ಚೆನ್ನೈ: ಫೆಂಗಲ್ (Fengal) ಚಂಡಮಾರುತವು ಶನಿವಾರ ತಮಿಳುನಾಡು(Tamil Nadu) ಮತ್ತು ಪುದುಚೇರಿ ಕರಾವಳಿಯ ಕಾರೈಕಲ್ ಮತ್ತು ಮಹಾಬಲೀಪುರಂ ನಡುವೆ ಅಪ್ಪಳಿಸುವ ಸಾಧ್ಯತೆಯಿದ್ದು, ಈ ವೇಳೆ ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ (Cyclone Fengal).
ಐಎಂಡಿ (India Meteorological Department) ಗುರುವಾರ(ನ.28) ಬೆಳಗ್ಗೆ ತನ್ನ ‘ಎಕ್ಸ್’ ಪೋಸ್ಟ್ನಲ್ಲಿ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಇದರಿಂದ ಉಂಟಾಗಿರುವ ಚಂಡಮಾರುತ ನವೆಂಬರ್ 30ರ ಬೆಳಗ್ಗೆ ಉತ್ತರ ತಮಿಳುನಾಡು-ಪುದುಚೇರಿ ಕರಾವಳಿ ಪ್ರದೇಶಗಳಾಗಿರುವ ಕಾರೈಕಲ್ ಮತ್ತು ಮಹಾಬಲೀಪುರಂ ಮಧ್ಯೆ ಅಪ್ಪಳಿಸಲಿದೆ. ತಮಿಳುನಾಡಿನ ಹಲವು ಪ್ರದೇಶಗಳಲ್ಲಿ 2-3 ದಿನಗಳು ನಿರಂತರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಇಂದು ಸಂಜೆ ಮತ್ತು ನಾಳೆ ಬೆಳಗ್ಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಗಾಳಿ ಗಂಟೆಗೆ 85 ಕಿ.ಮೀ ವೇಗದಲ್ಲಿ ಬೀಸಲಿದ್ದು, ಕಡಿಮೆ ಒತ್ತಡ ಪ್ರದೇಶ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಶಾಲೆಗಳಿಗೆ ರಜೆ
ಚಂಡಮಾರುತ ಮತ್ತು ಭೀಕರ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಪುದುಚೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಪುದುಚೇರಿ ಶಿಕ್ಷಣ ಸಚಿವ ಅರುಮುಗಂ ನಮ:ಶಿವಾಯಂ ಮಾಹಿತಿ ನೀಡಿದ್ದಾರೆ. ಎಲ್ಲಾ ಖಾಸಗಿ ಆಡಳಿತ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೂ ರಜೆ ನೀಡಲಾಗಿದ್ದು, ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್, ನಾಗಪಟ್ಟಣಂ, ಚೆನ್ನೈ, ಚೆಂಗಲ್ಪೇಟ್, ಅರಿಯಲೂರ್ ಮತ್ತು ಕಾಂಚೀಪುರಂಗಳಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನೌಕಾ ಸೇನೆಯ ಸಿದ್ಧತೆಗಳು
ಮುಂದಿನ ಎರಡು ದಿನದಲ್ಲಿ ತೀವ್ರವಾಗಲಿರುವ ಚಂಡಮಾರುತವನ್ನು ಎದುರಿಸಲು ನೌಕಾಪಡೆ ಸಜ್ಜಾಗಿದೆ. ಪೂರ್ವ ನೌಕಾ ಕಮಾಂಡ್ ಪ್ರಧಾನ ಕಚೇರಿ, ತಮಿಳುನಾಡು ಮತ್ತು ಪುದುಚೇರಿ ನೌಕಾ ಕಚೇರಿಯ ಆದೇಶದಂತೆ ಈಗಾಗಲೇ ವಿಪತ್ತು ನಿರ್ವಹಣೆಯ ಕಾರ್ಯವಿಧಾನಗಳಲ್ಲಿ ಸಕ್ರಿಯಗೊಂಡಿದೆ. ನೆರವು, ವಿಪತ್ತು ಪರಿಹಾರ ಮತ್ತು ಶೋಧ ಕಾರ್ಯಗಳಿಗೆ ನೌಕಾ ಪಡೆಗಳು ಸಿದ್ಧಗೊಂಡಿವೆ. ಹಾಗೆಯೇ, ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಡೈವಿಂಗ್ ತಂಡಗಳು ಸನ್ನದ್ಧವಾಗಿವೆ. ರಕ್ಷಣಾ ಪಡೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಕಾರ್ಯನಿರ್ವಹಿಸಲಿವೆ. ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಆಹಾರ, ನೀರು ಮತ್ತು ಔಷಧಗಳಂತಹ ಅಗತ್ಯ ವಸ್ತುಗಳ ಪೂರೈಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೆಲ್ಲೋ, ಆರೆಂಜ್ ಅಲರ್ಟ್
ಪ್ರಾದೇಶಿಕ ಹವಾಮಾನ ಕೇಂದ್ರ ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಮತ್ತು ಆರೆಂಜ್ ಆಲರ್ಟ್ ಘೋಷಿಸಿದೆ. ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಿಗೆ ಈ ಎಚ್ಚರಿಕೆ ನೀಡಲಾಗಿದ್ದು, ನವೆಂಬರ್ 31 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕರ್ನಾಟಕದಲ್ಲೂ ಭಾರೀ ಮಳೆ ಸಾಧ್ಯತೆ
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 10 ಜಿಲ್ಲೆಗಳಲ್ಲಿ ಡಿ.1ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗುತ್ತಿದೆ. ಡಿ.1ರಿಂದ ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.
ಡಿ.1ಕ್ಕೆ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಡಿ.2 ಮತ್ತು ಡಿ.3ಕ್ಕೆ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ನೀಡಲಾಗಿದೆ. ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿಯೂ ಮಳೆ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ವಿಜಯಪುರ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಅತಿ ಕಡಿಮೆ 11.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Tamil Nadu Rains: ತಮಿಳುನಾಡಿಗೆ ಅಪ್ಪಳಿಸಲಿದೆ ಫೆಂಗಲ್ ಚಂಡಮಾರುತ; ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