Friday, 29th November 2024

Shubman Gill: ಪಿಂಕ್‌ ಬಾಲ್‌ ಟೆಸ್ಟ್‌ಗೆ ಗಿಲ್‌ ಫಿಟ್‌; ಪಡಿಕ್ಕಲ್‌ಗೆ ಗೇಟ್‌ ಪಾಸ್ ಸಾಧ್ಯತೆ

ಅಡಿಲೇಡ್‌: ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯ ಗೆದ್ದಿರುವ ಟೀಮ್‌ ಇಂಡಿಯಾಕ್ಕೆ(Australia vs India) ಮತ್ತೊಂದು ಶುಭ ಸುದ್ದಿ ಲಭಿಸಿದೆ. ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಶುಭಮನ್‌ ಗಿಲ್‌(Shubman Gill) ಚೇತರಿಸಿಕೊಂಡು ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ್ದಾರೆ. ವಾಕಾದಲ್ಲಿ ಅಭ್ಯಾಸ ಪಂದ್ಯವನ್ನಾಡುವ ವೇಳೆ ಎಡಗೈ ಹೆಬ್ಬೆರಳಿನ ಗಾಯದಿಂದ ಗಿಲ್‌ ಮೊದಲ ಪಂದ್ಯದಿಂದ ಹೊರಗುಳಿದಿದ್ದರು.

ಗಿಲ್‌ ಶುಕ್ರವಾರದಂದು ಕ್ಯಾನ್‌ಬೆರಾದಲ್ಲಿ ಮನುಕಾ ಓವಲ್‌ನಲ್ಲಿ ನೆಟ್ಸ್‌ನಲ್ಲಿ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ ಎಂದು ಬ್ಯಾಟಿಂಗ್‌ ಕೋಚ್‌ ಅಭಿಷೇಕ್ ನಾಯರ್ ಹೇಳಿದ್ದಾರೆ. ಹೀಗಾಗಿ ಗಿಲ್‌ ಡಿ.6 ರಿಂದ ಆರಂಭವಾಗಲಿರುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ಕ್ಯಾನ್‌ಬೆರಾದಲ್ಲಿ ನ. 30-ಡಿ. ಒಂದರಂದು ನಡೆಯುವ  ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ 2 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯದಲ್ಲಿ ಗಿಲ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2025: ರಾಹುಲ್‌ ಖರೀದಿ ಬಗ್ಗೆ ಸಂತಸ ವ್ಯಕ್ತಪಡಿಸಿದ ಡೆಲ್ಲಿ ಮಾಲಿಕ

ʼಗಿಲ್‌ ಈಗ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರ ಫಿಟ್‌ನೆಸ್‌ ಮೇಲೆ ನಮ್ಮ ಫಿಸಿಯೋ ನಿಗಾ ಇಟ್ಟಿದ್ದಾರೆ. ಸದ್ಯ ಅವರು ಅವರು ಬ್ಯಾಟಿಂಗ್ ಮಾಡುವಾಗ ಅವರು ತುಂಬಾ ಆರಾಮದಾಯಕವಾಗಿದ್ದರು. ಅವರು ಒಳಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೌಲ್ಯಮಾಪನದ ನಂತರ ಅವರು ನಾಳೆಯ ಪಂದ್ಯವನ್ನು ಆಡುತ್ತಾರೆಯೇ ಎಂದು ನಾವು ನಿರ್ಣಯಿಸುತ್ತೇವೆ ʼ ಎಂದು ಅಭಿಷೇಕ್ ನಾಯರ್ ಹೇಳಿದರು.

ಗಿಲ್‌ ಆಗಮನದಿಂದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಜಾಗ ಬಿಡಬೇಕಾಗಿದೆ. ಜತೆಗೆ ರೋಹಿತ್‌ ಕೂಡ ತಂಡ ಸೇರಿರುವ ಕಾರಣ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ಕೆ.ಎಲ್‌ ರಾಹುಲ್‌ ದ್ವಿತೀಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬೇಕಾಗಿದೆ. ಇವರಿಗಾಗಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದುಬುದು ಸದ್ಯದ ಕುತೂಹಲ. ರಾಹುಲ್, ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 26 ಮತ್ತು 77 ಸ್ಕೋರ್‌ನೊಂದಿಗೆ ಇತರ ಬ್ಯಾಟರ್‌ಗಳಿಗಿಂತ ಹೆಚ್ಚು ಸ್ಥಿರ ನಿರ್ವಹಣೆ ತೋರಿದ್ದರು.

2021ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಅಶ್ವಿನ್, 45 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿ ಇವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತ. ಮೊದಲ ಪಂದ್ಯವನ್ನಾಡಿದ್ದ ವಾಷಿಂಗ್ಟನ್‌ ಸುಂದರ್‌ ಈ ಪಂದ್ಯದಿಂದ ಹೊರಗುಳಿಯಬಹುದು. ಮೊದಲ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಅವರೇ ದ್ವಿತೀಯ ಪಂದ್ಯದಲ್ಲಿಯೂ ಮುಂದುವರಿಯಬಹುದು.