ಪರ್ತ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಪ್ರವಾಸಿ ಭಾರತ ತಂಡವು(IND vs AUS) ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಮೊದಲ ಇನಿಂಗ್ಸ್‌ನ 46 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಭಾರತ, ವಿಕೆಟ್ ನಷ್ಟವಿಲ್ಲದೆ ದಿನದಾಟದ ಅಂತ್ಯಕ್ಕೆ 172 ರನ್ ಗಳಿಸಿ ಒಟ್ಟು 218 ರನ್ ಮುನ್ನಡೆ ಸಾಧಿಸಿದೆ. ಕೆ.ಎಲ್ ರಾಹುಲ್(62) ಮತ್ತು ಯಶಸ್ವಿ ಜೈಸ್ವಾಲ್(90) ಅರ್ಧಶತಕ ಪೂರೈಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
67 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಶನಿವಾರ ಹರ್ಷಿತ್ ರಾಣಾ ಮತ್ತು ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ 104 ರನ್‌ಗಳಿಗೆ ಆಲೌಟ್ ಆಯಿತು. ಇದು 2000ರದ ಬಳಿಕ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಗಳಿಸಿದ ಮೂರನೇ ಅತಿ ಕಡಿಮೆ ಮೊತ್ತವಾಗಿದೆ. ಮಿಚೆಲ್ ಸ್ಟಾರ್ಕ್ ಅವರು ಅಂತಿಮ ಹಂತದಲ್ಲಿ 26 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸುವಲ್ಲಿ ನೆರವಾದರು. ಸ್ಟಾರ್ಕ್ ಅವರದ್ದೇ ಆಸೀಸ್ ಪರ ದಾಖಲಾದ ಗರಿಷ್ಠ ಮೊತ್ತ.
ನಾಲ್ಕು ವಿಕೆಟ್ ಕಿತ್ತಿದ್ದ ಬುಮ್ರಾ ಇಂದು ಒಂದು ವಿಕೆಟ್ ಕೀಳುವ ಮೂಲಕ 5 ವಿಕೆಟ್ ಗೊಂಚಲು ಪಡೆದರು. ಈ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ11ನೇ 5 ವಿಕೆಟ್ ಗೊಂಚಲು ಪೂರ್ಣಗೊಳಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಅವರ 2ನೇ 5 ವಿಕೆಟ್ ಸಾಧನೆಯಾಗಿದೆ. ವಿದೇಶಿ ನೆಲದಲ್ಲಿ 7 ಬಾರಿ ಐದು ವಿಕೆಟ್ ಕಿತ್ತ ಸಾಧನೆಯೊಂದಿಗೆ ದಿಗ್ಗಜ ಆಟಗಾರ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದರು.
ಅಮೋಘ ಜತೆಯಾಟ
ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಎದುರಿಸಿದ್ದ ಜೈಸ್ವಾಲ್ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಅರ್ಧಶತಕ ಪೂರ್ತಿಗೊಂಡ ಬಳಿಕ ಕೊಂಚ ಬಿರುಸಿನ ಬ್ಯಾಟಿಂಗ್ ನಡೆಸಿದರು. ಸದ್ಯ 2 ಸಿಕ್ಸರ್ ಮತ್ತು 7 ಬೌಂಡರಿ ಸಿಡಿಸಿ ಅಜೇಯ 90 ರನ್ ಬಾರಿಸಿದ್ದಾರೆ. 2 ಸಿಕ್ಸರ್ ಬಾರಿಸುತ್ತಿದ್ದಂತೆ ಟೆಸ್ಟ್ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಜೈಸ್ವಾಲ್‌ಗೂ ಮುನ್ನ ಈ ದಾಖಲೆ ಈ ದಾಖಲೆ ನ್ಯೂಜಿಲ್ಯಾಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿತ್ತು. ಮೆಕಲಮ್ 2014 ರಲ್ಲಿ 33 ಸಿಕ್ಸರ್ ಬಾರಿಸಿದ್ದರು. ಜೈಸ್ವಾಲ್ 2024ರಲ್ಲಿ 34* ಸಿಕ್ಸರ್ ಬಾರಿಸಿದ್ದಾರೆ.
ಕಳೆದೊಂದು ವರ್ಷದಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಭಾರೀ ಟೀಕೆ ಎದುರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಸೊಗಸಾದ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಮತ್ತೆ ತಮ್ಮ ಹಳೆಯ ಬ್ಯಾಟಿಂಗ್ ಲಯಕ್ಕೆ ಮರಳಿದರು. ಇದರಲ್ಲೊಂದು ಸ್ಟ್ರೇಟ್ ಕವರ್ ಡ್ರೈವ್ ಮೂಲಕ ಬಾರಿಸಿದ ಬೌಂಡರಿ ದ್ವಿತೀಯ ದಿನದ ಹೈಲೆಟ್ಸ್ ಆಯಿತು. ಸದ್ಯ ರಾಹುಲ್ 62 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.
20 ವರ್ಷದ ಬಳಿಕ ದಾಖಲೆ
2004 ರ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಜತೆಯಾಟ ನಡೆಸಿದ ಭಾರತದ ಮೊದಲ ಆರಂಭಿಕ ಜೋಡಿ ಎಂಬ ಹಿರಿಮೆಗೆ ಜೈಸ್ವಾಲ್ ಮತ್ತು ರಾಹುಲ್ ಪಾತ್ರರಾಗಿದ್ದಾರೆ. 2004ರ ಸರಣಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಆಕಾಶ್ ಚೋಪ್ರಾ 123 ರನ್ ಜತೆಯಾಟ ನಡೆಸಿದ್ದರು. ಇದೀಗ 20 ವರ್ಷದ ಬಳಿಕ ಜೈಸ್ವಾಲ್ ಮತ್ತು ರಾಹುಲ್ ಆರಂಭಿಕ ವಿಕೆಟ್‌ಗೆ 100 ರನ್‌ಗಳ ಜತೆಯಾಟ ನಡೆಸಿತು.