ನವದೆಹಲಿ: ಐಪಿಎಲ್(IPL 2025) ಹರಾಜಿನಲ್ಲಿ ಆರ್ಸಿಬಿ(Royal Challengers Bengaluru) ಕೆಎಲ್ ರಾಹುಲ್(KL Rahul) ಅವರನ್ನು ಖರೀದಿ ಮಾಡಲು ನಿರಾಕರಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ನೀಡಿ ಖರೀದಿ ಮಾಡಿತ್ತು. ಇದೀಗ ರಾಹುಲ್ ಖರೀದಿಯ ಬಗ್ಗೆ ಡೆಲ್ಲಿ ತಂಡದ ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಸಂತಸ ವ್ಯಕ್ತಪಡಿಸಿದ್ದು, ರಾಹುಲ್ ಖರೀದಿಗೆ ದೊಡ್ಡ ಮೊತ್ತವನ್ನು ನೀಡಲು ಮುಂದಾಗಿದ್ದೆ ಎಂದಿದ್ದಾರೆ.
ರಿಷಬ್ ಪಂತ್ ರನ್ನು ಕೈ ಬಿಟ್ಟ ಮೇಲೆ ಡೆಲ್ಲಿ ತಂಡಕ್ಕೆ ಒಬ್ಬ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮತ್ತು ನಾಯಕನಾಗಬಲ್ಲ ಆಟಗಾರನ ಅವಶ್ಯಕತೆಯಿತ್ತು. ಹೀಗಾಗಿ ರಾಹುಲ್ ರನ್ನು ಹೇಗಾದರೂ ಖರೀದಸಲೇ ಬೇಕು ಎಂದು ನಾವು ನಿರ್ಧರಿಸಿದ್ದೆವು. ಒಂದು ವೇಳೆ ರಾಹುಲ್ ಬೆಲೆ 14 ಕೋಟಿ ದಾಟಿದ್ದರೂ ನಾವು ವೆಚ್ಚ ಮಾಡಲು ತಯಾರಿದ್ದೆವುʼ ಎಂದು ಪಾರ್ಥ್ ಜಿಂದಾಲ್ ಹೇಳಿದರು.
ರಾಹುಲ್ ಡೆಲ್ಲಿ(KL Rahul DC) ತಂಡ ಸೇರುತ್ತಿದ್ದಂತೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಭಿಮಾನಿಗಳು ಭಾರೀ ಸಂಭ್ರಮಾಚರಣೆ ಮಾಡಿದ್ದಾರೆ. ಡೆಲ್ಲಿ ತಂಡದ ಅಭಿಮಾನಿಗಳು ವಿಶೇಷ ವಿಡಿಯೊ ಮೂಲಕ ರಾಹುಲ್ಗೆ ವೆಲ್ಕಮ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
‘ಇನ್ನು ಮುಂದೆ ದಿಲ್ಲಿ ರಾಹುಲ್ ಹೆಸರನ್ನು ಕೇಳಲಿದೆ, ರಾಹುಲ್ ಎಂದರೆ ಕ್ಲಾಸ್, ಮಾಸ್ ಪ್ಲೇಯರ್’ ಎಂದು ರಾಹುಲ್ ಬಗ್ಗೆ ಡೆಲ್ಲಿ ತಂಡದ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುವ ವಿಡಿಯೊವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ಒಂದೆಡೆ ಡೆಲ್ಲಿ ಅಭಿಮಾನಿಗಳು ರಾಹುಲ್ ತಮ್ಮ ತಂಡಕ್ಕೆ ಸೇರ್ಪಡೆಗೊಂಡ ಸಂಭ್ರಮ ಆಚರಿಸಿದರೆ ಇನ್ನೊಂದೆಡೆ ಆರ್ಸಿಬಿ ಅಭಿಮಾನಿಗಳು ಆರ್ಸಿಬಿ ಫ್ರಾಂಚೈಸಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗುವುದು ಖಚಿತವಾಗಿದೆ. ಇದುವರೆಗೆ ರಾಹುಲ್ 132 ಐಪಿಎಲ್ ಪಂದ್ಯವನ್ನಾಡಿ 4683 ರನ್ ಬಾರಿಸಿದ್ದಾರೆ. ಈ ವೇಳೆ 4 ಶತಕ ಕೂಡ ಬಾರಿಸಿದ್ದಾರೆ. ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿದೆ. ರಾಹುಲ್ ಮಾತ್ರವಲ್ಲದೆ ಕನ್ನಡಿಗನಾದ ಕರುಣ್ ನಾಯರ್, ಮನ್ವಂತ್ ಕುಮಾರ್ ಕೂಡ ಡೆಲ್ಲಿ ತಂಡ ಸೇರಿದ್ದಾರೆ. ಒಟ್ಟು ಮೂವರು ಕನ್ನಡಿಗರು ಡೆಲ್ಲಿ ತಂಡದಲ್ಲಿದ್ದಾರೆ.