Saturday, 30th November 2024

RCB: ಆರ್‌ಸಿಬಿಯಿಂದ ರಾಷ್ಟ್ರೀಯ ಭಾವೈಕ್ಯ ಸಂದೇಶ

ಬೆಂಗಳೂರು: ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಅಭಿಮಾನಿಗಳು ಆರ್‌ಸಿಬಿ(RCB) ವಿರುದ್ಧ ತಿರುಗಿ ಬಿದ್ದ ಬೆನ್ನಲ್ಲೇ ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(Royal Challengers Bengaluru) ತಂಡ ರಾಷ್ಟ್ರೀಯ ಭಾವೈಕ್ಯದ ಕುರಿತು ದೇಶದ ಹಲವು ಭಾಷೆಗಳಲ್ಲಿ ವಿಡಿಯೊ ಪ್ರಸಾರ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಐಪಿಎಲ್‌ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಡಬ್​ ಮಾಡಲಾದ ವಿಡಿಯೋಗಳನ್ನು ಪೋಸ್ಟ್​ ಮಾಡುವುದು ತನ್ನ ಗುರಿಯಾಗಿದೆ ಎಂದು ಆರ್​ಸಿಬಿ ತಿಳಿಸಿದೆ.

ಕನ್ನಡ ಖಾತೆಯನ್ನು ಆರಂಭಿಸಿದ್ದ ಆರ್​ಸಿಬಿ ಒಂದು ತಿಂಗಳ ಅವಧಿಯಲ್ಲಿ 1.6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಪಡೆದುಕೊಂಡಿದೆ. ಹಾಲಿ ವರ್ಷವೇ ತೆಲುಗು ಖಾತೆಯನ್ನೂ ಆರಂಭಿಸುವುದಾಗಿ ತಿಳಿಸಿರುವ ಆರ್​ಸಿಬಿ, 2026ರಲ್ಲಿ ಮಲಯಾಳಿ, ಪಂಜಾಬಿ ಮತ್ತು ಬೆಂಗಾಲಿ ಭಾಷೆಯಲ್ಲೂ ಖಾತೆ ತೆರೆದು ಪೋಸ್ಟ್​ ಮಾಡುವುದಾಗಿ ಹೇಳಿದೆ. ಈ ಮೂಲಕ ಭಾರತ ಮತ್ತು ವಿಶ್ವದ ಪ್ರತಿ ಮೂಲೆಯಲ್ಲಿರುವ ಅಭಿಮಾನಿಗಳನ್ನು ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದೆ. ಸದ್ಯ ಕನ್ನಡ, ಇಂಗ್ಲೀಷ್‌ ಮತ್ತು ಹಿಂದಿ ಭಾಷೆಯಲ್ಲಿ ಖಾತೆಗಳನ್ನು ಹೊಂದಿದೆ.

ಹಿಂದಿ ಖಾತೆ ತೆರೆದಿದ್ದ ವೇಳೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ (Roopesh Rajanna) ಕೂಡ ಟ್ವೀಟ್‌ ಮಾಡಿ ಆರ್‌ಸಿಬಿ ವಿರುದ್ಧ ಕಿಡಿ ಕಾರಿದ್ದರು. ʼನಿಮಗೆ ಬೆಂಬಲ ಕೊಡ್ತಿರೋದು ಬೆಂಗಳೂರು ಅನ್ನೋ ಹೆಸರಿಗೆ. ನಮ್ಮ ತಂಡ ಅಂತ ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್,ಆರ್‌ಸಿಬಿ ಗಿಂತಲೂ ನಮಗೆ ನಮ್ಮ ಕನ್ನಡ, ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು. ತಕ್ಷಣ ಹಿಂದಿ ಖಾತೆಯನ್ನು ಅಳಿಸಿ. ನಮಗೆ ಅದು ಬೇಕಾಗಿಲ್ಲʼ ಎಂದು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ IND vs AUS: ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯಕ್ಕೂ ಮುನ್ನ ಉಭಯ ತಂಡಗಳಿಗೆ ಮಳೆ ಭೀತಿ!

ಆರ್‌ಸಿಬಿ ತಂಡ

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.