Saturday, 30th November 2024

KSRP jobs: ಪೊಲೀಸ್‌ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ, 2400 ಕೆಎಸ್‌ಆರ್‌ಪಿ ಪೊಲೀಸರ ನೇಮಕಕ್ಕೆ ಆದೇಶ

ksrp jobs

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ (Karnataka police) ಸಿಹಿ ಸುದ್ದಿ ನೀಡಿರುವ ಸರ್ಕಾರವು, ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯಲ್ಲಿ ಹೊಸದಾಗಿ 2400 ಪೊಲೀಸರ (KSRP jobs, job news) ಬಲವುಳ್ಳ ಎರಡು ಬೆಟಾಲಿಯನ್‌ಗಳ ಆರಂಭಕ್ಕೆ ಶುಕ್ರವಾರ ಆದೇಶಿಸಿದೆ.

ಕೆಎಸ್‌ಆರ್‌ಪಿಯಲ್ಲಿ ಇಂಡಿಯನ್ ಬೆಟಾಲಿಯನ್‌ಗಳನ್ನು (ಐಆರ್‌ಬಿ) ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಕೆಎಸ್‌ಆರ್‌ಪಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್‌ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಸರ್ಕಾರವು ಹಸಿರು ನಿಶಾನೆ ತೋರಿದೆ. ಪ್ರಸ್ತುತ 12 ಕೆಎಸ್‌ಆರ್‌ಪಿ ಹಾಗೂ 2 ಐಆರ್‌ಬಿ ಬೆಟಾಲಿಯನ್‌ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿದಂತೆ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್‌ಗಳ ಅಗತ್ಯ ಇತ್ತು. ಹೊಸ ಬೆಟಾಲಿಯನ್‌ಗಳನ್ನು ಆರಂಭಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿ ರಾಜ್ಯ ಪತ್ರ ಬರೆದಿದೆ ಎಂದು ಎಡಿಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿ ಸಮೀಪ 100 ಎಕರೆ ಹಾಗೂ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ 50 ಎಕರೆ ಪ್ರದೇಶದಲ್ಲಿ ಹೊಸದಾಗಿ ರಚನೆಯಾಗಲಿರುವ ಐಆರ್‌ಬಿ ಬೆಟಾಲಿಯನ್‌ಗೆ ಮೀಸಲಿಡಲಾಗಿದೆ. ಇಲ್ಲಿ ಬೆಟಾಲಿಯನ್‌ಗಳ ತರಬೇತಿ ಹಾಗೂ ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಬೆಟಾಲಿಯನ್‌ನಲ್ಲಿ ತಲಾ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ ಒಟ್ಟು 2400 ಪೊಲೀಸರ ನೇಮಕಾತಿಗೆ ಸಹ ಸರ್ಕಾರವು ಒಪ್ಪಿಗೆ ಸೂಚಿಸಿದೆ.

ಈ ಆದೇಶ ಹಿನ್ನೆಲೆಯಲ್ಲಿ ಹೊಸ ಬೆಟಾಲಿಯನ್‌ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇಲಾಖೆ ಶುರುಮಾಡಲಿದ್ದು, ಸರ್ಕಾರಿ ಸೇವೆ ಸೇರಲು ಕನಸು ಕಂಡಿರುವ ಉದ್ಯೋಗಾಕಾಂಕ್ಷಿಗಳಿಗೆ ಮತ್ತಷ್ಟು ಅವಕಾಶ ಸಿಗಲಿದೆ. ಚುನಾವಣೆಗಳು, ಬಂದ್‌ಗಳು, ಪ್ರತಿಭಟನೆಗಳು ಹಾಗೂ ಗಣ್ಯರ ಕಾರ್ಯಕ್ರಮಗಳು ಹೀಗೆ ಬಂದೋಬಸ್ತ್ ಕಾರ್ಯಗಳಲ್ಲಿ ಕೆಎಸ್‌ಆರ್‌ಪಿ ಹಾಗೂ ಐಆರ್‌ಬಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಪಡೆ ಬಲವರ್ಧನೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ನಿವೃತ್ತಿಯಿಂದ ತೆರವಾದ ಜಾಗಕ್ಕೆ ಆ ದಿನವೇ ಮುಂಬಡ್ತಿ

ಕೆಎಸ್‌ಆರ್‌ಪಿಯಲ್ಲಿ ಅಧಿಕಾರಿ-ಸಿಬ್ಬಂದಿ ನಿವೃತ್ತಿಯಾದ ದಿನವೇ ಆ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಮುಂಬಡ್ತಿ ವ್ಯವಸ್ಥೆಯನ್ನು ಎಡಿಜಿಪಿ ಉಮೇಶ್ ಕುಮಾರ್‌ ಜಾರಿಗೊಳಿಸಿದ್ದಾರೆ. ತಿಂಗಳಾಂತ್ಯಕ್ಕೆ ಸಿಬ್ಬಂದಿ ನಿವೃತ್ತಿಯಿಂದ ತೆರವಾಗುವ ಹುದ್ದೆಗಳಿಗೆ ಸೇವಾ ಹಿರಿತನದ ಮೇರೆಗೆ ಮತ್ತೊಬ್ಬರಿಗೆ ಮುಂಬಡ್ತಿ ನೀಡಲಾಗುತ್ತದೆ.

4 ತಿಂಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಇದುವರೆಗೆ ಪಿಸಿಯಿಂದ ಎಚ್‌ಸಿ (224), ಎಚ್ ಸಿಯಿಂದ ಎಎಸ್‌ಐ (184), ಎಎಸ್‌ಐನಿಂದ ಪಿಎಸ್‌ಐ 64, ಪಿಎಸ್‌ಐನಿಂದ ಪಿಐ 16 ಹೀಗೆ ಒಟ್ಟು 488 ಸಿಬ್ಬಂದಿ ಮುಂಬಡ್ತಿ ಪಡೆದಿದ್ದಾರೆ. ವಿಳಂಬವಿಲ್ಲದೆ 3 ದಶಕಗಳು ಇಲಾಖೆಯಲ್ಲಿ ದುಡಿದ ಅರ್ಹರಿಗೆ ಮುಂಬಡ್ತಿ ಭಾಗ್ಯ ಸಿಗುವಂತಾಗಿದೆ.

10 ಉಪ ಕಮಾಂಡೆಂಟ್ ಹುದ್ದೆಗಳು

ಕೆಎಸ್‌ಆರ್ ಪಿಯಲ್ಲಿ ಹೊಸದಾಗಿ 10 ಡೆಪ್ಯುಟಿ ಕಮಾಂಡೆಂಟ್ ಹುದ್ದೆಗಳನ್ನು ಸೃಜಿಸಿಸುವ ಪ್ರಸ್ತಾಪಕ್ಕೂ ಸಹ ಸರ್ಕಾರ ಸಮ್ಮತಿಸಿದೆ. ಈ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಅಧಿಕಾರಿಗಳನ್ನು ಎಡಿಜಿಪಿ ನೇಮಿಸಿದ್ದಾರೆ.

ಇದನ್ನೂ ಓದಿ: Job News: ಇಸ್ರೋದಲ್ಲಿ 103 ಕಾಯಂ ಹುದ್ದೆಗಳಿವೆ, ಇಂದೇ ಅರ್ಜಿ ಸಲ್ಲಿಸಿ!