Saturday, 23rd November 2024

IPL 2025: ʻಮಿಚೆಲ್‌ ಸ್ಟಾರ್ಕ್‌ಗೆ ಅಗ್ರ ಸ್ಥಾನʼ-ಮೆಗಾ ಆಕ್ಷನ್‌ ಇತಿಹಾಸದ ಟಾಪ್‌ 10 ದುಬಾರಿ ಆಟಗಾರರು!

IPL 2025: 'Mitchell Starc at the top'-Top-10 most expensive buys ahead of Mega Auction

ನವದೆಹಲಿ: ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿಗೆ ಇನ್ನು ಒಂದು ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ 10 ಫ್ರಾಂಚೈಸಿಗಳು ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕೆಂಬ ಲೆಕ್ಕಾಚಾರಗಳಲ್ಲಿ ತೊಡಗಿವೆ. ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕೆಎಲ್‌ ರಾಹುಲ್‌, ಮೊಹಮ್ಮದ್‌ ಸಿರಾಜ್‌, ಜೋಸ್‌ ಬಟ್ಲರ್‌, ಫಿಲ್‌ ಸಾಲ್ಟ್‌ ಸೇರಿದಂತೆ ವಿಶ್ವದ ಸ್ಟಾರ್‌ ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದ ಹಾಗೆ ಐಪಿಎಲ್‌ ಮೆಗಾ ಹರಾಜಿನ ಇತಿಹಾಸದಲ್ಲಿ ಹಲವು ಸ್ಟಾರ್‌ ಆಟಗಾರರು ದಾಖಲೆಯ ಮೊತ್ತವನ್ನು ಜೇಬಿಗಳಿಸಿಕೊಂಡಿದ್ದಾರೆ. ಇವರ ಪೈಕಿ ಆಸ್ಟ್ರೇಲಿಯಾದ ಹಿರಿಯ ವೇಗಿ ಮಿಚೆಲ್‌ ಸ್ಟಾರ್ಕ್‌ ಅಗ್ರ ಸ್ಥಾನದಲ್ಲಿದ್ದಾರೆ. ಇದೀಗ ಮೆಗಾ ಹರಾಜಿನ ಇತಿಹಾಸದಲ್ಲಿಯೇ ಅಗ್ರ 10 ದುಬಾರಿ ಆಟಗಾರರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಭಾರತದ ದಿಗ್ಗಜ ಯುವರಾಜ್‌ ಸಿಂಗ್‌ ಸೇರಿದಂತೆ ಕೆಲ ಟೀಮ್‌ ಇಂಡಿಯಾ ಆಟಗಾರರು ಕೂಡ ಈ ಪಟ್ಟಿಯಲ್ಲಿದ್ದಾರೆ.

IPL 2025: ಕೆಕೆಆರ್‌ಗೆ ರಿಂಕು ಸಿಂಗ್‌ ನಾಯಕ?

ಐಪಿಎಲ್‌ ಮೆಗಾ ಹರಾಜಿನ ಇತಿಹಾಸ ಟಾಪ್‌ 10 ದುಬಾರಿ ಆಟಗಾರರು

  1. ಮಿಚೆಲ್‌ ಸ್ಟಾರ್ಕ್‌: 24.75 ಕೋಟಿ ರೂ.

2024ರ ಐಪಿಎಲ್‌ ಮಿನಿ ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌ ಅವರು ದಾಖಲೆಯು ಮೊತ್ತಕ್ಕೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರು ಕಳದ ಆವೃತ್ತಿಯಲ್ಲಿ 24.75 ಕೋಟಿ ರೂ. ಗಳನ್ನು ಪಡೆದುಕೊಂಡಿದ್ದರು. ಆ ಮೂಲಕ ಐಪಿಎಲ್‌ ಹರಾಜು ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎಂಬ ಕೀರ್ತಿಗೆ ಸ್ಟಾರ್ಕ್‌ ಭಾಜನರಾಗಿದ್ದರು. ಇದೀಗ ಅವರು ಮೆಗಾ ಹತಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  1. ಪ್ಯಾಟ್‌ ಕಮಿನ್ಸ್‌: 20.05 ಕೋಟಿ ರೂ.

