Saturday, 30th November 2024

Bangladesh Unrest: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 3 ಹಿಂದೂ ದೇವಾಲಯಗಳ ಮೇಲೆ ದಾಳಿ

Bangladesh Unrest

ಢಾಕಾ: ಬಾಂಗ್ಲಾದೇಶದಲ್ಲಿ (Bangladesh Unrest) ದಿನೇ ದಿನೆ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿದ್ದು, ಚಟ್ಟೋಗ್ರಾಮ್‌ನಲ್ಲಿ ಶುಕ್ರವಾರ (ನ. 29) ಘೋಷಣೆ ಕೂಗುತ್ತ ಬಂದ ಗುಂಪೊಂದು 3 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಬಾಂಗ್ಲಾದ ಹಿಂದೂ ಮುಖಂಡ ಚಿನ್ಮಯ್‌ ಕೃಷ್ಣ ದಾಸ್‌ (Chinmoy Krishna Das) ಅವರ ಬಂಧನದ ನಂತರ ಅಲ್ಲಿ ಹಿಂದೂಗಳ ಪ್ರತಿಭಟನೆ ಜೋರಾಗಿದ್ದು, ಅದರ ನಡುವೆ ಈ ಘಟನೆ ಸಂಭವಿಸಿದೆ.

ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ದಾಳಿ ನಡೆದಿದ್ದು, ಶಾಂತೇಶ್ವರಿ ಮಾತ್ರಿ ದೇವಸ್ಥಾನ, ಸಮೀಪದ ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಳಿ ದೇವಸ್ಥಾನವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಂ ದಾಳಿಯನ್ನು ಖಚಿತಪಡಿಸಿದ್ದು, ದಾಳಿಕೋರರು ದೇವಾಲಯಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಶಾಂತಿನೇಶ್ವರಿ ಮುಖ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಖಾಯಂ ಸದಸ್ಯ ತಪನ್ ದಾಸ್ ಮಾತನಾಡಿ, ʼʼಜುಮಾ ಪ್ರಾರ್ಥನೆಯ ನಂತರ ನೂರಾರು ಮಂದಿ ಮೆರವಣಿಗೆ ಆಗಮಿಸಿ ಹಿಂದೂ ವಿರೋಧಿ ಮತ್ತು ಇಸ್ಕಾನ್ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ದೇವಾಲಯದ ಮೇಲೆ ದಾಳಿ ಪ್ರಾರಂಬಿಸಿದರು. ಪರಿಸ್ಥಿತಿ ಹದಗೆಟ್ಟಾಗ ಸೇನೆಯನ್ನು ಕರೆದಿದ್ದೇವೆ, ಅವರು ತ್ವರಿತವಾಗಿ ಆಗಮಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆʼʼ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮಾಜಿ ಸದಸ್ಯ, ಆಧ್ಯಾತ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಅವರನ್ನು ಸೋಮವಾರ (ನ. 25) ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಮಂಗಳವಾರ ಜಾಮೀನು ನಿರಾಕರಿಸಲಾಗಿದೆ. ಅ. 30ರಂದು ಚಟ್ಟೋಗ್ರಾಮ್‌ನ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ನಡೆದ ಹಿಂದೂ ಸಮುದಾಯದ ರ‍್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ದಾಸ್ ಸೇರಿದಂತೆ 19 ಜನರ ವಿರುದ್ಧ ಚಟ್ಟೋಗ್ರಾಮ್‌ನ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿತ್ತು.

ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.  ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಹೆಚ್ಚಿಸಲು ಬಾಂಗ್ಲಾ ಸರ್ಕಾರಕ್ಕೆ ಕೋರಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣ್‌ದೀಪ್‌ ಜೈಸ್ವಾಲ್‌ “ಭಾರತವು ಬಾಂಗ್ಲಾದೇಶ ಸರ್ಕಾರದೊಂದಿಗೆ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಉದ್ದೇಶಿತ ದಾಳಿಗಳ ಬಗ್ಗೆ ಚರ್ಚೆ ನಡೆಸಿದೆ. ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಬಾಂಗ್ಲಾದೇಶ ಸರ್ಕಾರ ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Viral News: 7 ದಿನಗಳಲ್ಲಿ ದೇಶ ಬಿಟ್ಟು ತೊಲಗಿ; ಬಾಂಗ್ಲಾದೇಶದ ಹಿಂದೂಗಳಿಗೆ ಬೆದರಿಕೆ