-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೈಬಲ್ ಜ್ಯುವೆಲರಿಗಳು ಇದೀಗ ನಾನಾ ಹೊಸ ರೂಪ ಪಡೆದು ಫ್ಯಾಷನ್‌ಗೆ (Tribal Jewel Fashion) ಸಾಥ್ ನೀಡುತ್ತಿವೆ. ಬುಡಕಟ್ಟು ಜನಾಂಗದವರು ಧರಿಸುವ ಆಭರಣಗಳ ಕಾನ್ಸೆಪ್ಟ್ ಇರಿಸಿಕೊಂಡು ಇಂದಿನ ಕರಕುಶಲಕರ್ಮಿಗಳು ಸಿದ್ಧಪಡಿಸಲಾದ ಈ ಆ್ಯಕ್ಸಿಸ್ಸರೀಸ್ ನೋಡಲು ಆಕರ್ಷಕವಾಗಿರುತ್ತವೆ. ತಾಮ್ರ, ಕಂಚು, ಪ್ಲಾಸ್ಟಿಕ್, ಮಣಿ, ಬೆಳ್ಳಿ ಹೀಗೆ ಯಾವುದೇ ಮೇಟಿರಿಯಲ್‌ಗಳದ್ದಾಗಬಹುದು. ನೋಡೋಕ್ಕೂ ಇವು ಸ್ಪಷ್ಟ ಆಕಾರ ಹೊಂದಿರುವುದಿಲ್ಲ. ಸೊಟ್ಟಗಿದ್ದರೂ, ಬಾಗಿದ್ದರೂ ನೋಡಲು ಕಲರ್‌ಫುಲ್ ಆಗಿರಬಹುದು. ಅತಿ ಏನಿಸುವಷ್ಟು ಹತ್ತಾರು ಎಳೆಯದ್ದಾಗಿರಬಹುದು. ಇಲ್ಲವೇ, ರೆಕ್ಕೆ-ಪುಕ್ಕದಂತಿರಬಹುದು. ಕಿವಿಯೊಲೆಗಳು ನೇತಾಡುತ್ತಾ ಅಗಲವಾಗಿರಬಹುದು. ಮಣ್ಣಿನ ತಟ್ಟೆಯಂತಹ ಡಾಲರ್ ಹೊಂದಿರಬಹುದು ಅದು ಕತ್ತಿನ ಅಥವಾ ಕೈಗಳ ಬ್ರೆಸ್ಲೆಟ್ ಆಗಿರಬಹುದು. ಒಟ್ನಲ್ಲಿ, ನೋಡೊಕ್ಕೆ ಥೇಟ್ ಕಾಡುಜನರು ಧರಿಸುವ ಆಭರಣಗಳ ಇಮಿಟೇಷನ್ ಜ್ಯುವೆಲರಿ ಇವು ಎಂದರೂ ಅತಿಶಯೋಕ್ತಿಯಾಗಲಾರದು.
ಟ್ರೆಂಡಿಯಾಗಿರುವ ಜ್ಯುವೆಲರಿಗಳು
ಕಾಡು ಹೂ-ಬಳ್ಳಿಗಳನ್ನು ಹೋಲುವ ಕಿವಿಯೊಲೆ, ಹೊಟ್ಟೆಯ ಭಾಗವನ್ನು ತಾಗುತ್ತಿರುವ ಕವಡೆಗಳ ಹಾರ, ಶಂಖವನ್ನು ಹೋಲುವ ಹ್ಯಾಂಗಿಂಗ್ಸ್, ಕನ್ನಡಿಯನ್ನೊಳಗೊಂಡ ಮಾರುದ್ದದ ಲೇಯರ್ ಸರ, ತಾಮ್ರದ ಪ್ಲೇಟ್‌ನಂತಿರುವ ಬ್ರೆಸ್ಲೇಟ್, ಯದ್ವಾತದ್ವಾ ಆಕಾರದ ಜ್ಯುವೆಲರಿ ಸೆಟ್ ಹೀಗೆ ನಾನಾ ಬಗೆಯ ಟ್ರೈಬಲ್ ಆಭರಣಗಳನ್ನು ಹೋಲುವ ಜ್ಯುವೆಲರಿಗಳು ಇಂದು ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ.