ಕಳೆದ ಐಪಿಎಲ್‌ ಟೂರ್ನಿಗೂ ಮುನ್ನ ನಡೆದಿದ್ದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮಿನ್ಸ್‌ ಅವರು 20.05 ಕೋಟಿ ರೂ. ಗಳಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸೇರ್ಪಡೆಯಾಗಿದ್ದರು ಹಾಗೂ ತಂಡವನ್ನು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಹೈದರಾಬಾದ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

  1. ಸ್ಯಾಮ್‌ ಕರನ್‌: 18.5 ಕೋಟಿ ರೂ.

2023ರ ಐಪಿಎಲ್‌ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರು 18.5 ಕೋಟಿ ರೂ. ಗಳನ್ನು ಪಡೆದು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ ಪಂಜಾಬ್‌ ಇಂಗ್ಲೆಂಡ್‌ ಆಟಗಾರನನ್ನು ಮೆಗಾ ಹರಾಜಿಗೆ ರಿಲೀಸ್‌ ಮಾಡಿದೆ,

  1. ಕ್ಯಾಮೆರಾನ್‌ ಗ್ರೀನ್‌: 17.5 ಕೋಟಿ ರೂ.

2023ರ ಐಪಿಎಲ್‌ ಮಿನಿ ಹರಾಜಿನಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಸ್ಥಾನಕ್ಕೆ ಆಸ್ಟ್ರೇಲಿಯಾ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿತ್ತು. ಅದರಂತೆ ಆ ಆವೃತ್ತಿಯಲ್ಲಿ ಕ್ಯಾಮೆರಾನ್‌ ಗ್ರೀನ್‌ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮೂಲಕ ಗಮನ ಸೆಳೆದಿದ್ದರು. ಆದರೂ ಅವರನ್ನು ಮುಂಬೈ, ಕಳೆದ ಐಪಿಎಲ್‌ ಮಿನಿ ಹರಾಜಿನ ನಿಮಿತ್ತ ಆರ್‌ಸಿಬಿಗೆ ಬಿಟ್ಟುಕೊಟ್ಟಿತ್ತು.

IPL 2025 Mega Auction: ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿ ಪ್ರಕಟ

  1. ಬೆನ್‌ ಸ್ಟೋಕ್ಸ್‌: 16.25 ಕೋಟಿ ರೂ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದ ಅತ್ಯಂತ ಮೌಲ್ಯಯುತ ಆಲ್‌ರೌಂಡರ್‌ ಆಗಿರುವ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಅವರು ಹಲವು ತಂಡಗಳ ಪರ ಆಡಿದ್ದಾರೆ. ಅವರು 2023ರ ಐಪಿಎಲ್‌ ಮಿನಿ ಹರಾಜಿನಲ್ಲಿ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ 16.25 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆದರೆ, ಗಾಯದ ಕಾರಣ ಅವರು ಆಡಲು ಸಾಧ್ಯವಾಗಿರಲಿಲ್ಲ.

  1. ಕ್ರಿಸ್‌ ಮಾರಿಸ್‌: 16.25 ಕೋಟಿ ರೂ.

ದಕ್ಷಿಣ ಆಫ್ರಿಕಾ ಮಾಜಿ ಆಲ್‌ರೌಂಡರ್‌ ಕ್ರಿಸ್‌ ಮಾರಿಸ್‌ ಅವರು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ಪರ ಆಡಿದ್ದಾರೆ. ಆದರೆ, ಅವರನ್ನು ರಾಜಸ್ಥಾನ್‌ ರಾಯಲ್ಸ್‌ ತಂಡ ಮಿನಿ ಹರಾಜಿನಲ್ಲಿ 16.25 ಕೋಟಿ ರೂ. ಗಳಿಗೆ ಖರೀದಿಸಿ ಜೋಫ್ರಾ ಆರ್ಚರ್‌ ಅವರ ಸ್ಥಾನವನ್ನು ತುಂಬಿತ್ತು.

