ಬೆಂಗಳೂರು: ಕರ್ನಾಟಕ ರಾಜ್ಯದ ಮಹಾಜನತೆ ಇಂದು 2028 ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಕೊಟ್ಟಿದ್ದಾರೆ. ವಿರೋಧ ಪಕ್ಷಗಳ ಸುಳ್ಳು, ಟೀಕೆ, ಅಪಪ್ರಚಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು (Guarantee Schemes) ಹಾಗೂ ಅಭಿವೃದ್ಧಿಗೆ ಜಯ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಉಪಚುನಾವಣೆ ಫಲಿತಾಂಶ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಬಗ್ಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಈ ಉಪಚುನಾವಣೆಗಳ ಫಲಿತಾಂಶದ ಬಗ್ಗೆ ಮಾಧ್ಯಮಗಳು ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಿನ್ನೆಯೇ ಹೇಳಿದ್ದೆ. ಕೆಲವು ಕ್ಷೇತ್ರದ ಸೋಲು, ಗೆಲುವು ನನ್ನದೇ ಎಂದು ಹೇಳಿದ್ದೆ. ಮೂರು ಉಪಚುನಾವಣೆಗಳ ಫಲಿತಾಂಶ ಬಂದಿದೆ. ವಿರೋಧ ಪಕ್ಷಗಳು ಟೀಕೆ, ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಭಾವನೆ ಮೇಲೆ ರಾಜಕಾರಣ ನಡೆಯೋದಿಲ್ಲ, ಬದುಕಿನ ಮೇಲಿನ ರಾಜಕಾರಣಕ್ಕೆ ಒತ್ತು ನೀಡುವಂತೆ ನಮ್ಮ ಜನರೇ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Wayanad Election Result 2024: ವಯನಾಡಿನಲ್ಲಿ ಪ್ರಿಯಾಂಕಾ ಅಲೆ; ಬರೋಬ್ಬರಿ 4 ಲಕ್ಷ ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್ ನಾಯಕಿ
ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೇಲೆ ದೊಡ್ಡ ಚರ್ಚೆ ಮಾಡುತ್ತಿದ್ದರು, ಅಭಿವೃದ್ಧಿಗೆ ಹಣವಿಲ್ಲ ಎಂದರು. ಈ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದು, 224 ಕ್ಷೇತ್ರಗಳಿಗೆ ಈ ಹಣ ಹಂಚಿದರೆ ಪ್ರತಿ ಕ್ಷೇತ್ರಕ್ಕೆ ಸರಾಸರಿ 250 ಕೋಟಿ ಪ್ರತಿ ವರ್ಷ ನೀಡಲಾಗುತ್ತಿದೆ. ಇದು ಅಭಿವೃದ್ಧಿ, ಜನರ ಬದುಕಿಗಾಗಿ ನೀಡುತ್ತಿರುವ ಹಣವಲ್ಲವೇ? ಬಡ ಮತ್ತು ಮಧ್ಯಮದ ವರ್ಗದ ಜನರಿಗೆ ಆರ್ಥಿಕ ಶಕ್ತಿ ಸಿಕ್ಕಿಲ್ಲವೇ? ಈ ಯೋಜನೆ ಜಾರಿಯಲ್ಲಿ ಯಾವುದಾದರೂ ಅಕ್ರಮ ನಡೆದಿದೆಯೇ? ಇದೆಲ್ಲವನ್ನು ಅರಿತು ಜನರೇ ತೀರ್ಪು ನೀಡಿದ್ದಾರೆ ಎಂದು ಹೇಳಿದರು.
ಇದು ನಿಖಿಲ್, ಭರತ್ ಸೋಲಲ್ಲ
ಚನ್ನಪಟ್ಟಣದ ಫಲಿತಾಂಶವನ್ನು ನಿಖಿಲ್ ಕುಮಾರಸ್ವಾಮಿ ಅವರ ಸೋಲು ಎಂದು ನಾನು ಹೇಳುವುದಿಲ್ಲ. ಅವರ ತಂದೆ ಕುಮಾರಸ್ವಾಮಿ ಅವರು ಆ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಗುರುತಿಗೆ ಜನ ತೀರ್ಪು ನೀಡಿದ್ದಾರೆ.
ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಆ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಮೇಲೆ ಮತ ನೀಡಿದ್ದಾರೆ. ಸಂಡೂರಿನಲ್ಲಿ ಮೊದಲಿನಿಂದ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಈ ಮೂರು ಕ್ಷೇತ್ರಗಳಲ್ಲಿ ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಜನ ಮತ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರ ಟೀಕೆ ನೀವು ಗಮನಿಸಿದ್ದೀರಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಅದು ಸಾಬೀತಾಗಿದೆ ಎಂದು ಹೇಳಿದರು.
