Saturday, 23rd November 2024

IND vs AUS: ʻನಿಮಗಿಂತ ವೇಗವಾಗಿ ಬೌಲ್‌ ಮಾಡುತ್ತೇನೆʼ-ಬೌನ್ಸರ್‌ ಎಸೆದ ಹರ್ಷಿತ್‌ ರಾಣಾಗೆ ಸ್ಟಾರ್ಕ್‌ ವಾರ್ನಿಂಗ್‌ !

IND vs AUS: 'I Bowl Faster...'-Mitchell Starc Warns Harshit Rana After Bouncer Barrage

ಪರ್ತ್‌: ಇಲ್ಲಿನ ಅಪ್ಟಸ್‌ ಸ್ಟೇಡಿಯಂನಲ್ಲಿ ಸಾಗುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯದ ಎರಡನೇ ದಿನ ನಾಟಕೀಯ ಬೆಳವಣಿಗೆಯೊಂದು ನಡೆಯಿತು. ಭಾರತ ತಂಡದ ಯುವ ವೇಗಿ ಹರ್ಷಿತ್‌ ರಾಣಾ ಹಾಗೂ ಆಸೀಸ್‌ ಹಿರಿಯ ವೇಗಿ ಮಿಚೆಲ್‌ ಸ್ಟಾರ್ಕ್‌ ನಡುವೆ ಹೈಡ್ರಾಮವೊಂದು ನಡೆಯಿತು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಶನಿವಾರ ಎರಡನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಅಲೆಕ್ಸ್‌ ಕೇರಿ ಹಾಗೂ ನೇಥನ್‌ ಲಯಾನ್‌ ಕ್ರೀಸ್‌ಗೆ ಬಂದಿದ್ದರು. ಆದರೆ, ಜಸ್‌ಪ್ರೀತ್‌ ಬುಮ್ರಾ ಆರಂಭದಲ್ಲಿಯೇ ಅಲೆಕ್ಸ್‌ ಕೇರಿ ಅವರನ್ನು ಔಟ್‌ ಮಾಡಿದರು. ನಂತರ ನೇಥನ್‌ ಲಯಾನ್‌ ಅವರನ್ನು ಹರ್ಷಿತ್‌ ರಾಣಾ ಔಟ್‌ ಮಾಡಿದರು. ಫಾಸ್ಟ್‌ ಬೌಲರ್‌ಗಳಿಗೆ ನೆರವು ನೀಡಿದ್ದ ಪರ್ತ್‌ ಪಿಚ್‌ನಲ್ಲಿ ಹರ್ಷಿತ್‌ ರಾಣಾ ಬೌನ್ಸ್‌ಗಳ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮನದಲ್ಲಿ ಆತಂಕ ಮೂಡಿಸಿದ್ದರು.

ಒಂಭತ್ತನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮಿಚೆಲ್‌ ಸ್ಟಾರ್ಕ್‌ ಅವರು ಬರೋಬ್ಬರಿ 112 ಎಸೆತಗಳನ್ನು ಎದುರಿಸಿದ್ದರು ಹಾಗೂ 26 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ಪರ ಪ್ರಥಮ ಇನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. ಆದರೆ, ಮಿಚೆಲ್‌ ಸ್ಟಾರ್ಕ್‌ ಅವರಿಗೆ ಹರ್ಷಿತ್‌ ರಾಣಾ ಬೌನ್ಸರ್‌ಗಳ ಮೂಲಕ ಆತಂತ ಮೂಡಿಸಿದ್ದರು.

AUS vs IND: ಗೌತಮ್‌ ಗಂಭೀರ್‌ರ 16 ವರ್ಷಗಳ ಹಳೆಯ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌!