  1. ಯುವರಾಜ್‌ ಸಿಂಗ್‌: 16 ಕೋಟಿ ರೂ. ಗಳು

ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರು ಕ್ರಿಸ್‌ ಮಾರಿಸ್‌ಗೂ ಮೊದಲು ಹರಾಜಿನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. 2015ರ ಹರಾಜಿನಲ್ಲಿ ಯುವರಾಜ್‌ ಸಿಂಗ್‌ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್‌ (ಈಗಿನ ಡೆಲ್ಲಿ ಕ್ಯಾಪಿಟಲ್ಸ್‌) ತಂಡ 16 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆದರೆ, ಈ ಆವೃತ್ತಿಯಲ್ಲಿ ಯುವಿ ವೈಫಲ್ಯ ಅನುಭವಿಸಿದ್ದರು.

  1. ನಿಕೋಲಸ್‌ ಪೂರನ್‌: 16 ಕೋಟಿ ರೂ. ಗಳು

ವಿಶ್ವದ ಅತ್ಯಂತ ವಿಧ್ವಂಸಕ ಬ್ಯಾಟ್ಸ್‌ಮನ್‌ ವೆಸ್ಟ್‌ ಇಂಡೀಸ್‌ನ ನಿಕೋಲಸ್‌ ಪೂರನ್‌, 2023ರ ಐಪಿಎಲ್‌ ಟೂರ್ನಿಯ ಮಿನಿ ಹರಾಜಿನಲ್ಲಿ 16 ಕೋಟಿ ರೂ ಗಳಿಗೆ ಲಖನೌ ಸೂಪರ್‌ ಜಯಂಟ್ಸ್‌ಗೆ ಸೇರ್ಪಡೆಯಾಗಿದ್ದರು. ಅದರಂತೆ ಅವರು ಮುಂದಿನ ಎರಡು ಆವೃತ್ತಿಗಳಲ್ಲಿ ತಮ್ಮ ಮೌಲ್ಯಕ್ಕೂ ಮೀರಿದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

IPL 2025: ಆರ್‌ಸಿಬಿಗೆ ಓಂಕಾರ್ ಸಾಲ್ವಿ ಬೌಲಿಂಗ್‌ ಕೋಚ್‌

  1. ಇಶಾನ್‌ ಕಿಶನ್:‌ 15.25 ಕೋಟಿ ರೂ.

2022ರ ಮೆಗಾ ಹರಾಜಿನಲ್ಲಿ ಇಶಾನ್‌ ಕಿಶನ್‌ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿತ್ತು. ಈ ಆವೃತ್ತಿಯಲ್ಲಿ ಅವರು ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಮುಂದಿನ ಆವೃತ್ತಿಯಲ್ಲಿ ಇವರನ್ನು ಬೇರೆ ಆಟಗಾರರು ಹಿಂದಿಕ್ಕಿದ್ದರು. ಇದೀಗ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಎಡಗೈ ಆಟಗಾರರನ್ನು ರಿಲೀಸ್‌ ಮಾಡಿದ್ದಾರೆ.

  1. ಗ್ಲೆನ್‌ ಮ್ಯಾಕ್ಸ್‌ವೆಲ್‌: 14.25 ಕೋಟಿ ರೂ.

2021ರ ಐಪಿಎಲ್‌ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಬೆಂಗಳೂರು ಫ್ರಾಂಚೈಸಿಯು 14.25 ಕೋಟಿ ರೂ. ಗಳನ್ನು ನೀಡುವ ಮೂಲಕ ಖರೀದಿಸಿತ್ತು. ಆ ಮೂಲಕ ಎಬಿ ಡಿ ವಿಲಿಯರ್ಸ್‌ ಜೊತೆ ಮ್ಯಾಕ್ಸ್‌ವೆಲ್‌ ಆರ್‌ಸಿಬಿಯ ಮಧ್ಯಮ ಕ್ರಮಾಂಕಕ್ಕೆ ಬಲವನ್ನು ತುಂಬಿದ್ದರು. ಆದರೆ, 2024ರ ಐಪಿಎಲ್‌ನಲ್ಲಿ ಅವರು ವೈಫಲ್ಯ ಅನುಭವಿಸಿದ್ದರು.