ಹುಡುಗಿಯರನ್ನು ಆಕರ್ಷಿಸುತ್ತಿರುವ ಆಕ್ಸೆಸರೀಸ್‌ಗಳು
ಇವರೇನು ಕಾಲೇಜು ಹುಡುಗಿಯರೋ ಅಥವಾ ಕಾಡು ಮನುಷ್ಯರೋ? ಕಾಡು ಜನರಂತೆ ಸಮುದ್ರದ ಕಪ್ಪೆ-ಚಿಪ್ಪು, ಕಲ್ಲು-ಮಣ್ಣು-ಮರದ ಬಣ್ಣ ಬಣ್ಣದ ಆಭರಣಗಳನ್ನು ಧರಿಸಿದ್ದಾರಲ್ಲಾ! ಎಂದು ನೀವು ಅಚ್ಚರಿ ಪಟ್ಟರೇ, ಇದು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಟ್ರೈಬಲ್ ಇಮಿಟೇಷನ್ ಆಭರಣಗಳು ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಮಿಕ್ಸ್ – ಮ್ಯಾಚ್ ಆಭರಣಗಳು
ಅಂದಹಾಗೆ, ನಿಮಗೆ ಗೊತ್ತೇ! ಈ ಶೈಲಿಯ ಆಭರಣಗಳನ್ನು ಧರಿಸಲು ಇಂತಹದ್ದೇ ಡ್ರೆಸ್ ಕೋಡ್ ಇರಬೇಕೆಂಬ ರೂಲ್ಸ್ -ರೆಗ್ಯೂಲೇಷನ್ ಇಲ್ಲ! ಅಂದ್ರೆ ಅಚ್ಚರಿಯಾಗಬಹುದು. ಇವು ಟಿಪಿಕಲ್ ಸೀರೆಯಿಂದಿಡಿದು ಡೆನಿಮ್ ಕ್ಯಾಶುವಲ್ಸ್‌ಗೂ ಸೂಟ್ ಆಗುತ್ತವೆ. ಅಷ್ಟೇಕೆ? ನೀವು ಸಿಂಪಲ್ ಆಗಿ ಖಾದಿ ಧರಿಸಿದರೂ ನೋ ಪ್ರಾಬ್ಲಂ. ಯಾವುದೇ ಡ್ರೆಸ್ಸಿಂಗ್‌ಗೂ ವಂಡರ್‌ಫುಲ್ ಆಗಿ ಮ್ಯಾಚ್ ಆಗುತ್ತವೆ. ಶಾರ್ಟ್ ಟಾಪ್-ಜೀನ್ಸ್-ಕುರ್ತಾಗೂ ಪರ್ಫೆಕ್ಟ್ ಮ್ಯಾಚ್ ಆಗುತ್ತವೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | High Waist Pant Fashion: ರೆಟ್ರೊ ಲುಕ್ ನೀಡುವ High Waist Pant ಹಂಗಾಮಾ!
ಸೆಲೆಕ್ಷನ್ ಹೀಗಿರಲಿ
- ನಿಮ್ಮ ಮುಖಾರಾವಿಂದಕ್ಕೆ ಸೂಟ್ ಆಗುವಂತದ್ದನ್ನು ಟ್ರಯಲ್ ನೋಡಿ, ನಂತರ ಕೊಳ್ಳಿ.
- ಫಿನಿಶಿಂಗ್ ಇರುವಂತದ್ದನ್ನು ಆಯ್ಕೆ ಮಾಡಿ.
- ವ್ಯಕ್ತಿತ್ವಕ್ಕೆ ಹೊಂದುವಂತಿರಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)