Friday, 29th November 2024

Mysore News: ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ ಅಪರಾಧಿಗೆ ಮರಣ ದಂಡನೆ

Mysore News

ಮೈಸೂರು: ಹೆಂಡತಿ, ಮಕ್ಕಳು ಹಾಗೂ ತನ್ನ ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (Mysore News) ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. 2021ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಸರಗೂರು ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಆರೋಪಿ ವಿರುದ್ಧ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದೆ.

ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ಶಿಕ್ಷೆಗೊಳಗಾದ ಅಪರಾಧಿ. ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಅವರ ಮಗನಾದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ವಿಶಿಷ್ಟ ಚೇತನನಾಗಿದ್ದು, ಈತ 2014ರಲ್ಲಿ ಗಂಗೆ ಎಂಬಾಕೆಯನ್ನು ವಿವಾಹವಾಗಿದ್ದ. ಇವರಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದೂವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅಲ್ಲದೆ ಈತನ ಹೆಂಡತಿ ಸದ್ಯ 9 ತಿಂಗಳ ಗರ್ಭಿಣಿಯಾಗಿದ್ದರು.

ಪತ್ನಿ ಮೇಲೆ ಅನುಮಾನಪಟ್ಟು ಪದೇಪದೆ ಮಣಿಕಂಠಸ್ವಾಮಿ ಜಗಳವಾಡುತ್ತಿದ್ದ. ಆತನಿಗೆ ಸಮಧಾನ ಮಾಡಲು ಯತ್ನಿಸುದ್ದಿದ್ದ ತಾಯಿ ಕೆಂಪಾಜಮ್ಮ ಮೇಲೂ ಜಗಳ ತೆಗೆಯುತ್ತಿದ್ದ. 2021ರ ಏ.28ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಆಕೆ ಮತ್ತು ತಾಯಿ ಕೆಂಪಾಜಮ್ಮನೊಂದಿಗೆ ಜಗಳವಾಡಿ ಗಲಾಟೆ ಮಾಡಿದ್ದ. ನಂತರ ಬೆಳಗಿನ ಜಾವ 4ಗಂಟೆ ವೇಳೆ ಎಲ್ಲರೂ ಮಲಗಿದ್ದ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಣಿಯಾದ ಹೆಂಡತಿ ಮತ್ತು ತಾಯಿ ಕೆಂಪಾಜಮ್ಮ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಸೇರಿ ಮೂರೂ ಜನರಿಗೆ ತಲೆಗೆ ಮುಖಕ್ಕೆ ಬಲವಾಗಿ ಹೊಡೆದು ಸಾಯಿಸಿದ್ದಲ್ಲದೆ, ಇನ್ನೊಬ್ಬ ಒಂದೂವರೆ ವರ್ಷದ ಮಗ ರೋಹಿತ್‌ನನ್ನು ಕತ್ತು ಹಿಸುಕಿ ಸಾಯಿಸಿದ್ದ. ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ.

ಈ ಸುದ್ದಿಯನ್ನೂ ಓದಿ | Heart attack: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; 4ನೇ ತರಗತಿ ವಿದ್ಯಾರ್ಥಿನಿ ಸಾವು!

ಘಟನೆಯ ಮಾಹಿತಿ ತಿಳಿದ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಅಭಿಯೋಜಕರು ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವನ್ನು ಸಾಬೀತುಪಡಿಸಿದ್ದಾರೆಂದು‌ ಹೇಳಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಅವರು ಅಪರಾಧಿಯಾದ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ.