Saturday, 23rd November 2024

PM Narendra Modi: ಮಹಾರಾಷ್ಟ್ರದ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ: ಪಿಎಂ ನರೇಂದ್ರ ಮೋದಿ

Narendra Modi

ನವದೆಹಲಿ: ಮಹಾರಾಷ್ಟ್ರದ (Maharastra Election Result) ಜನತೆ ಮಹಾಯುತಿ ಸರ್ಕಾರವನ್ನು ಮರಳಿ ಆಡಳಿತಕ್ಕೆ ತರುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ (Assembly Election Results) ಫಲಿತಾಂಶದ ಬಳಿಕ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ಜನಾದೇಶವು ವಿರೋಧ ಪಕ್ಷದ ನಕಾರಾತ್ಮಕ ರಾಜಕೀಯವನ್ನು ದೃಢವಾಗಿ ತಿರಸ್ಕರಿಸಿದೆ. ಉದ್ಧವ್ ಠಾಕ್ರೆ ಅವರು ಬಿಜೆಪಿ ಮೈತ್ರಿ ಮುರಿದು ಕಾಂಗ್ರೆಸ್ ಮತ್ತು ಶರದ್ ಪವಾರ್ ಜೊತೆಗೂಡಿ ಸರ್ಕಾರ ರಚಿಸಿದ್ದು ಹಾಗೂ ಎರಡನೇ ಸಂವಿಧಾನ ಕುರಿತು ಮತ್ತು 370ನೇ ವಿಧಿಯನ್ನು ಮರಳಿ ತರುವ ವಿಷಯಗಳನ್ನು ಎತ್ತಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆಯ ರಾಜಕೀಯ ಮಾಡಿದ್ದನ್ನು ಜನ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಚುನಾವಣೆಯು ಇಡೀ ದೇಶಕ್ಕೆ ಮಂತ್ರವಾಗಿ ಮಾರ್ಪಟ್ಟಿರುವ “ಏಕ್ ಹೈ ತೋ ಸೇಫ್ ಹೈ (ಏಕತೆಯಲ್ಲಿ ಸುರಕ್ಷತೆ ಇದೆ)” ಎಂಬ ಧ್ಯೇಯವನ್ನು ಸಾಬೀತುಪಡಿಸಿದೆ. ಮಹಾರಾಷ್ಟ್ರದ ಜನಾದೇಶವು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ನಿಜವಾದ ಸಾಮಾಜಿಕ ನ್ಯಾಯದ ವಿಜಯಕ್ಕೆ ಸಾಕ್ಷಿಯಾಗಿದೆ. ವಂಚನೆ, ವಿಭಜಕ ರಾಜಕೀಯ ಮತ್ತು ಕುಟುಂಬ ರಾಜವಂಶಗಳ ಶಕ್ತಿಗಳನ್ನು ಸೋಲಿಸಲಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಮಹಾರಾಷ್ಟ್ರ ತನ್ನ ಸಂಕಲ್ಪವನ್ನು ಬಲಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದ ಪ್ರತಿಯೊಂದು ಭಾಗವೂ ಬಿಜೆಪಿಗೆ ಮತ ಹಾಕಿದೆ. ಜನರ ಈ ಬದಲಾದ ಮನಸ್ಥಿತಿಯನ್ನು ಅಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಅವರು ವಾಸ್ತವವನ್ನು ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ. ಮತದಾರನಿಗೆ ಅಸ್ಥಿರತೆ ಬೇಕಾಗಿಲ್ಲ. ಮತದಾರ ರಾಷ್ಟ್ರದೊಂದಿಗಿದ್ದಾನೆ. ಅದೇ ಅವನ ಮೊದಲ ಭಾವನೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ಸ್ವಂತವಾಗಿ ಸರ್ಕಾರ ರಚಿಸಲು ಅಸಮರ್ಥವಾಗಿದೆ. ಅದು ಪರಾವಲಂಬಿ ಪಕ್ಷವಾಗಿದ್ದು ಮೈತ್ರಿಗಳನ್ನು ಮಾಡಿಕೊಳ್ಳುತ್ತದೆ ಮತ್ತು ನಂತರ ಮಿತ್ರರನ್ನು ಸಹ ನಿರಾಸೆಗೊಳಿಸುತ್ತದೆ. ಅದೃಷ್ಟವಶಾತ್‌ ಉತ್ತರ ಪ್ರದೇಶದಲ್ಲಿ ಅದರ ಪಾಲುದಾರರು ಕಾಂಗ್ರೆಸ್‌ ಅನ್ನು ತೊಡೆದುಹಾಕಲು ಸಮರ್ಥರಾಗಿದ್ದಾರೆ. ಇಲ್ಲದಿದ್ದರೆ ಅವರೂ ಮುಳುಗುತ್ತಿದ್ದರು ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ರೂಪಿಸಿದೆ ಎಂದ ಅವರು, ವಕ್ಫ್ ಬೋರ್ಡ್ ಅನ್ನು ಉದಾಹರಿಸಿದರು. ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಅವಕಾಶವಿಲ್ಲ. ಇದು ಕಾಂಗ್ರೆಸ್‌ನ ಮತ ಬ್ಯಾಂಕ್ ಅನ್ನು ಹೆಚ್ಚಿಸಲು ಮಾಡಲಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಜಾತ್-ಪಾತ್ (ಜಾತಿ ವಿಭಜನೆ) ವಿರುದ್ಧ ಮಾತನಾಡುತ್ತಿತ್ತು. ಆದರೆ ಇಂದು ಈ ಕುಟುಂಬವೇ ಜಾತಿವಾದದ ವಿಷವನ್ನು ಹರಡುತ್ತಿದೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ: Pralhad Joshi: ಬಡ ಜನರ ಅನ್ನಕ್ಕೆ ಕಲ್ಲು ಹಾಕಿದರೆ ಅವರ ಶಾಪ ತಟ್ಟದೇ ಇರದು! ಪ್ರಲ್ಹಾದ್‌ ಜೋಶಿ