುಲ್ ರಾಣಾ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿಯ ಶುಚಿಸ್ಮಿತಾ ಮೌರ್ಯ ಅವರು ಸಮಾಜವಾದಿ ಪಕ್ಷದ ಡಾ. ಜ್ಯೋತಿ ಬಿಂದ್ ವಿರುದ್ಧ 1,450 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ದೀಪಕ್ ತಿವಾರಿ ಚುನಾವಣಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಎಸ್ಪಿ ಪ್ರಾಬಲ್ಯವಿರುವ ಕುಂದರ್ಕಿ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ರಾಮ್ವೀರ್ ಸಿಂಗ್ ಠಾಕೂರ್ ವಿರುದ್ಧ ಎಸ್ಪಿಯ ಹಾಜಿ ರಿಜ್ವಾನ್ ಕಣದಲ್ಲಿದ್ದಾರೆ.
ಆರಂಭಿಕ ಮತ ಎಣಿಕೆ ಪ್ರಕಾರ ಕೇಸರಿ ಪಕ್ಷವು ಗಾಜಿಯಾಬಾದ್ ಮತ್ತು ಫುಲ್ಪುರ್ನಲ್ಲಿಯೂ ಮುನ್ನಡೆ ಸಾಧಿಸುತ್ತಿದೆ. ಖೇರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರ ದಿಲೇರ್ ಎಸ್ಪಿಯ ಚಾರು ಕೈನ್ ವಿರುದ್ಧ 1,738 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಮತ್ತೊಂದೆಡೆ, ಅಖಿಲೇಶ್ ಯಾದವ್ ಅವರ ಸೋದರಳಿಯ ತೇಜ್ ಪ್ರತಾಪ್ ಯಾದವ್ ಸ್ಪರ್ಧಿಸಿದ್ದ ಕರ್ಹಾಲ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದೆ. ಸಿಸಾಮೌ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಸೀಮ್ ಸೋಲಂಕಿ ಮುನ್ನಡೆಯಲ್ಲಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿಗೆ 2024 ರ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯ ನಂತರ ಈ ಉಪ ಚುನಾವಣೆರ ಪ್ರತಿಷ್ಠೆಯ ಕಣವಾಗಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 37 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಇಂಡಿ ಒಕ್ಕೂಟ 43 ಸ್ಥಾನಗಳನ್ನು ಗೆದ್ದುಕೊಂಡಿತು. ಈ 43 ಸ್ಥಾನಗಳಲ್ಲಿ ಎಸ್ಪಿ 37 ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಉತ್ತರ ಪ್ರದೇಶದಲ್ಲಿ ಉಪಚುನಾವಣೆ ನಡೆದ 9 ಕ್ಷೇತ್ರಗಳಲ್ಲಿ ಕರ್ಹಾಲ್ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ. ಅಖಿಲೇಶ್ ಯಾದವ್ ಅವರು ಲೋಕಸಭೆ ಚುನಾವಣೆಯಲ್ಲಿ ಕನೌಜ್ ಕ್ಷೇತ್ರದಿಂದ ಗೆದ್ದ ನಂತರ ಕರ್ಹಾಲ್ ಕ್ಷೇತ್ರ ತೆರವಾಗಿತ್ತು. ಈ ಕ್ಷೇತ್ರದಲ್ಲಿ ಇದೀಗ ಅವರ ಸೋದರಳಿಯ ತೇಜ್ ಪ್ರತಾಪ್ ಸ್ಪರ್ಧಿಸಿದ್ದಾರೆ.
ನವೆಂಬರ್ 20 ರಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಜೊತೆಗೆ ಉತ್ತರ ಪ್ರದೇಶದ ಉಪಚುನಾವಣೆಗೆ ಮತದಾನ ನಡೆಯಿತು. ಏತನ್ಮಧ್ಯೆ, ಎಕ್ಸಿಟ್ ಪೋಲ್ಗಳು ಲೋಕಸಭೆಯ ಹಿನ್ನಡೆಯ ನಂತರ ಬಿಜೆಪಿ ಈ ಚುನಾವಣೆ ಲಾಭವಾಗಲಿದೆ ಎಂದು ಭವಿಷ್ಯ ನುಡಿದಿವೆ. ಮಾರ್ಟೈಜ್ನ ಪ್ರಕ್ಷೇಪಗಳ ಪ್ರಕಾರ ಎನ್ಡಿಎ 7 ಸ್ಥಾನಗಳನ್ನು ಮತ್ತು ಸಮಾಜವಾದಿ ಪಕ್ಷವು 2 ಸ್ಥಾನಗಳನ್ನು ಗೆಲ್ಲಲಿದೆ. ಮತ್ತೊಂದೆಡೆ, ಜೆವಿಸಿಯ ಎಕ್ಸಿಟ್ ಪೋಲ್ ಸಮೀಕ್ಷೆಯು ಬಿಜೆಪಿ 9 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿದೆ.
ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಪ್ರಕಾರ, ಎನ್ಡಿಎ ಮೈತ್ರಿಕೂಟವು 7 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ಎಲ್ಲಾ ಎಕ್ಸಿಟ್ ಪೋಲ್ ಪ್ರಕಾರ ಎಸ್ಪಿಗೆ ಕೇವಲ ಸಿಸಾಮೌ ಮತ್ತು ಕರ್ಹಾಲ್ ಕ್ಷೇತ್ರಗಳು ಸಿಗಲಿವೆ.
ಚುನಾವಣಾ ಅಧಿಕಾರಿಗಳ ಪ್ರಕಾರ, ಸುಮಾರು 49.3 ರಷ್ಟು ಮತದಾರರು ಯುಪಿಯ 9 ವಿಧಾನಸಭಾ ಸ್ಥಾನಗಳಲ್ಲಿ ಬುಧವಾರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಘಾಜಿಯಾಬಾದ್ನಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಉಳಿದ 8 ಸ್ಥಾನಗಳಲ್ಲಿ ಮತದಾನದ ಪ್ರಮಾಣವು ಶೇಕಡಾ 60 ಕ್ಕಿಂತ ಕಡಿಮೆಯಾಗಿದೆ. ಕತೇಹಾರಿ, ಖೈರ್, ಕುಂದರ್ಕಿ, ಕರ್ಹಾಲ್, ಮಜವಾನ್, ಮೀರಾಪುರ್, ಫುಲ್ಪುರ್ ಮತ್ತು ಸಿಸಾಮೌ ಕ್ಷೇತ್ರಗಳಲ್ಲಿ ಕ್ರಮವಾಗಿ ಶೇ.56.69, ಶೇ.46.43, ಶೇ.57.32, ಶೇ.53.92, ಶೇ.50.41, ಶೇ.57.02, ಶೇ.57.02, ಶೇ.54.33, ಶೇ. ಮತ್ತು ಶೇ.49.03. ಮತದಾನ ಆಗಿತ್ತು.