ಹರ್ಷಿತ್‌ ರಾಣಾಗೆ ಎಚ್ಚರಿಕೆ ನೀಡಿದ ಮಿಚೆಲ್‌ ಸ್ಟಾರ್ಕ್‌

ಒಮ್ಮೆ ಹರ್ಷಿತ್‌ ರಾಣಾ ಅವರು ಮಿಚೆಲ್‌ ಸ್ಟಾರ್ಕ್‌ ಅವರಿಗೆ ಬೌನ್ಸರ್‌ ಹಾಕಿದ್ದರು. ಈ ವೇಳೆ ಆಘಾತಕ್ಕೀಡಾದ ಮಿಚೆಲ್‌ ಸ್ಟಾರ್ಕ್‌ ಅವರು ತಮಾಷೆಯ ಮೂಲಕ ಹರ್ಷಿತ್‌ ರಾಣಾಗೆ ಎಚ್ಚರಿಕೆ ನೀಡಿದ್ದರು. “ಹರ್ಷಿತ್‌, ನಾನು ನಿಮಗಿಂತಲೂ ವೇಗವಾಗಿ ಬೌಲ್‌ ಮಾಡುತ್ತೇನೆ, ನಾನು ನಿಮಗಿಂತ ವೇಗವಾಗಿ ಬೌಲ್‌ ಮಾಡುತ್ತೇನೆ. ಇದನ್ನು ದೀರ್ಘಾವಧಿ ನೆನಪಿನಲ್ಲಿಟ್ಟುಕೊಳ್ಳುತ್ತೇನೆ,” ಎಂದು ಮಿಚೆಲ್‌ ಸ್ಟಾರ್ಕ್‌ ನಗು ನಗುತ್ತಾ ತಮ್ಮ ಕೋಲ್ಕತಾ ನೈಟ್‌ ರೈಡರ್ಸ್‌ ಸಹ ವೇಗಿ ಹರ್ಷತ್‌ ರಾಣಾಗೆ ವಾರ್ನಿಂಗ್‌ ಕೊಟ್ಟರು.

ಮಿಚೆಲ್‌ ಸ್ಟಾರ್ಕ್‌ ಅವರ ಮಾತಿಗೆ ಹರ್ಷಿತ್‌ ರಾಣಾ ನಗುವ ಮೂಲಕ ಉತ್ತರ ನೀಡಿದರು. ಹಲವು ಓವರ್‌ಗಳ ಬಳಿಕ ಮತ್ತೆ ಬೌಲಿಂಗ್‌ಗೆ ಬಂದ ಹರ್ಷಿತ್‌ ರಾಣಾ ಅವರು, ಮಿಚೆಲ್‌ ಸ್ಟಾರ್ಕ್‌ ಹೆಲ್ಮೆಟ್‌ಗೆ ಬೌನ್ಸರ್‌ ಎಸೆದರು ಹಾಗೂ ತಕ್ಷಣ ಮಾತನಾಡಿ, ʻಸ್ಟಾರ್ಕ್‌ ಈ ಬೌನ್ಸರ್‌ ಓಕೆನಾ?ʼ ಎಂದು ಪ್ರಶ್ನೆ ಕೇಳಿದರು.

ಆಸ್ಟ್ರೇಲಿಯಾ ತಂಡ 104 ರನ್‌ಗಳಿಗೆ ಆಲ್‌ಔಟ್‌

ಶನಿವಾರ ಬೆಳಿಗ್ಗೆ 67 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಎರಡನೇ ದಿನದಾಟವನ್ನು ಆರಂಭಿಸಿದ ಆಸ್ಟ್ರೇಲಿಯಾ ತಂಡ 51.2 ಓವರ್‌ಗಳಿಗೆ ಕೇವಲ 104 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಟೀಮ್‌ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 46 ರನ್‌ಗಳ ಮುನ್ನಡೆಯನ್ನು ಪಡೆಯಿತು. ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಕೆಎಲ್‌ ರಾಹುಲ್‌ ( 62* ರನ್‌ಗಳು) ಹಾಗೂ ಯಶಸ್ವಿ ಜೈಸ್ವಾಲ್‌ (90* ರನ್‌ಗಳು) ಅವರ ಅರ್ಧಶತಕಗಳ ಬಲದಿಂದ ಎರಡನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 172 ರನ್‌ಗಳನ್ನು ಕಲೆ ಹಾಕಿದ್ದು, 218 ರನ್‌ಗಳ ಮುನ್ನಡೆ ಪಡೆದಿದೆ.