ಲಖನೌ: ದೇಶದಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ (Uttar Pradesh) ಒಂದು ಅಮಾನುಷ ಘಟನೆಯೊಂದು ವರದಿಯಾಗಿದೆ. ಜಲೌನ್ನ ನರ್ಸ್ ಒಬ್ಬರು ತನ್ನ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದು, ಇತರ ನಾಲ್ವರು ತನ್ನನ್ನು ಥಳಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತೆಯ ಕುಟುಂಬ ಕೂಡ ಆರೋಪ ನಡೆಸಿದ್ದು, ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿ ಎರಚಿ, ಕಡ್ಡಿ ಚುಚ್ಚಲಾಗಿದ್ದು, ದೈಹಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ (UP Horror).
ಗುರುವಾರ ಬೆಳಗ್ಗೆ ಚುರ್ಖಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ, ಪೊದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಪತಿ ಹೇಳಿಕೆ ನೀಡಿದ್ದಾರೆ.
ಪ್ರಕರಣದಲ್ಲಿ ಟ್ವಿಸ್ಟ್ !
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಬೇರೆಯದ್ದೇ ಕಥೆ ಹೇಳಿದ್ದಾರೆ. ಸಂತ್ರಸ್ತ ಮಹಿಳೆ ಹಳ್ಳಿಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ಯಾವುದೋ ಒಂದು ಕಾರಣಕ್ಕೆ ಮಹಿಳೆ ಹಾಗೂ ವ್ಯಕ್ತಿಗೆ ವಾದ ವಿವಾದ ಏರ್ಪಟ್ಟಿದ್ದು, ವ್ಯಕ್ತಿ ಮತ್ತು ಆತನ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಾಮೂಹಿಕ ಅತ್ಯಾಚಾರದ ಕುರುಹುಗಳಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಜಲೌನ್ನಲ್ಲಿ ಆಕ್ರೋಶ ಹೆಚ್ಚಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಇತ್ತೀಚೆಗೆ ಉತ್ತರದ ಪ್ರದೇಶದ ಮುರಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ನರ್ಸ್ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಅತ್ಯಾಚಾರ ಆರೋಪಿ ಡಾ . ಶಹನಾವಜ್ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮುರಾಬಾದ್ ಆಸ್ಪತ್ರೆಗೆ ರಾತ್ರಿ ಪಾಳಿಗೆ ಬಂದಿದ್ದ ನರ್ಸ್ನ್ನು ಆರೋಪಿ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ವೈದ್ಯರ ಕೊಠಡಿಗೆ ಹೋಗಲು ನಿರಾಕರಿಸಿದಾಗ ಇಬ್ಬರು ವಾರ್ಡ್ ಬಾಯ್ಗಳು ಆಕೆಯನ್ನು ಎಳೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಸಂತ್ರಸ್ತೆ ತನ್ನ ಪಾಲಕರಿಗೆ ದೂರು ನೀಡಿದ್ದು, ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : Jama Mosque Violence: ಮಸೀದಿ ಸರ್ವೆಗೆ ಹೋದ ಅಧಿಕಾರಿಗಳಿಗೆ ಕಲ್ಲೇಟು; ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