ವಿರೋಧ ಪಕ್ಷಗಳ ನಾಯಕರು ಮುಖ್ಯಮಂತ್ರಿಗಳು, ಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು. ಸತ್ಯಾಂಶವಿದ್ದರೆ ನಮ್ಮನ್ನು ತಿದ್ದುವ ಪ್ರಯತ್ನ ಮಾಡಲಿ. ಆದರೆ ಸುಳ್ಳನ್ನೇ ಮನೆ ದೇವರು ಎಂದು ಪರಿಗಣಿಸಿ ಜನರ ತಲೆಗೆ ತುಂಬಲು ಹೋದರೆ ಕೆಲಸಕ್ಕೆ ಬರುವುದಿಲ್ಲ. ಬೊಮ್ಮಾಯಿ ಅವರ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರ ಬಂದಿದೆ. ಈ ಚುನಾವಣೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ನಡೆದಿದೆ. ಈ ಭಾಗದಲ್ಲಿ ಆಯ್ಕೆಯಾದ ಕೇಂದ್ರ ಮಂತ್ರಿಗಳು ಎನ್‌ಡಿಎ ಮೈತ್ರಿ ಹೆಸರಲ್ಲಿ ಚುನಾವಣೆ ಮಾಡಿದ್ದರು ಎಂದರು.
ಸರ್ಕಾರದ ಸಂಖ್ಯಾಬಲ 138ಕ್ಕೆ ಏರಿದೆ
ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿದ್ದ ಕಾರಣ ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದ ಪರಿಶುದ್ಧ ಆಡಳಿತಕ್ಕೆ ಜನ ಬೆಂಬಲ ನೀಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಅಪೂರ್ವ ಸಹೋದರರ ಚುನಾವಣೆಯಲ್ಲ. ಇದು ಜನರ ಚುನಾವಣೆ, ಜನರ ಗೆಲುವು. ಕ್ಷೇತ್ರದಲ್ಲಿ ಜನ ಪ್ರಾರಂಭದಿಂದಲೂ ಜನರು ತಮ್ಮ ಬದುಕು ಕಟ್ಟಿಕೊಳ್ಳಬೇಕು. ಅಭಿವೃದ್ಧಿ ನೋಡಬೇಕು ಎಂದು ಜೆಡಿಎಸ್‌ಗೆ ಅವಕಾಶ ನೀಡದೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಸಂಡೂರಿನಲ್ಲಿ ಗೆಲ್ಲಲು ವಿಶೇಷ ನಾಯಕತ್ವ ನೀಡಿದ್ದರು. ಅದಕ್ಕೆ ಜನ ಉತ್ತರ ನೀಡಿದ್ದಾರೆ. ಈಗ ನಮ್ಮ ಸರ್ಕಾರದ ಸಂಖ್ಯಾಬಲ 138 ಆಗಿದೆ. ಇನ್ನು ಬೇರೆ ಲೆಕ್ಕಾಚಾರದ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಈ ಗೆಲುವಿಗೆ ಗ್ಯಾರಂಟಿ ಯೋಜನೆಗಳು, ಸಿದ್ದರಾಮಯ್ಯ ಅವರ ನಾಯಕತ್ವ ಹಾಗೂ ನಮ್ಮ ಕಾರ್ಯಕರ್ತರು ಮತ್ತು ಶಾಸಕರ ಪರಿಶ್ರಮ ಕಾರಣ. ಅವರ ಹಗಲು ರಾತ್ರಿ ಶ್ರಮಿಸಿದ್ದರ ಫಲ ಇದು. ಇಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರಷ್ಟೇ ಮುಖ್ಯವಲ್ಲ. ಈ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಡಳಿತ ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಜನರ ಸಾಲವನ್ನು ಜವಾಬ್ದಾರಿಯುತವಾಗಿ ತೀರಿಸುತ್ತೇವೆ
ಮಾಧ್ಯಮಗಳು ನಮಗೆ ಮುಖಭಂಗ ಎಂದು ಬರೆದಿದ್ದರು. ಅವರಿಗೆ ತೋಚಿದ್ದು ಅವರು ಬರೆದಿದ್ದರು. ಈಗ ಫಲಿತಾಂಶದ ಸಂಖ್ಯೆಗಳೇ ಉತ್ತರ ನೀಡಿವೆ. ಮೂರು ಕ್ಷೇತ್ರದ ಮತದಾರರಿಗೆ ಸಾಷ್ಟಾಂಗ ನಮನ ಅರ್ಪಿಸುತ್ತೇನೆ. ನೀವು ಕೊಟ್ಟಿರುವ ಈ ಸಾಲವನ್ನು ಜವಾಬ್ದಾರಿಯುತ ಆಡಳಿತದ ಮೂಲಕ ತೀರಿಸುತ್ತೇವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಹೀಗೆ ನಮ್ಮ ಒಗ್ಗಟ್ಟು ಮುಂದುವರಿಸಿಕೊಂಡು ರಾಜ್ಯದ ಜನರ ಸೇವೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಈ ಫಲಿತಾಂಶ ದೇವೇಗೌಡ ಕುಟುಂಬದ ಕುಸಿತದ ಆರಂಭವೇ ಎಂದು ಕೇಳಿದಾಗ, ನಾನು ಈ ಫಲಿತಾಂಶವನ್ನು ಈ ರೀತಿ ಬಣ್ಣಿಸುವುದಿಲ್ಲ. ಜನ ತೀರ್ಪು ಕೊಟ್ಟಿದ್ದಾರೆ. ಮಾಧ್ಯಮಗಳು ಹೇಗೆ ವ್ಯಾಖ್ಯಾನ ಮಾಡಬೇಕೋ ಮಾಡಿ ಎಂದು ತಿಳಿಸಿದರು.
