ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಕೈಕೊಟ್ಟ (Fraud) ಯುವಕನ ವಂಚನೆಗೆ ನೊಂದು ಯುವತಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ದಕ್ಷಿಣ ಕನ್ನಡ (Dakshina Kannada news) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆಕೆ 17 ವರ್ಷದ ಅಪ್ರಾಪ್ತ ಯುವತಿ. ಮೊಬೈಲ್ ಮೂಲಕ ಕೆಲವೇ ತಿಂಗಳ ಅವಧಿಯಲ್ಲಿ ಪರಿಚಯವಾಗಿದ್ದ ಯುವಕನ ಜೊತೆ ಆಕೆ ಪ್ರೇಮದ ಬಲೆಗೆ ಬಿದ್ದಿದ್ದಳು. ಯುವತಿಗೆ ತನ್ನ ಸಂಬಂಧಿ ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ ಎಂಬಾತನ ಜೊತೆಗೆ ಮೊಬೈಲ್‌ನಲ್ಲಿ ಮಾತುಕತೆಯ ಸಂದರ್ಭದಲ್ಲಿ ಲವ್ ಆಗಿತ್ತು. ಯುವತಿ ಆತನನ್ನೇ ಭಾವಿ ಗಂಡ ಎಂದು ಮನದಲ್ಲಿ ಗಟ್ಟಿಗೊಳಿಸಿಕೊಂಡಿದ್ದಳು. ಪ್ರವೀಣ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದು, ಊರಿಗೆ ಬಂದಾಗ ಮೀಟ್ ಮಾಡುತ್ತಿದ್ದ. ಕೆಲವೇ ತಿಂಗಳ ಲವ್ನಲ್ಲಿ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿತ್ತು.
ಪ್ರವೀಣ್ ಯುವತಿಯ ತಾಯಿ ಬಳಿ ಈ ಹಿಂದೆಯೇ ದೇವರ ಆಣೆ ಹಾಕಿ ಆಕೆಯನ್ನೇ ಮದುವೆಯಾಗೋದಾಗಿ ಹೇಳಿದ್ದಾನೆ. ಪ್ರವೀಣನ ಮಾತನ್ನು ನಂಬಿ ಯುವತಿಯ ತಾಯಿಯೂ ಪ್ರವೀಣನ ಜೊತೆಗೆ ತಿರುಗಾಡೋಕೆ ಅನುಮತಿ ನೀಡಿದ್ದಾರೆ. ಯುವತಿ ಮನೆಯವರು ಪ್ರಾಪ್ತವಯಸ್ಸಿಗೆ ಬಂದಾಗ ಮದುವೆ ಮಾಡಿ ಕೊಡುವುದಾಗಿ ಹೇಳಿದ್ದಾರೆ. ಕೇವಲ ಎಂಟು ತಿಂಗಳ ಪ್ರೇಮದಲ್ಲಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು. ಈ ಸಂದರ್ಭದಲ್ಲಿ ಯುವತಿಗೆ ಪ್ರವೀಣ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನೆ.
ಈ ನಡುವೆ ಪ್ರವೀಣ ಆಕೆಯಿಂದ ದೂರವಾಗಬಯಸಿದ್ದು, ಬ್ರೇಕಪ್ ಮಾಡಿಕೊಳ್ಳೋಣ ಎಂದು ಹೇಳಿದ್ದಾನೆ. ಪ್ರವೀಣ ವಂಚಿಸಿದ್ದನ್ನು ಸಹಿಸಲಾಗದೆ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್ 20ರಂದು ಈಕೆ ವಿಷ ಸೇವಿಸಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ನವೆಂಬರ್ 26ರ ಮಂಗಳವಾರ ಸಾವನ್ನಪ್ಪಿದ್ದಾಳೆ.
ನವೆಂಬರ್ ಇಪ್ಪತ್ತರ ಮಧ್ಯರಾತ್ರಿ ವಾಂತಿ ಮಾಡಿಕೊಂಡಾಗ ಯುವತಿ ತಾಯಿಯ ಜೊತೆ ಪ್ರವೀಣನಿಂದ ಆದ ಮೋಸದ ಬಗ್ಗೆ ಹೇಳಿಕೊಂಡಿದ್ದಾಳೆ. ಪ್ರವೀಣ್ ತನ್ನನ್ನು ಬಳಸಿಕೊಂಡೊರುವುದಾಗಿ ಹೇಳಿದ್ದಾಳೆ. ಯುವತಿ ಸಾವನ್ನಪ್ಪುತ್ತಲೇ ಆರೋಪಿ ಪ್ರವೀಣ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಪ್ರವೀಣನ ಬೆನ್ನು ಹತ್ತಿದ್ದಾರೆ.
ಇದನ್ನೂ ಓದಿ: KSRTC Breaking: ಕೆಎಸ್‌ಆರ್‌ಟಿಸಿ ಬಸ್ ಹರಿದು ದಂಪತಿ ಸ್ಥಳದಲ್ಲಿಯೇ ಸಾವು