Friday, 29th November 2024

CM Siddaramaiah: ಶಾಸಕರಿಗೆ 25 ಕೋಟಿ ರೂ. ಅನುದಾನ, ಸಿಎಂ ಬಂಪರ್‌ ಗಿಫ್ಟ್‌

siddaramaiah parameshwara

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಮ್ಮ ಶಾಸಕರಿಗೆ 25 ಕೋಟಿ ರೂ.‌ ಅನುದಾನ ನೀಡಲು ತೀರ್ಮಾನ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರಿಗೂ 10ರಿಂದ 15 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಗೃಹ ಸಚಿವರಾದ ಪರಮೇಶ್ವರ್‌ (home minister G Parameshwara) ಹೇಳಿದ್ದಾರೆ.

ಈ ಕುರಿತು ಅವರು ತುಮಕೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಈ ಹಿಂದಿನ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ 10 ಕೋಟಿ ರೂ. ನೀಡುತ್ತಿದ್ದರು. ತಮ್ಮ ಪಕ್ಷದ ಶಾಸಕರಿಗೆ 50 ಕೋಟಿ ರೂ. ಅನುದಾನ ನೀಡಿದ್ದರು ಎಂದು ಗೃಹ ಸಚಿವರಾದ ಪರಮೇಶ್ವರ್‌ ಅವರು ಆರೋಪಿಸಿದರು. ತುಮಕೂರು ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಡಿ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಪರಮೇಶ್ವರ ಅವರು ತಿಳಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಕೈಗಾರಿಕೆ ಸಚಿವ ಎಂ‌ಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಂತಾದ ಸಚಿವರು, ಜಿಲ್ಲೆಯ ಎಲ್ಲ‌ ಕ್ಷೇತ್ರಗಳ ಶಾಸಕರು ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ಸುಮಾರು ರೂ. 938 ಕೋಟಿ ಮೊತ್ತದ 825 ಕಾಮಗಾರಿಗಳಿಗೆ ಶಂಕುಸ್ಥಾಪನೆ, 94 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಮಗಾರಿಗಳ ಉದ್ಘಾಟನೆ. ವಿವಿಧ ಇಲಾಖೆಗಳ 1.50‌ ಲಕ್ಷ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಕಂದಾಯ ಇಲಾಖೆಯಿಂದ ಇ-ಸ್ವತ್ತು, ಹಕ್ಕು ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು. ಕೃಷಿ ಇಲಾಖೆಯಿಂದ ಫಲಾನುಭವಿ ರೈತರಿಗೆ ಟ್ರ್ಯಾಕ್ಟರ್, ಡೀಸೆಲ್ ಇಂಜಿನ್, ಪಿವಿಸಿ ಪೈಪ್, ತುಂತುರು ನೀರಾವರಿಯ ಕಿಟ್‌ಗಳು, ತೋಟಗಾರಿಕೆ ಇಲಾಖೆಯಲ್ಲಿ ಹನಿ‌ನೀರಾವರಿ, ಪವರ್‌ಫೀಡರ್ಸ್, ರೇಷ್ಮೇ ಇಲಾಖೆಯ 2100 ಫಲಾನುಭವಿಗಳಿಗೆ ಸೋಂಕು ನಿವಾರಣಾ ಕಿಟ್, ದೇವರಾಜು ಅರಸು ನಿಗಮದಿಂದ ಮಹಿಳೆಯರಿಗೆ 200 ಹೊಲಿಗೆ ಯಂತ್ರ, ಟ್ಯಾಕ್ಸಿ, ಕಾರ್ಮಿಕ‌ ಇಲಾಖೆಯಿಂದ ವೆಲ್ಡಿಂಗ್ ಟೂಲ್‌ ಕಿಟ್‌ ಸೇರಿದಂತೆ ಜಿಲ್ಲಾಡಳಿತ ಗುರುತಿಸಿರುವ 1.50 ಲಕ್ಷ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಂಚಿಕೆ‌ ಮಾಡಲಾಗುವುದು ಎಂದು‌ ಮಾಹಿತಿ ನೀಡಿದರು.

ನಮ್ಮ ಸರ್ಕಾರವು ಎಲ್ಲ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ.‌ ಅಲ್ಲದೇ, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂಬ ಜನಸಮೂಹಕ್ಕೆ ಸಂದೇಶ ರವಾನೆಯಾಗಬೇಕು. ಸರ್ಕಾರದ ಮೇಲೆ ಟೀಕೆ ಟಿಪ್ಪಣಿಗಳನ್ನು ಮಾಡುವವರಿಗೆ ಉತ್ತರವಾಗಲಿದೆ. ಕಂದಾಯ ಇಲಾಖೆಯಿಂದ 2000 ಸಾವಿರ ಹಕ್ಕು ಪತ್ರಗಳನ್ನು ಹಂಚಿಕೆ‌ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಿದೆ. ಸಂಜೀವಿನಿ ಕಾರ್ಯಕ್ರಮದಡಿ 40 ಸಾವಿರ ಮಹಿಳೆಯರಿಗೆ 40 ಕೋಟಿ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: BPL Cards: ಬಿಪಿಎಲ್‌ ಕಾರ್ಡ್‌ ರದ್ದು ಮಾಡದಂತೆ ಸಿಎಂ ಸಿದ್ದರಾಮಯ್ಯ ಆದೇಶ