ಇದು 2028ರ ಚುನಾವಣೆ ಮುನ್ನುಡಿಯೇ ಎಂದು ಕೇಳಿದಾಗ, “ಖಂಡಿತವಾಗಿಯೂ ನಾವು 2028ರ ಚುನಾವಣೆಯಲ್ಲಿ ನಾವು ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜವಾಬ್ದಾರಿಯುತ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತು ನಾನು ಈ ಮಾತನ್ನು ಹೇಳುತ್ತಿದ್ದೇನೆ. ನಾವು ಅಧಿಕಾರಕ್ಕೆ ಮತ್ತೆ ಬಂದು ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಮಾದರಿ ಮಹಾರಾಷ್ಟ್ರದಲ್ಲಿ ನಕಲು
ಮಹಾರಾಷ್ಟ್ರ ಫಲಿತಾಂಶದ ಬಗ್ಗೆ ಕೇಳಿದಾಗ, “ಮಹಾರಾಷ್ಟ್ರದಲ್ಲಿ ಬಿಜೆಪಿಯವರು ನಮ್ಮ ಮಾದರಿಯನ್ನು ನಕಲು ಮಾಡಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ, ಅವುಗಳನ್ನೇ ನಕಲು ಮಾಡಿದ್ದಾರೆ. ಕರ್ನಾಟಕ ಮಾದರಿ ದೇಶಕ್ಕೆ ಮಾದರಿಯಾಗಿದೆ ಎಂದರು.
ನಮ್ಮ ನಾಯಕಿಯಾದ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ವಯನಾಡು ಉಪಚುನಾವಣೆಯಲ್ಲಿ ಭರ್ಜರಿ ಗೆಲವು ದಾಖಲಿಸಿದ್ದು, ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಈ ಸುದ್ದಿಯನ್ನೂ ಓದಿ | Vande Bharat Train: ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ; ಇಬ್ಬರು ಕಿಡಿಗೇಡಿಗಳು ಅರೆಸ್ಟ್
ಯೋಗೇಶ್ವರ್ ಸಿನಿಮಾ ನಟ, ಕಲೆಗಾರ
ಯೋಗೇಶ್ವರ್ ಅವರು ಮತದಾನದ ಮರುದಿನ ಸೋಲಿನ ಬಗ್ಗೆ ಮಾತನಾಡಿದ್ದರು ಎಂದು ಕೇಳಿದಾಗ, “ಯೋಗೇಶ್ವರ್ ಸಿನಿಮಾ ನಟ, ಕಲೆಗಾರ. ಅವರು ಯಾವ ಸಂದರ್ಭದಲ್ಲಿ ಏನು ಹೇಳಬೇಕೋ ಹೇಳುತ್ತಾರೆ. ಅವರದೇ ಆದ ಟ್ರಿಕ್ ಇದೆ. ಅವರು ಸೋಲುವುದಾಗಿ ಎಲ್ಲಿಯೂ ಹೇಳಿಲ್ಲ. ಕುಮಾರಸ್ವಾಮಿ ನಿರ್ಮಾಪಕರಾದರೆ, ಯೋಗೇಶ್ವರ್ ನಟ. ನಿಖಿಲ್ ಕುಮಾರಸ್ವಾಮಿ ಕೂಡ ನಟ. ಕುಮಾರಸ್ವಾಮಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಕೇಳಿದಾಗ, ಅಪ್ಪಾ ನಾನು ಜನರ ಮಧ್ಯೆ ಇದ್ದೇನಪ್ಪಾ ಎಂದು ಹೇಳಿದ್ದು ನಾನು ನೋಡಿದ್ದೇನೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.