Friday, 29th November 2024

Madhu Bangarappa: ಸಚಿವ ಮಧು ಬಂಗಾರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ, ನಿಂದನೆ, ದೂರು ದಾಖಲು

madhu bangarappa

ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga news) ಶಿಕ್ಷಣ ಸಚಿವ (Education minister) ಮಧು ಬಂಗಾರಪ್ಪ (Madhu Bangarappa) ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ (Derogatory post) ಹಾಕಿದ ಆರೋಪದ ಮೇಲೆ ಮೋಹಿತ್ ನರಸಿಂಹ ಮೂರ್ತಿ ಎಂಬವರ ವಿರುದ್ಧ ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಲಾದ ಈ ಪೋಸ್ಟ್‌ನಲ್ಲಿ ಸಚಿವರನ್ನು ಅವಹೇಳನ ಮಾಡಲಾಗಿದೆ ಮತ್ತು ಸರ್ಕಾರದ ವಿರುದ್ಧ ದಂಗೆಯನ್ನು ಉತ್ತೇಜಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.

“ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ನಿಮ್ಮಪ್ಪನ ಮನೆ ದುಡ್ಡಲ್ಲಿ ಏನಾದ್ರು ಅವರಿಗೆ ಶಿಕ್ಷಣ ಕೊಡ್ತೀರಾ? ನೀನು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡು ಲೂಟಿ ಮಾಡಿ ಅನ್ನೋದು ಸಾಮಾನ್ಯ ಪರಿಜ್ಞಾನ ಇರ್ಲಿ. ಸಾರ್ವಜನಿಕರ ದುಡ್ಡಲ್ಲಿ ದರ್ಪ ಮಾಡುತ್ತೀಯನೋ? ಸಾರ್ವಜನಿಕರ ದುಡ್ಡಲ್ಲಿ ಬದುಕುತ್ತಿದ್ದೀಯ, ನಿಮ್ಮಪ್ಪನ ಮನೆ ದುಡ್ಡಲ್ಲಿ ಅಲ್ಲ. ಏನೋ ನಿನ್ನ ದರ್ಪ? ನೀನು ನಿನ್ನ ಕುಟುಂಬದವರು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡಲ್ಲಿ. ಲೂಟಿ ಮಾಡಿ ನೀವು ಮಾಜಾ ಮಾಡಿಕೊಂಡು ಸಾರ್ವಜನಿಕರ ಮೇಲೆ ದರ್ಪ ತೋರುತ್ತೀಯನೋ? ನೀನೇನಾದರು ನಿಮ್ಮಪ್ಪನ ಮನೆಯಿಂದ ತಂದುಕೊಟ್ಟು ಸಾರ್ವಜನಿಕರಿಗೆ ಸೇವೆ ಮಾಡಿದ್ದೀರಾ?” ಎಂದು ಆರೋಪಿ ಟೀಕಿಸಿದ್ದಾನೆ.

“ಸಾರ್ವಜನಿಕರ ಸೇವೆ ಮಾಡೋಕೆ ಯೋಗ್ಯತೆ ಇಲ್ಲ ಅಂದರೆ ರಾಜಿನಾಮೆ ಕೊಟ್ಟು ಹೋಗಿ ಮಜಾ ಮಾಡಲಿ ಮನೇಲಿ. ದರ್ಪ ತೋರಿಸುತ್ತೀಯ, ಮೆಟ್ ಮೆಟ್‌ನಲ್ಲಿ ಹೊಡಿತಾರೆ ರೋಡಲ್ಲಿ. ಯಾರ ಮೇಲೋ ದರ್ಪ ತೋರಿಸೋದು? ಸಾರ್ವಜನಿಕರ ಪರಿಶ್ರಮದಿಂದ ನೀವು ಕೂತುಕೊಂಡಿರೋದು ಅಧಿಕಾರದಲ್ಲಿ ನೆನಪಿರಲಿ. ಸಾರ್ವಜನಿಕರ ಆಸ್ತಿ ಲೂಟಿ ಮಾಡುವುದು ಪುನಃ ಸಾರ್ವಜನಿಕರ ಮೇಲೆ ದರ್ಪ ತೋರಿಸುವುದು, ಏನ್ ನಿಮ್ಮಪ್ಪನ ಮನೆಯಿಂದ ತಂದುಕೊಡುತ್ತೀಯೇನೋ? ದೌರ್ಜನ್ಯ ಮಾಡಿರುವ ವಿದ್ಯಾರ್ಥಿಗಳಿಗೆ ಕ್ಷಮೆ ಕೇಳು. ಇಲ್ಲಾಂದರೆ ಮೆಟ್ ಮೆಟ್ ಹರಿತಾವ” ಎಂದು ಆರೋಪಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

ಆರೋಪಿ ಮೋಹಿತ್ ನರಸಿಂಹ ಮೂರ್ತಿ ಸಚಿವರ ವಿರುದ್ಧ ಅವಾಚ್ಯವಾಗಿ ನಿಂದಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಎಕ್ಸ್​​ ಮತ್ತು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಈ ಸಂಬಂಧ ಆರೋಪಿ ಮೋಹಿತ್ ನರಸಿಂಹ ಮೂರ್ತಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು, ರಾಜ್ಯ ಸರ್ಕಾರದ ಸಚಿವರನ್ನು ಹಾಗೂ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಉದ್ದೇಶಿಸಿ, ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಮತ್ತು ಸರ್ಕಾರದ ಘನತೆಗೆ ಧಕ್ಕೆ ತರುವಂತಹ, ಸರ್ಕಾರದ ಯೋಜನೆಯ ವಿರುದ್ಧವಾಗಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿ, ಸಾರ್ವಜನಿಕರನ್ನು ಉದ್ರೇಕಿಸಿ ಸರ್ಕಾರದ ವಿರುದ್ಧ ದಂಗೆ ಏಳಿಸುವ ಹಾಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Madhu Bangarappa: ಶಿಕ್ಷಣ ಸಚಿವರಿಗೆ ಕನ್ನಡ ಬರೋದಿಲ್ಲ ಅನ್ನೋದು ರಾಜ್ಯಕ್ಕೇ ಗೊತ್ತು: ಯತ್ನಾಳ್‌ ಕಿಡಿ