ದುಬೈ: ಕಳೆದೊಂದು ವರ್ಷದಿಂದ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚಿತ ವಿಷಯವಾದ ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ(Champions Trophy) ಏಕದಿನ ಟೂರ್ನಿ ಆಯೋಜನೆಯ ಬಿಕ್ಕಟ್ಟು ಇಂದು ಪರಿಹಾರ ಕಾಣುವ ಸಾಧ್ಯತೆ ಇದೆ. ಹೈಬ್ರಿಡ್ ಮಾದರಿಗಾಗಿ ಮತದಾನ ನಡೆಸುವ ಸಾಧ್ಯತೆಯೂ ಇದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಆಡಳಿತ ಮಂಡಳಿ ಇಂದು(ಶುಕ್ರವಾರ) ವರ್ಚುವಲ್ ಮೂಲಕ ಮಹತ್ವದ ಸಭೆ ನಡೆಸಲಿದ್ದು ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಭಾರತ ನಿರಾಕರಿಸಿರುವುದರಿಂದ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಒಲವು ತೋರುವ ನಿರೀಕ್ಷೆ ಇದೆ. ಭಾರತ ಬಾರದಿದ್ದರೂ ಟೂರ್ನಿ ನಡೆಸಬೇಕೆಂದು ಪಿಸಿಬಿ ಬಯಸಿದ್ದರೂ, ಭಾರತವನ್ನು ಬಿಟ್ಟು ಟೂರ್ನಿ ನಡೆಸಲು ಐಸಿಸಿ ಸಿದ್ಧವಿಲ್ಲ ಎನ್ನಲಾಗಿದೆ.
8 ತಂಡಗಳು ಭಾಗವಹಿಸಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಬೇಕಿದೆ. ಆದರೆ ಭದ್ರತಾ ಭೀತಿಯಿಂದಾಗಿ ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ವಿಷಯವನ್ನು ಬಿಸಿಸಿಐ ತಿಳಿಸಿದ ಬೆನ್ನಲ್ಲೇ ಐಸಿಸಿ, ಹೈಬ್ರಿಡ್ ಮಾದರಿಯಲ್ಲಿ ಭಾರತದ ಪಂದ್ಯಗಳು ಪಾಕ್ನಿಂದ ಹೊರಗೆ ಆಯೋಜನೆ ನಡೆಸಲು ಐಸಿಸಿ ಪ್ರಯತ್ನಿಸಿದರೂ, ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದನ್ನು ತಿರಸ್ಕರಿಸಿದೆ. ಪ್ರಸ್ತುತ ಇಸ್ಲಾಮಾಬಾದ್‌ನಲ್ಲಿ ತಲೆದೂರಿರುವ ರಾಜಕೀಯ ಸಂಘರ್ಷವನ್ನು ಪ್ರಸ್ತಾವಿಸಿ ಪಾಕ್ ಅನ್ನು ಹೈಬ್ರಿಡ್‌ಗೆ ಒಪ್ಪಿಸಲೂ ಐಸಿಸಿ ಯತ್ನಿಸುವ ಸಾಧ್ಯತೆಯೂ ಇದೆ.
ಇದನ್ನೂ ಓದಿ Champions Trophy: ಹೈಬ್ರಿಡ್ ಮಾದರಿಯಲ್ಲೇ ಚಾಂಪಿಯನ್ಸ್ ಟ್ರೋಫಿ; ಪಾಕ್‌ಗೆ ಹಿನ್ನಡೆ
ಕ್ರಿಕ್‌ಬಝ್ ವರದಿ ಪ್ರಕಾರ ಪಾಕಿಸ್ತಾನದಲ್ಲಿ 10 ಪಂದ್ಯಗಳು ಮತ್ತು ತಟಸ್ಥ ತಾಣದಲ್ಲಿ ಒಂದು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ನಡೆಸಲು, ಭಾರತ ಸೆಮಿಫೈನಲ್‌ಗೇರದಿದ್ದರೆ, ಸೆಮೀಸ್, ಫೈನಲ್ ಪಂದ್ಯಗಳನ್ನೂ ಪಾಕ್‌ನಲ್ಲೇ ನಡೆಸುವುದು ಐಸಿಸಿಯ ಯೋಜನೆಯಾಗಿದೆ ಎಂದು ತಿಳಿಸಿದೆ.
ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.