Friday, 29th November 2024

IND vs AUS: ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಮಳೆ ಭೀತಿ!

India's Preparations For Pink-Ball Test Set For A Big Hit As Rain Threat Looms Large On Warm-Up Match vs PM XI

ಅಡಿಲೇಡ್:‌ ಆಸ್ಟ್ರೇಲಿಯಾ ವಿರುದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿನ (IND vs AUS) ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆಯುವ ಮೂಲಕ ಶುಭಾರಂಭ ಕಂಡಿದೆ. ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಡಿಸೆಂಬರ್‌ 6 ರಂದು ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ಆರಂಭವಾಗಲಿದೆ. ಅಂದ ಹಾಗೆ ಇದಕ್ಕೂ ಮುನ್ನ ನವೆಂಬರ್‌ 30 ರಂದು ಭಾರತ ಹಾಗೂ ಪ್ರೈಮ್‌ ಮಿನಿಸ್ಟರ್‌ ಇಲೆವೆನ್‌ ನಡುವಣ ಎರಡು ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ. ಆದರೆ, ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ದ ಮೊದಲನೇ ಟೆಸ್ಟ್‌ನಲ್ಲಿಯೂ ಭಾರತ ತಂಡ ಸೋಲು ಅನುಭವಿಸಬಹುದೆಂದು ಹೇಳಲಾಗಿತ್ತು. ಆದರೆ, ಬೌಲಿಂಗ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅದ್ಭುತ ಪ್ರದರ್ಶನ ತೋರಿದರು ಹಾಗೂ ಇವರಿಗೆ ಹರ್ಷಿತ್‌ ರಾಣಾ ಮತ್ತು ಮೊಹಮ್ಮದ್‌ ಸಿರಾಜ್‌ ಬೆಂಬಲ ನೀಡಿದ್ದರು. ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ ಹಾಗೂ ವಿರಾಟ್‌ ಕೊಹ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದರ ಫಲವಾಗಿ ಟೀಮ್‌ ಇಂಡಿಯಾ ಮೊದಲನೇ ಟೆಸ್ಟ್‌ ಪಂದ್ಯವನ್ನು 295 ರನ್‌ಗಳಿಂದ ಗೆಲುವು ಪಡೆದಿತ್ತು.

IND vs AUS: ಗೆಲುವಿನೊಂದಿಗೆ ಹಲವು ದಾಖಲೆ ಬರೆದ ಭಾರತ

ಆ ಮೂಲಕ ಮೊದಲನೇ ಟೆಸ್ಟ್‌ ಗೆಲ್ಲುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಜಸ್‌ಪ್ರೀತ್‌ ಬುಮ್ರಾ ಸೇರಿದಂತೆ ಫಾಸ್ಟ್‌ ಬೌಲರ್‌ಗಳು ಮರ್ಮಾಘಾತ ನೀಡಿದ್ದರು. ಇದೀಗ ಆಸ್ಟ್ರೇಲಿಯಾ ತಂಡ ಅಡಿಲೇಡ್‌ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್‌ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಕಳೆದ ಪ್ರವಾಸದಲ್ಲಿಯೂ ಭಾರತ ತಂಡ, ಇಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ ಆಡಿತ್ತು. ಆದರೆ, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 36 ರನ್‌ಗಳಿಂದ ಭಾರತವನ್ನು ಮಣಿಸಿತ್ತು. ಅಡಿಲೇಡ್‌ ಟೆಸ್ಟ್‌ ಡಿಸೆಂಬರ್‌ 6 ರಂದು ಆರಂಭವಾಗಲಿದೆ. ಈ ಪಂದ್ಯಕ್ಕೆ ಇನ್ನೂ ಹೆಚ್ಚಿನ ದಿನಗಳ ಅಂತರವಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ, ಪ್ರೈಮ್‌ಗ ಮಿನಿಸ್ಟರ್‌ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

IND vs AUS: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದ ಆಯ್ಕೆಯೇ ಜಟಿಲ

ಆದರೆ, ಪ್ರೈಮ್‌ ಮಿನಿಸ್ಟರ್‌ ಇಲೆವೆನ್‌ ವಿರುದ್ದದ ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಅಭ್ಯಾಸ ನಡೆಯುವ ಕ್ಯಾನ್‌ಬೆರಾದಲ್ಲಿ ಭಾರಿ ಮಳೆಯಾಗುತ್ತಿದೆ. ಅದರಂತೆ ಅಭ್ಯಾಸ ಪಂದ್ಯದ ದಿನವಾದ ನವೆಂಬರ್‌ 30 ರಂದು ಶೇಕಡಾ 100 ರಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಶನಿವಾರ ಭಾರಿ ಮಳೆಯಾದರೆ, ಭಾನುವಾರ ಶೇಕಡಾ 20 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ಆಟಗಾರರ ಅಭ್ಯಾಸ ಪಂದ್ಯಕ್ಕೆ ಮಳೆ ಆತಂಕ ಮೂಡಿಸಿದೆ.

ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರು ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ದೇವದತ್‌ ಪಡಿಕ್ಕಲ್‌ ಹಾಗೂ ಧ್ರುವ್‌ ಜುರೆಲ್‌ ತಮ್ಮ-ತಮ್ಮ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ.