Friday, 29th November 2024

NIA Raid : 6 ರಾಜ್ಯಗಳಲ್ಲಿ NIA ರೇಡ್‌… ಬೃಹತ್‌ ಮಾನವ ಕಳ್ಳ ಸಾಗಣೆ ದಂಧೆಗೆ ಬ್ರೇಕ್‌

NIA Raid

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಾನವ ಕಳ್ಳ ಸಾಗಣೆ ಹೆಚ್ಚಾಗಿದ್ದು (Human trafficking network), ರಾಷ್ಟ್ರೀಯ ತನಿಖಾ ದಳ (NIA) ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA Raid) ದೇಶದ ಗುರುವಾರ ಆರು ರಾಜ್ಯಗಳ 22 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದು, ಆರೋಪಿಗಳಿಗೆ ಸಂಬಂಧಿಸಿದ ವಸ್ತುಗಳು ಮತ್ತು ನಗದು ವಶಪಡಿಸಿಕೊಂಡಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಪಂಜಾಬ್‌ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು ಆರು ರಾಜ್ಯಗಳಲ್ಲಿ ರೇಡ್‌ ನಡೆದಿದೆ.

ಉದ್ಯೋಗ ಕೊಡಿಸುವ ನೆಪದಲ್ಲಿ ಯುವಕರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡುವುದು ಮತ್ತು ಸೈಬರ್ ವಂಚನೆಗಳಲ್ಲಿ (Cyber Crime) ತೊಡಗಿರುವ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಯುವಕ-ಯುವತಿಯರನ್ನು ಬಲವಂತವಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ NIAಯಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಾವೋಸ್, ವಿಯೆಟ್ನಾಂ ಮತ್ತು ಕಾಂಬೋಡಿಯಾದಂತಹ ದೇಶಗಳಿಗೆ ಭಾರತೀಯ ಯುವಕರನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಎನ್‌ಐಎ ತನಿಖೆಯ ಪ್ರಕಾರ, ಉದ್ಯೋಗ ಅರಸಿ ಬರುವ ಭಾರತೀಯ ಯುವಕರೇ ಇವರ ಟಾರ್ಗೆಟ್‌ ಆಗಿದ್ದು, ಉದ್ಯೋಗದ ಆಮಿಷವೊಡ್ಡಿ ಅಕ್ರಮವಾಗಿ ಇವರನ್ನು ವಿದೇಶಗಳಿಗೆ ಸಾಗಿಸಲಾಗುತ್ತದೆ ಎಂದು ಊಹಿಸಲಾಗಿದೆ. ಈ ಜಾಲ ವಿದೇಶಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಂದ ಅಕ್ರಮವಾಗಿ ಸಾಗಿಸಲಾದ ಜನರನ್ನು ವಿದೇಶಿ ಜಾಲಗಳ ಕೈಗೊಪ್ಪಿಸುತ್ತಾರೆ ಎಂಬ ಮಾಹಿತಿ ಕಲೆ ಹಾಕಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಬ್ಯೂರೋ ಆಫ್ ಇಮಿಗ್ರೇಷನ್ ಅಂಕಿಅಂಶಗಳ ಪ್ರಕಾರ, ಸಂದರ್ಶಕ ವೀಸಾದ ಅಡಿಯಲ್ಲಿ ಜನವರಿ 2022 ರಿಂದ ಮೇ 2024 ರ ನಡುವೆ ಥೈಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗೆ ಪ್ರಯಾಣಿಸಿದ 29,466 ಭಾರತೀಯರು ಕಾಣೆಯಾಗಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ 20-39ರ ವಯೋಮಾನದವರು, ಹಾಗೂ ಹೆಚ್ಚಿನವರು ಪಂಜಾಬ್, ಮಹಾರಾಷ್ಟ್ರ ಮತ್ತು ತಮಿಳುನಾಡಿನವರು. ಕಾಣೆಯಾದ ವ್ಯಕ್ತಿಗಳಲ್ಲಿ ಸುಮಾರು 70 ಪ್ರತಿಶತದಷ್ಟು ಜನರು ಥೈಲ್ಯಾಂಡ್‌ನಿಂದ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ದೊರಕಿದೆ.

ಕಾಂಬೋಡಿಯಾವೊಂದರಲ್ಲೇ 5,000 ಭಾರತೀಯ ಪ್ರಜೆಗಳು ಕಾಲ್ ಸೆಂಟರ್ ವಂಚನೆಗಳಲ್ಲಿ ಸಿಕ್ಕಿಬಿದ್ದಿರಬಹುದು ಎಂಬ ಊಹೆ ಇದೆ. ವರದಿಗಳ ಪ್ರಕಾರ, ನೋಮ್ ಪೆನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 1,000 ಕಳ್ಳಸಾಗಾಣಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿದ್ದ ಭಾರತೀಯರನ್ನು ವಾಪಸ್ ಕಳುಹಿಸಿದೆ. ಆಗಸ್ಟ್‌ನಲ್ಲಿ ಲಾವೋಸ್‌ನಿಂದ 47 ಯುವಕರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ : National Investigation Agency : ಬಿಷ್ಣೋಯ್ ಸಹೋದರನ ಸುಳಿವು ಕೊಟ್ಟವರಿ 10 ಲಕ್ಷ ರೂ. ಇನಾಮು ಘೋಷಿಸಿ ಎನ್‌ಐಎ