Saturday, 23rd November 2024

Shiggaon bypoll results: ಬಿಜೆಪಿ ಭದ್ರಕೋಟೆ ಛಿದ್ರ ಮಾಡಿದ ಪೈಲ್ವಾನ್ ಪಠಾಣ್‌; ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಹಾವೇರಿ: ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ (Shiggaon bypoll results) ಕಳೆದ ಎರಡೂವರೆ ದಶಕದಿಂದ ನಿರಂತರ ಸೋಲನ್ನು ಕಂಡಿದ್ದ ಕಾಂಗ್ರೆಸ್ ಈ ಬಾರಿಯ ಉಪಚುನಾವಣೆ ಮೂಲಕ ಬಿಜೆಪಿಗೆ ಸೋಲಿನ ರುಚಿ ಉಣಿಸಿದೆ. ಬಿಜೆಪಿ ಭ್ರದಕೋಟೆಯನ್ನು ಛಿದ್ರ ಮಾಡಿ ಕಾಂಗ್ರೆಸ್ ಮರಳಿ ಕ್ಷೇತ್ರವನ್ನು ವಶಕ್ಕೆ ತಗೆದುಕೊಂಡು ಭರ್ಜರಿ ವಿಜಯೋತ್ಸವ ಆಚರಿಸಿಕೊಂಡಿದೆ.

ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರು ಸತತ ನಾಲ್ಕು ಬಾರಿ ನಿರಂತರ ಗೆಲುವು ಪಡೆಯುವ ಮೂಲಕ ಪಕ್ಷವನ್ನು ಭದ್ರವಾಗಿ ಕಟ್ಟಿಕೊಂಡಿದ್ದರು. ಅನಿವಾರ್ಯ ಕಾರಣದಿಂದ ಬಸವರಾಜ ಬೊಮ್ಮಾಯಿ ಅವರು ಹಾವೇರಿ- ಗದಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದಾಗ ಅವರು ಸಂಸದರಾದರು. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬೊಮ್ಮಾಯಿ ಅವರ ರಾಜೀನಾಮೆಯಿಂದ ಉಪಚುನಾವಣೆ ಎಂಟ್ರಿ ಆದಾಕ್ಷಣ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರವನ್ನು ಉಳಿಸಿಕೊಳ್ಳಲು ತಮ್ಮ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್ ಪಡೆಯುವ ಮೂಲಕ ಕ್ಷೇತ್ರದಲ್ಲಿ ಕಣಕ್ಕಿಳಿಸಿದರು.

ಮಗನ ಗೆಲುವಿಗಾಗ ಹಗಲು ರಾತ್ರಿ ಕ್ಷೇತ್ರದಲ್ಲಿ ಓಡಾಡಿ ಮತದಾರರಲ್ಲಿ ಇದು ಮಗನ ಚುನಾವಣೆ ಅಲ್ಲ, ನನ್ನ ಚುನಾವಣೆ. ಕಾಂಗ್ರೆಸ್ ಸೋಲಿಸಿ ನನ್ನನ್ನು ಗೆಲ್ಲಿಸಿ ಅಂತ ಮತದಾರರಲ್ಲಿ ಅನುಕಂಪ ಗಿಟ್ಟಿಸಿಕೊಂಡರೂ ಕ್ಷೇತ್ರದ ಜನ ಈ ಬಾರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸೋಲಿಸಿ ರುಚಿ ಉಣಿಸಿದ್ದಾರೆ.

ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರಕ್ಕೆ ಇದೇ ನ.13 ರಂದು ಮತದಾನ ನಡೆದಿತ್ತು. ಇಂದು (ನ.23) ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ 86,960 ಮತಗಳನ್ನು ಗಳಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರು 1,00,587 ಮತಗಳನ್ನು ಗಳಿಸಿಕೊಂಡು ಜತೆಗೆ ಅಂಚೆ ಮತಗಳು ಬಿಜೆಪಿ ಪಕ್ಷಕ್ಕೆ -348, ಕಾಂಗ್ರೆಸ್ ಪಕ್ಷ 169 ಬಂದ ನಂತರ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಕೈ ಅಭ್ಯರ್ಥಿ ಯಾಸಿರ್ ಖಾನ್ ಪಠಾನ್ ಅವರು 13,448 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಸಾಧಿಸಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 2,37,671 ಮತಗಳಿದ್ದು, 192,244 ಮತದಾರರು ಮತ ಚಲಾವಣೆ ಮಾಡಿದ್ದರು. ಉಪ ಚುನಾವಣೆ ಕಣದಲ್ಲಿ ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೆಆರ್‌ಎಸ್ ಪಕ್ಷ ರವಿ ಕೃಷ್ಣ ರೆಡ್ಡಿ 1870 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿದ್ದು, 834 ನೋಟಾ ಮತಗಳು ಚಲಾವಣೆಯಾಗಿವೆ. 25 ಮತಗಳು ತಿರಸ್ಕೃತವಾಗಿವೆ.

ನಾನು ಸಾಮಾನ್ಯ ಕುಟುಂಬದಿಂದ ಬಂದವನು ನನ್ನನ್ನು ಎಲ್ಲ ಸಮುದಾಯದ ಜನರು ಪ್ರೀತಿ, ವಿಶ್ವಾಸ, ನನ್ನ ಮೇಲಿನ‌ ನಂಬಿಕೆ ಹಾಗೂ ನಮ್ಮ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್,‌ ಅಜ್ಜಂಪೀರ್ ಖಾದ್ರಿ, ಶಿವಣ್ಣ, ಮಾನೆ, ಲಮಾಣಿ ಸಾಹೇಬ್ರು ಹಾಗೂ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್ , ಸತೀಶ ಜಾರಕಿಹೊಳಿ, ಜಮೀರ್ ಅಹ್ಮದ ಖಾನ್, ಖಂಡ್ರೆ, ವಿನಯ ಕುಲಕರ್ಣಿ ಆದಿಯಾಗಿ ನನಗೆ ಶಕ್ತಿ ಕೊಟ್ಟು ಶಾಸಕರನ್ನಾಗಿಸಿದ್ದಾರೆ. ಎಲ್ಲರ ಅಪೇಕ್ಷಿತೆಯಂತೆ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ.
| ಯಾಸಿರ್ ಖಾನ್ ಪಠಾಣ್, ನೂತನ ಕಾಂಗ್ರೆಸ್ ಶಾಸಕ

ಈ ಸುದ್ದಿಯನ್ನೂ ಓದಿ | Shiggaon bypoll results 2024: ಶಿಗ್ಗಾಂವಿಯಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ನ ಯಾಸಿರ್‌ ಅಹ್ಮದ್‌; ಬೊಮ್ಮಾಯಿ ಪುತ್ರನಿಗೆ ಸೋಲು