ತನ್ನಿಮಿತ್ತ
ಬಸವರಾಜ ಎಂ ಯರಗುಪ್ಪಿ
ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ
ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ.
ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆೆ ಕಾಳಜಿ ವಹಿಸುವುದು ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ಉಣ್ಣಲು ಅನ್ನ ಬೇಕು. ಉಸಿರಾಡಲು ಗಿಡ ಬೇಕು, ಪ್ಲಾಸ್ಟಿಕ್ ವಿಕಾಸ ಮನುಕುಲ ಸರ್ವನಾಶ, ತಡೆಯಿರಿ ಮಾಲಿನ್ಯ ಉಳಿಸಿರಿ ಜೀವ ಸಂಕುಲ, ಮನೆಯ ಸುತ್ತ ಕಸ ಆರೋಗ್ಯಕ್ಕೆ ವಿಷ.. ಶಬ್ದ ಮಾಲಿನ್ಯದಿಂದ ಶಾಂತಿ ನಾಶ.. ಜಲಮಾಲಿನ್ಯದಿಂದ ಆರೋಗ್ಯ ನಾಶ.., ಮರ ನೆಡುವುದು ಜನನ.. ಮರ ಕಡಿಯುವುದು ಮರಣ.. ಕಾಡು ಬೆಳಸ ಬನ್ನಿ ನಮ್ಮ ನಾಡು ಉಳಿಸ ಬನ್ನಿ ಎಂಬ ಘೋಷಣೆಗಳು ಹೀಗೆ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವ ಸಲು ವಾಗಿ ಪ್ರತಿವರ್ಷ ಕಾರ್ಯಕ್ರಮಗಳು ನಡೆಯುತ್ತಿವೆ.
ಕಣ್ಣಿಗೆ ಹಾನಿ ಮಾಡುವ ಬೆಳಕಿನ ಮಾಲಿನ್ಯ, ಶ್ರವಣ ಮಾಂದ್ಯರನ್ನಾಗಿ ಮಾಡುವ ಶಬ್ದಮಾಲಿನ್ಯ, ಆರೋಗ್ಯ ಕೆಡಿಸುವ ವಿಕಿರಣ
ಮಾಲಿನ್ಯ… ಇವೆಲ್ಲವೂ ಭೂಮಿಯ ಮೇಲೆ ಮನುಷ್ಯನ ಉಳಿವಿಗೆ ಮಾರಕವಾಗುತ್ತಿವೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ
ದಿನದ (ಡಿಸೆಂಬರ್ 2) ಅಂಗವಾಗಿ ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ. ಈ ದಿನದಂದು ವಾಯುಮಾಲಿನ್ಯ ನಿಯಂತ್ರಣ
ಮಂಡಳಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುತ್ತದೆ.
ಶಾಲಾ – ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 1984ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅನಿಲ ದುರಂತದಲ್ಲಿ ಮಡಿದ ಲಕ್ಷಾಂತರ ಜನರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 2ರಂದು ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ದಿನ ಆಚರಿಸಲು ನಿರ್ಧರಿಸಲಾಯಿತು.
ವಾಹನಗಳ ಸಂಖ್ಯೆೆ ಹೆಚ್ಚಾಗುತ್ತಿರುವುದು ಮತ್ತು ಪರಿಸರಕ್ಕೆ ಹಾನಿ ಮಾಡುವ ಇಂಧನಗಳ ಬಳಕೆಯೇ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಈಗಲೂ ಕೆಲವು ಹಳ್ಳಿಗಳಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಉರುವಲಾಗಿ ಬಳಸುತ್ತಿರುವುದು, ಬೆಳೆ
ತಾಜ್ಯಗಳನ್ನು ಸುಡುತ್ತಿರುವುದು, ರಾಸಾಯನಿಕ ಗೊಬ್ಬರಗಳು, ಕೀಟ ನಿಯಂತ್ರಕ ಔಷಧಿಗಳು, ಕೈಗಾರಿಕೆಗಳು ಹೊರಸೂಸು ತ್ತಿರುವ ಅಪಾಯಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಮಾಲಿನ್ಯಕ್ಕೆ ಕಾರಣಗಳು. ಹಸಿರು ಮನೆ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.
ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇವೆ. ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (ಗ್ಲೋಬಲ್ ಎನ್ವಿರಾನ್ಮೆಂಟ್ ಪರ್ಫಾಮೆನ್ಸ್ ಇಂಡೆಕ್ಸ್ – ಇಪಿಐ)2020ರ 12ನೇ ಆವೃತ್ತಿಯಲ್ಲಿ ಭಾರತ 168ನೇ ಸ್ಥಾನವನ್ನು ಪಡೆದುಕೊಂಡಿದೆ. ಸೂಚ್ಯಂಕದಲ್ಲಿ ಡೆನ್ಮಾರ್ಕ್ 82.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 2018ರಲ್ಲಿ ಭಾರತದ ಶ್ರೇಯಾಂಕ 177ನೇ ಸ್ಥಾನದಲ್ಲಿತ್ತು. 2017ರಲ್ಲಿ ಇನ್ನಷ್ಟು ಕುಸಿದು 177ನೇ ಸ್ಥಾನಕ್ಕೆ ತಲುಪಿತು. 2016ರಲ್ಲಿ, ಭಾರತ 141ನೇ ರ್ಯಾಂಕ್‌ನಲ್ಲಿತ್ತು. ಇಪಿಐ ಎನ್ನುವುದು ಯೇಲ್ ವಿಶ್ವವಿದ್ಯಾಲಯ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯವು ವಿಶ್ವ ಆರ್ಥಿಕ ವೇದಿಕೆಯ ಸಹಯೋಗದೊಂದಿಗೆ ಸಿದ್ಧ ಪಡಿಸಿದ ದ್ವೆವಾರ್ಷಿಕ ಸೂಚ್ಯಂಕವಾಗಿದೆ.
ಇದು ಪರಿಸರ ಕಾರ್ಯಕ್ಷಮತೆಯಲ್ಲಿ ನಾಯಕರು ಮತ್ತು ಹಿಂದುಳಿದವರನ್ನು ಎತ್ತಿ ತೋರಿಸುವ ಸ್ಕೋರ್ಕಾರ್ಡ್ ಅನ್ನು ನೀಡು ತ್ತದೆ ಮತ್ತು ಸುಸ್ಥಿರ ಭವಿಷ್ಯದತ್ತ ಸಾಗಲು ಆಶಿಸುವ ದೇಶಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತದೆ. ಈ ಸೂಚ್ಯಂಕವನ್ನು ಮೊದಲ ಬಾರಿಗೆ 2002ರಲ್ಲಿ ಯುನೆಟೆಡ್ ನೇಷನ್ಸ್ ಮಿಲೇನಿಯಂ ಡೆವಲಪ್‌ಮೆಂಟ್ ಗುರಿಗಳಲ್ಲಿ ನಿಗದಿಪಡಿಸಿದ ಪರಿಸರ ಗುರಿ ಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ನದಿಗಳನ್ನು ಪವಿತ್ರ ಎಂದು ಭಾವಿಸುವ ಭಾರತದಲ್ಲಿನ ಯಾವ ನದಿಯೂ ಸಂಪೂರ್ಣ ಸ್ವಚ್ಛವಾಗಿಲ್ಲ. ದೇಶದ ಅತಿದೊಡ್ಡ ನದಿ ಗಂಗಾ ತಟದಲ್ಲೇ ಕೋಟ್ಯಂತರ ಮಂದಿ ವಾಸಿಸುತ್ತಿದ್ದಾರೆ. ದೇಶದಲ್ಲಿ 251 ನದಿಗಳಿದ್ದು ಇವುಗಳಲ್ಲಿ 121 ನದಿಗಳು ಸಂಪೂರ್ಣ ಕಲುಷಿತವಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಸಾರ ಕಳೆದುಕೊಳ್ಳುತ್ತಿದೆ ಮಣ್ಣು: ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಫಲವತ್ತಾದ ಮಣ್ಣು ಕೂಡ ಕಲುಷಿತವಾಗಿದೆ. ಇದು ಮನುಷ್ಯನ ಆರೋಗ್ಯ ಭದ್ರತೆ ಮತ್ತು ಆಹಾರ ಭದ್ರತೆಗೆ ಅಪಾಯಕಾರಿ. ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಮನುಷ್ಯನ ಉಳಿವು ಪ್ರಶ್ನಾರ್ಥಕವಾಗಲಿದೆ.