ಹುಬ್ಬಳ್ಳಿ: ಶಿಗ್ಗಾಂವಿ ಉಪಚುನಾವಣೆ (Karnataka Bypoll Results) ಸಂದರ್ಭದಲ್ಲಿ ಅಲ್ಲಿಯ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ನವರು (Congress) ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ, ಸ್ವೀಕಾರ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾವು ಶಿಗ್ಗಾವಿ, ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಚುನಾವಣೆಯಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು, ಮಾಜಿ ಶಾಸಕರು ಬಂದು ಇಲ್ಲಿಯೇ ಕುಳಿತು ಪ್ರಚಾರ ಮಾಡಿದರು. ಸರ್ಕಾರ ವರ್ಸಸ್ ಬೊಮ್ಮಾಯಿ ಎಂದೇ ಬಿಂಬಿತವಾಯಿತು. ಅವರು ಸರ್ಕಾರದ ಯಂತ್ರ, ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದರು.
ಶಿಗ್ಗಾವಿಯಲ್ಲಿ ಎಂಪಿ ಚುನಾವಣೆ ನಂತರ ನಾವು ಚೆನ್ನಾಗಿ ಕೆಲಸ ಮಾಡಿದ್ದೆವು. ಆದರೆ ಇಡೀ ಸರ್ಕಾರವೇ ಬಂತು. ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ. ನಾವು ಕೂಡ ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೆವು. ಈ ಸರ್ಕಾರದ ಕೆಲಸದ ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ಸರ್ಕಾರ ಕಳೆದುಕೊಂಡಿದ್ದೇವು. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.