ಚೆನ್ನೈ: ಮೇಜರ್ ಮುಕುಂದ್ ವರದರಾಜನ್ (Major Mukund Varadharajan) ಜೀವನಾಧರಿತ, ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ಅಭಿನಯದ ‘ಅಮರನ್’ ಸಿನಿಮಾ (Amaran Movie)ಕ್ಕೆ ಪ್ರೇಕ್ಷರು ಫಿದಾ ಆಗಿದ್ದಾರೆ. ವರದರಾಜನ್ ಪಾತ್ರಕ್ಕೆ ಶಿವ ಕಾರ್ತಿಕೇಯನ್ ಜೀವ ತುಂಬಿದ್ದು, ಪತ್ನಿ ಇಂದು ರೆಬೆಕಾ ಪಾತ್ರದಲ್ಲಿ ಸಾಯಿ ಪಲ್ಲವಿ (Sai Pallavi) ಮೋಡಿ ಮಾಡಿದ್ದಾರೆ. ಇವರಿಬ್ಬರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಾಕ್ಸಾಫೀಸ್ ನಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ದಾಖಲೆ ಬರೆದಿದೆ.
ರಾಜ್‌ಕುಮಾರ್ ಪೆರಿಯಸ್ವಾಮಿ ‘ಅಮರನ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಈ ಚಿತ್ರವನ್ನು ನಿರ್ಮಿಸಿದೆ. ಭುವನ್ ಅರೋರ, ರಾಹುಲ್ ಬೋಸ್, ಶ್ಯಾಮ್ ಪ್ರಸಾದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ದೇಹ ದಂಡಿಸಿ ಬಹಳ ಖಡಕ್ ಲುಕ್‌ನಲ್ಲಿ ಶಿವ ಕಾರ್ತಿಕೇಯನ್ ನಟಿಸಿದ್ದಾರೆ.
ನೈಜ ಕಥೆಯಾಗಿರುವ ʼಅಮರನ್ʼ ಸಿನೆಮಾವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಒಬ್ಬ ಸೈನಿಕ ಹಾಗೂ ಸೈನ್ಯದ ಗೌರವಕ್ಕೆ ಕಿಂಚಿತ್ ಧಕ್ಕೆ ಬರೆದಂತೆ ಸಿನೆಮಾವನ್ನು ಕಟ್ಟಿ ಕೊಡಲಾಗಿದೆ. ಅ. 31ರಂದು ಬಿಡುಗಡೆಯಾದ ಚಿತ್ರ ಈಗ ಯಶಸ್ವಿಯಾಗಿ 25 ದಿನ ಪೂರೈಸಿದೆ. ಎಲ್ಲ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಆ್ಯಕ್ಷನ್ ಹೈಲೈಟ್
ಶಿವ ಕಾರ್ತಿಕೇಯನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ʼಅಮರನ್ʼ ಸಿನಿಮಾದಲ್ಲಿ ಭಾವನೆಗಳು ಮತ್ತು ಆ್ಯಕ್ಷನ್ ಅಂಶಗಳೇ ಹೈಲೈಟ್. ಇದು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾದ ಚಿತ್ರವಾಗಿದೆ. ವೃತ್ತಿಪರ ಜವಾಬ್ದಾರಿಗಳಿಂದಾಗಿ ತಮ್ಮ ಕುಟುಂಬಗಳಿಂದ ದೂರವಿರುವ ಸೈನಿಕರು ಕಾಶ್ಮೀರದಲ್ಲಿನಎದುರಿಸುತ್ತಿರುವ ಸವಾಲುಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ʼಅಮರನ್ʼ ಚಿತ್ರದ ಭಾರತೀಯ ಆವೃತ್ತಿಯ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ʼಅಮರನ್ʼ ಡಿ. 5 ಅಥವಾ 10ರಿಂದ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ʼಅಮರನ್ʼಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಹಿನ್ನೆಲೆ ಇನ್ನೂ ತಡವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಥಿಯೇಟರ್ ಮಾಲೀಕರು ಬೇಡಿಕೆ ಇಡುತ್ತಿದ್ದಾರೆ.
ಬಹು ಭಾಷೆಗಳಲ್ಲಿ ರಿಲೀಸ್
ದೀಪಾವಳಿ ಹಬ್ಬದ ದಿನದಂದು ತಮಿಳು ಜತೆಗೆ ಕನ್ನಡ, ತೆಲುಗು, ಹಿಂದಿ, ಮಲಯಾಳಂನಲ್ಲಿಯೂ ಚಿತ್ರ ತೆರೆ ಕಂಡಿದೆ. ʼಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ʼ ಕೃತಿಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರು ಈ ಕೃತಿಯಲ್ಲಿ ಮೇಜರ್ ವರದರಾಜನ್ ಅವರ ಬಗ್ಗೆ ಸಾಕಷ್ಟು ಬರೆದಿದ್ದು ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಕಥೆ ಬರೆದು, ನಿರ್ದೇಶಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಈಗಾಗಲೇ ಹಿಟ್ ಲಿಸ್ಟ್ ಸೇರಿದೆ.
ಈ ಸುದ್ದಿಯನ್ನೂ ಓದಿ: Actor Nagarjun: ಅಪ್ಪ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು… ತಂದೆ ಅಕ್ಕಿನೇನಿ ನಾಗೇಶ್ವರ್ ರಾವ್ ಕುರಿತು ನಟ ನಾಗಾರ್ಜುನ್ ಭಾವನಾತ್ಮಕ ಮಾತು