ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 (SMAT 2024) ಟೂರ್ನಿಯ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದು ಮೂಡಿ ಬಂದಿದೆ. ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮಣಿಪುರ ವಿರುದ್ದದ ಪಂದ್ಯದಲ್ಲಿ ದಿಲ್ಲಿ ತಂಡ ವಿಶೇಷ ದಾಖಲೆಯೊಂದನ್ನು ಬರೆದಿದೆ. ಟಿ20 ಪಂದ್ಯದಲ್ಲಿ ಬೌಲಿಂಗ್‌ಗೆ ತನ್ನ 11 ಆಟಗಾರರನ್ನು ಬಳಸಿಕೊಂಡ ಮೊದಲ ತಂಡ ಎಂಬ ಅಪರೂಪದ ದಾಖಲೆಯನ್ನು ದಿಲ್ಲಿ ಬರೆದಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮಣಿಪುರ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 120 ರನ್‌ಗಳನ್ನು ಕಲೆ ಹಾಕಿತ್ತು. ಅಂದ ಹಾಗೆ ದಿಲ್ಲಿ ತಂಡ ಎಲ್ಲಾ 11 ಆಟಗಾರರು ಬೌಲ್ ಮಾಡಿದ್ದರು. ದಿಲ್ಲಿ ತಂಡದ ನಾಯಕ ಆಯುಷ್ ಬದೋನಿ ಕೂಡ ಬೌಲ್ ಮಾಡಿದ್ದರು. ಇವರು ಬೌಲ್ ಮಾಡಿದ್ದ ಎರಡು ಓವರ್‌ಗಳಿಗೆ ಚಿಂಗಾಖಾಮ್ ಬಿದಷ್ ಅವರನ್ನುಔಟ್ ಮಾಡಿದ್ದರು. ಅಂದ ಹಾಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಒಂದು ತಂಡದ 11 ಆಟಗಾರರು ಬೌಲ್ ಮಾಡಿದ ಮೊದಲ ತಂಡ ಎಂಬ ದಾಖಲೆಗೆ ದಿಲ್ಲಿ ಭಾಜನವಾಗಿದೆ.
Syed Mushtaq Ali Trophy: ಸತತ ಮೂರನೇ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ತಿಲಕ್ ವರ್ಮಾ!
ದಿಲ್ಲಿ ತಂಡದ ಬೌಲಿಂಗ್ ವಿವರ
ಆಯುಷ್ ಸಿಂಗ್: 7ಕ್ಕೆ 1 (2 ಓವರ್)
ಅಖಿಲ್ ಚೌಧರಿ: 10 ಕ್ಕೆ 1( 2 ಓವರ್)
ಹರ್ಷ್ ತ್ಯಾಗಿ : 11 ಕ್ಕೆ 2 (3 ಓವರ್)
ದಿಗ್ವೇಷ್ ರಾಥಿ: 8 ಕ್ಕೆ 2 (3.1 ಓವರ್)
ಮಯಾಂಕ್ ರಾವತ್: 31ಕ್ಕೆ1 (3 ಓವರ್)
ಆಯುಷ್ ಬದೋನಿ: 8ಕ್ಕೆ 1 (2 ಓವರ್)
ಆರ್ಯನ್ ರಾಣಾ: 11 ಕ್ಕೆ 0 (1 ಓವರ್)
ಹಿಮಾಂತ್ ಸಿಂಗ್: 10 ಕ್ಕೆ 0 (1 ಓವರ್)
ಪ್ರಿಯಾಂಶ್ ಸಿಂಗ್: 2 ಕ್ಕೆ 1 (1 ಓವರ್)
ಯಶ್ ಧುಲ್: 5 ಕ್ಕೆ 0 (1 ಓವರ್)
ಅನುಜ್ ರಾವತ್: 14 ಕ್ಕೆ 0 (1 ಓವರ್)
ಯಶ್ ಧುಲ್ ಅರ್ಧಶತಕದಿಂದ ಗೆದ್ದ ದಿಲ್ಲಿ
ಇನ್ನು ಈ ಪಂದ್ಯದಲ್ಲಿ ಮಣಿಪುರ ನೀಡಿದ್ದ 121 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಿಲ್ಲಿ ತಂಡ, ಒಂದು ಹಂತದಲ್ಲಿ 6.4 ಓವರ್‌ಗಳಿಗೆ 44 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಯಶ್ ಧುಲ್ ಅವರು ಸಮಯೋಜಿತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. 2022ರ ಅಂಡರ್ 19 ವಿಶ್ವಕಪ್ ವಿಜೇತ ನಾಯಕ, ಆಡಿದ 51 ಎಸೆತಗಳಲ್ಲಿ 59 ರನ್‌ಗಳನ್ನು ಕಲೆ ಹಾಕಿ ದಿಲ್ಲಿ ತಂಡಕ್ಕೆ ಗೆಲುವಿನ ಮುದ್ರೆ ಒತ್ತಿದರು. ಯಶ್ ಧುಲ್ ಅವರ ಈ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಆ ಮೂಲಕ ದಿಲ್ಲಿ ತಂಡ ಇನ್ನು 9 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್‌ಗಳ ಗೆಲುವು ಪಡೆಯಿತು.
IPL 2025 Auction: ಆರ್‌ಸಿಬಿ ಖರೀದಿಸಿರುವ ರಾಸಿಖ್ ಸಲಾಮ್ ದರ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ!
ಈ ಗೆಲುವಿನ ಮೂಲಕ ದಿಲ್ಲಿ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿದೆ. ಇದರೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳ (+1.765) ದಿಲ್ಲಿ ತಂಡ ಸಿ ಗ್ರೂಪ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಈ ಟೂರ್ನಿಯಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದಿದೆ.
ಇನ್ನು ಮಣಿಪುರ ತಂಡದ ಪರ ಅಹ್ಮದ್ ಶಾ 30 ಎಸೆತಗಳಲ್ಲಿ 32ರನ್‌ಗಳನ್ನು ಕಲೆ ಹಾಕಿದರೆ, ನಾಯಕ ರೆಕ್ಸ್ ಸಿಂಗ್ 18 ಎಸೆತಗಳಲ್ಲಿ 23 ರನ್‌ಗಳನ್ನು ಕಲೆ ಹಾಕಿದರು. ಇನ್ನು ದಿಲ್ಲಿ ತಂಡದ ಪರ ಹರ್ಷ್ ತ್ಯಾಗಿ ಹಾಗೂ ದಿಗ್ವೀಷ್ ರಾಥಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಆಯುಷ್ ಸಿಂಗ್, ನಾಯಕ ಆಯುಷ್ ಬದೋನಿ ಹಾಗೂ ಪ್ರಿಯಾಂಶ್ ಆರ್ಯ ತಲಾ ಒಂದೊಂದು ವಿಕೆಟ್ ಪಡೆದರು.