Saturday, 23rd November 2024

Drug Bust: ಮಾದಕ ವಸ್ತು ಬೃಹತ್‌ ಜಾಲ ಪತ್ತೆ… ಡ್ರಗ್ ಪೆಡ್ಲರ್‌ಗೆ ಸೇರಿದ 1.72 ಕೋಟಿ ರೂ. ಜಪ್ತಿ!

Jammu Kashmir Police

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu Kashmir Police) ಶನಿವಾರ ಬಾರಾಮುಲ್ಲಾ(Baramulla) ಜಿಲ್ಲೆಯಲ್ಲಿ ಡ್ರಗ್ ಪೆಡ್ಲರ್‌ಗೆ (Drug Bust) ಸೇರಿದ 1.72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಡ್ರಗ್ ದಂಧೆಕೋರರ ವಿರುದ್ಧ ಕ್ರಮವನ್ನು ಮುಂದುವರಿಸಿರುವ ಪೊಲೀಸರು ಜಮ್ಮುವಿನ ತ್ರಿಕಂಜನ್ ಬೋನಿಯಾರ್‌ನಲ್ಲಿರುವ ಎರಡು ಅಂತಸ್ತಿನ ವಸತಿ ಮನೆ, ಟಿಪ್ಪರ್ ಹಾಗೂ ನಾಲ್ಕು ಚಕ್ರದ ವಾಹನವನ್ನು ಜಪ್ತಿ ಮಾಡಿದ್ದಾರೆ. ಈ ಆಸ್ತಿ ಕುಖ್ಯಾತ ಡ್ರಗ್ ಪೆಡ್ಲರ್ ರಫೀಕ್ ಅಹ್ಮದ್ ಖಾನ್ ಅಲಿಯಾಸ್ ರಫಿ ರಫಾ ಪುತ್ರನಿಗೆ ಸೇರಿರುವುದಾಗಿದೆ.

985 ರ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 68-ಎಫ್ (1) ಹಾಗೂ 68-ಇ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಆಸ್ತಿ ಅಕ್ರಮವಾಗಿ ಸಂಪಾದಿಸಿದ್ದು ಎಂದು ತಿಳಿದುಬಂದಿದೆ. ಮಾದಕವಸ್ತುಗಳು ಹಾಗೂ ಸೈಕೋಟ್ರೋಪಿಕ್ ವಸ್ತುಗಳ ಅಕ್ರಮ ಸಾಗಣೆಯಿಂದ ಆಸ್ತಿಯನ್ನು ಗಳಿಸಿದ್ದಾರೆ ಹಾಗೂ ಕೆಲ ಡ್ರಗ್‌ ಪಡ್ಲರ್‌ಗಳಿಗೆ ಉಗ್ರರ ನಂಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ನವೆಂಬರ್ 18 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕ ವ್ಯಸನಿಗಳ ವಿರುದ್ಧ ನಡೆಯುತ್ತಿರುವ ಅಭಿಯಾನದ ಭಾಗವಾಗಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಅನಂತನಾಗ್ ಜಿಲ್ಲೆಯ ಪೊಲೀಸರು 1.72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್ ಮನೋಜ್ ಸಿನ್ಹಾ ಯಾವುದೇ ವ್ಯಕ್ತಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಸಾಬೀತಾದಲ್ಲಿ ಅವರು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಆದೇಶ ನೀಡಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಅಥವಾ ಉಗ್ರರಿಗೆ ಆಶ್ರಯ ನೀಡುವ ಯಾವುದೇ ವ್ಯಕ್ತಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮಾದಕ ವಸ್ತು, ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ನಡುವೆ ನಿಕಟ ಸಂಬಂಧ ಇರುವುದು ಪೊಲೀಸ್‌ ತನಿಖೆ ವೇಳೆ ಬಯಲಾಗಿದೆ. ಮಾದಕ ವಸ್ತುಗಳ ಮಾರಾಟದಿಂದ ಸಿಗುವ ಅಪಾರ ಪ್ರಮಾಣದ ಹಣದಲ್ಲಿ ಬಹುತೇಕ ಪಾಲು ಭಯೋತ್ಪಾದಕ ಸಂಘಟನೆಗಳಿಗೆ ಅಂತಿಮವಾಗಿ ಸೇರುತ್ತಿದೆ. ಹೀಗಾಗಿ ಭಯೋತ್ಪಾದಕರ ಆದಾಯ ಮೂಲವಾಗಿರುವ ಮಾದಕವಸ್ತು ಜಾಲಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Terror Attack: ಜಮ್ಮು & ಕಾಶ್ಮೀರದಲ್ಲಿ ಎನ್‌ಕೌಂಟರ್‌; ಸೇನಾಧಿಕಾರಿ ಹುತಾತ್ಮ