ತಿರುವನಂತಪುರಂ: ಇಡೀ ದೇಶದ ಗಮನ ಸೆಳೆದಿದ್ದ ವಯನಾಡು (Wayanad) ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮೊದಲ ಬಾರಿ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) ಭರ್ಜರಿ 4 ಲಕ್ಷಕ್ಕೂ ಅದಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಗೆದ್ದು, ರಾಜೀನಾಮೆ ನೀಡಿದ ಕ್ಷೇತ್ರದಲ್ಲಿ ಇದೀಗ ಸಹೋದರಿ ಗೆಲುವಿನ ಖಾತೆ ತೆರೆದಿದ್ದಾರೆ (Wayanad Election Result 2024).
ಭರ್ಜರಿ ಅಂತರ
ವಿಶೇಷ ಎಂದರೆ ಪ್ರಿಯಾಂಕಾ ಗಾಂಧಿ ಒಟ್ಟು 6,17,942 ಮತ ಪಡೆದು 4,08,036 ಮತಗಳ ಅಂತರದಿಂದ ಭರ್ಜರಿಯಾಗಿಯೇ ಗೆದ್ದು ಮೊದಲ ಸಂಸತ್ ಪ್ರವೇಶಿಸಲಿದ್ದಾರೆ. ಪ್ರತಿಸ್ಪರ್ಧಿ ಎಲ್‌ಡಿಎಫ್ 2,09,906, ಎನ್‌ಡಿಎ 1,09,202 ಮತಗಳನ್ನು ಪಡೆದಿವೆ. ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿ ಎರಡೂ ಕಡೆ ಜಯ ದಾಖಲಿಸಿದ್ದರು. ಅವರು ವಯನಾಡಿನಲ್ಲಿ ಬರೋಬ್ಬರಿ 3.5 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.
⚡Wayanad Result Update
— Congress for Telangana (@Congress4TS) November 23, 2024
వయనాడ్లో ప్రియాంక గాంధీ భారీ విజయం… 4 లక్షల ఓట్లకు పైగా మెజారిటీ
Priyanka Gandhi Wins By 4 Lakh+ Votes Majority In Wayanad. pic.twitter.com/W0iRBK8Pu6
ಕಾಂಗ್ರೆಸ್ ಭದ್ರಕೋಟೆಯಾಗಿದ್ದರೂ ಇಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತ್ತು. ಸುಮಾರು 16 ಮಂದಿ ಕಣದಲ್ಲಿದ್ದು, ಈ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಯುಡಿಎಫ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಿದರೆ, ಎಲ್‌ಡಿಎಫ್‌ನಿಂದ ಸತ್ಯನ್ ಮೊಕೇರಿ ಕಣದಲ್ಲಿದ್ದರು. ಇವರಿಗೆ ಎನ್‌ಡಿಎಯ ನವ್ಯಾ ಹರಿದಾಸ್ ಪ್ರಬಲ ಪೈಪೋಟಿ ನೀಡಿದ್ದರು.
ವಯನಾಡಿನ 1,354 ಕೇಂದ್ರಗಳಲ್ಲಿ ಸುಮಾರು 14 ಲಕ್ಷ ಮಂದಿ ಮತ ಚಲಾಯಿಸಿದ್ದರು. ಅದಾಗ್ಯೂ ಮತದಾನದ ಪ್ರಮಾಣ ಕುಸಿದಿದ್ದು (ಶೇ. 64.72) ಪಕ್ಷಗಳ ಚಿಂತೆಗೆ ಕಾರಣವಾಗಿತ್ತು.
ಮೊದಲ ಬಾರಿ ಸ್ಪರ್ಧೆಗೆ ಇಳಿದಿದ್ದ ಪ್ರಿಯಾಂಕಾ
5 ವರ್ಷಗಳ ಹಿಂದೆ ಸಕ್ರೀಯ ರಾಜಕೀಯಕ್ಕೆ ಧುಮುಕಿದ ಪ್ರಿಯಾಂಕಾ ಗಾಂಧಿ (Priyanka Gandhi) ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ಸ್ಪರ್ಧೆಯಿಂದ ಈ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಪ್ರಿಯಾಂಕಾ ಗಾಂಧಿ ಗೆಲುವಿನ ಮೂಲಕ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಮೂವರು ಸದಸ್ಯರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಒಟ್ಟಿಗೆ ಸಂಸತ್ತಿನಲ್ಲಿ ಇರಲಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ (Sonia Gandhi) ರಾಯ್ ರಾಯ್ ಬರೇಲಿ ಕ್ಷೇತ್ರವನ್ನು ಮಗನಿಗಾಗಿ ತ್ಯಾಗ ಮಾಡಿ ರಾಜ್ಯಸಭೆಯತ್ತ ಮುಖ ಮಾಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇತ್ತು. ಆಗ ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲಿದೆ ಎಂದೇ ಊಹಿಸಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ. ಕೊನೆಗೂ ಕಾರ್ಯಕರ್ತರ ಆಶಯದಂತೆ ಅವರು ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಮನಸ್ಸು ಮಾಡಿದ್ದರು. ಲೋಕಸಭೆ ಸುನಾವಣೆ ವೇಳೆಯೂ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಈ ಸುದ್ದಿಯನ್ನೂ ಓದಿ: Maharashtra Election Result: ಮಹಾರಾಷ್ಟ್ರದಲ್ಲಿ ಪ್ರಚಂಡ ಗೆಲುವಿನತ್ತ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