Saturday, 30th November 2024

Fire Accident: ರೈಲು ನಿಲ್ದಾಣ ಬಳಿ ಬೆಂಕಿ ಅವಘಡ; ಸುಟ್ಟು ಕರಕಲಾಯ್ತು 200 ದ್ವಿಚಕ್ರ ವಾಹನ

Fire Accident

ಲಖನೌ: ಉತ್ತರ ಪ್ರದೇಶದಲ್ಲಿ ಶುಕ್ರವಾರ (ನ. 29) ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ವಾರಣಾಸಿಯ ಕ್ಯಾಂಟ್‌ ರೈಲು ನಿಲ್ದಾಣ (Cantt railway station)ದಲ್ಲಿ ನಡೆದ ಈ ಅಗ್ನಿ ಅನಾಹುತದಲ್ಲಿ ಸುಮಾರು 200 ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ಪಾರ್ಕಿಂಗ್‌ ಸ್ಥಳದಲ್ಲಿ ಈ ಅವಘಡ ನಡೆದಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ (Fire Accident).

ಪಾರ್ಕಿಂಗ್ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಕೂಡಲೇ ಪೊಲೀಸ್ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಧಾವಿಸಿ ನಂದಿಸಲು ಮುಂದಾಗಿದ್ದಾರೆ. ಹೊಗೆಯಿಂದಾಗಿ ಭಾರಿ ಹೊಗೆ ಮತ್ತು ಮಬ್ಬು ಕಂಡು ಬಂದಿತ್ತು. ʼʼಸರ್ಕಾರಿ ರೈಲ್ವೆ ಪೊಲೀಸ್ (GRP), ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಮತ್ತು ಸ್ಥಳೀಯ ಪೊಲೀಸ್ ತಂಡದೊಂದಿಗೆ ಸುಮಾರು 12 ಅಗ್ನಿಶಾಮಕ ದಳದ ವಾಹನ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿದ್ದವುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಬೆಂಕಿ ಹತೋಟಿಗೆ ಬಂದಿದೆ.

ಸುಟ್ಟ ಬಹುತೇಕ ದ್ವಿಚಕ್ರ ವಾಹನ ರೈಲು ನಿಲ್ದಾಣದ ಉದ್ಯೋಗಿಗಳಿಗೆ ಸೇರಿದ್ದಾಗಿದ್ದು, ಸುಮಾರು 2 ಗಂಟೆ ಬೆಂಕಿ ಧಗಧಗಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ; ಯುವತಿ ಸಜೀವ ದಹನ

ಬೆಂಗಳೂರು: ಕೆಲವು ದಿನಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಯುವತಿಯೊಬ್ಬಳು ಅಸುನೀಗಿರುವ ಘಟನೆ ನಡೆದಿತ್ತು. ನಗರದ ರಾಜ್ ಕುಮಾರ್ ರಸ್ತೆಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಯುವತಿ ಸಜೀವ ದಹನವಾಗಿದ್ದಳು. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಶೋರೂಮ್​ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತಿದ್ದ ಪ್ರಿಯಾ (20) ಎನ್ನುವ ಯುವತಿ ಬೆಂಕಿಗಾಹುತಿಯಾಗಿದ್ದಳು. ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಇಡೀ ಶೋ ರೂಂಗೆ ವ್ಯಾಪಿಸಿ​ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿ ತೀವ್ರತೆಗೆ ಹಲವಯ ಎಲೆಕ್ಟ್ರಿಕ್ ಸ್ಕೂಟರ್​ಗಳು ಸುಟ್ಟ ಭಸ್ಮವಾಗಿದ್ದು, ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಈ ಸುದ್ದಿಯನ್ನೂ ಓದಿ: Fire Accident: ಸ್ಟೀಲ್‌ ಕಂಪನಿಯಲ್ಲಿ ಬೆಂಕಿ ಅವಘಡ; 16 ಕಾರ್ಮಿಕರ ಸ್ಥಿತಿ ಗಂಭೀರ