Wednesday, 11th December 2024

DK Shivakumar: ಯತ್ನಾಳ್ ಮಾತ್ರವಲ್ಲ, ಇಡೀ ಬಿಜೆಪಿಯೇ ಬಸವಣ್ಣ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ: ಡಿ.ಕೆ. ಶಿವಕುಮಾರ್ ಆಕ್ರೋಶ

DK Shivakumar

ಬೆಂಗಳೂರು: “ಬಸವಣ್ಣನವರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬರೇ ಮಸಿ ಬಳಿದಿಲ್ಲ. ಇಡೀ ಬಿಜೆಪಿ ಪಕ್ಷವೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ. ಯತ್ನಾಳ್ ಇತಿಹಾಸವೇ ಬಿಜೆಪಿ ಇತಿಹಾಸ. ಹೀಗಾಗಿ ಅವರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, “ಯತ್ನಾಳ್ ಅವರಂತಹ ಮುತ್ತು ರತ್ನವನ್ನು ಬಿಜೆಪಿಯವರು ತಮ್ಮ ಬಳಿಯೇ ಇಟ್ಟುಕೊಳ್ಳಲಿ. ಇದು ಆ ಪಕ್ಷದ ಆಂತರಿಕ ವಿಚಾರ. ಅದಕ್ಕೆ ನಾವು ತಲೆ ಹಾಕುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಯಡಿಯೂರಪ್ಪ, ವಿಜಯೇಂದ್ರ, ಅಶೋಕ, ಕೇಂದ್ರ ಸಚಿವ ಸೋಮಣ್ಣ ಹಾಗೂ ಬೊಮ್ಮಾಯಿ ಅವರ್ಯಾರು ಖಂಡಿಸಿದ್ದಾರೆಯೇ? ಯಾರೂ ಸಹ ಖಂಡಿಸಿಲ್ಲ. ಇದು ಬಿಜೆಪಿ ಬಸವಣ್ಣನವರ ವಿರೋಧಿ ಎಂಬುದನ್ನು ನಿರೂಪಿಸುತ್ತದೆ” ಎಂದು ಹೇಳಿದರು.

“ಬಸವಣ್ಣನವರ ಬಗ್ಗೆ ಹುಚ್ಚರಂತೆ ಮಾತನಾಡಿರುವ ಯತ್ನಾಳ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಅನೇಕ ಮಠಾಧೀಶರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.

ಬಸವಣ್ಣನವರ ಚಿಂತನೆಯೇ ಕಾಂಗ್ರೆಸ್ ಚಿಂತನೆ
“ಬಸವಣ್ಣನವರ ಚಿಂತನೆಯೇ ಕಾಂಗ್ರೆಸ್ ಪಕ್ಷದ ಚಿಂತನೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಬಸವಣ್ಣನವರ ಜಯಂತಿಯಂದೇ ಪ್ರಮಾಣ ವಚನ ತೆಗೆದುಕೊಂಡರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದು, ಬಸವಣ್ಣನವರ ಜಯಂತಿಗೆ ಶಕ್ತಿ ಕೊಟ್ಟಿದ್ದು, ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಯಾವ ಜನತಾದಳ, ಬಿಜೆಪಿ, ಜನಸಂಘವೂ ಈ ಕೆಲಸ ಮಾಡಿಲ್ಲ” ಎಂದರು.

ಬಸವಣ್ಣನವರ ಆಶಯ ರಕ್ಷಿಸುತ್ತೇವೆ
“ನಮ್ಮ ಸಂವಿಧಾನದ ಮೂಲ ಶಕ್ತಿ ಹಾಗೂ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನು ಮೊದಲು ಪ್ರತಿಪಾದಿಸಿದವರು ಬಸವಣ್ಣನವರು. ನಮ್ಮ ಪಕ್ಷದ ಸಿದ್ಧಾಂತಕ್ಕೂ ಬಸವಣ್ಣನವರಿಗೂ ಅವಿನಾಭಾವ ಸಂಬಂಧವಿದೆ ಇದನ್ನು ನಾವು ಉಳಿಸಿ, ಬೆಳೆಸಿ, ರಕ್ಷಣೆ ಮಾಡಿಕೊಂಡು ಹೋಗುತ್ತೇವೆ” ಎಂದು ಹೇಳಿದರು.

ಯಡಿಯೂರಪ್ಪ ಅವರೂ ಬಂದಿದ್ದರು
ನಿಮ್ಮ ಹಾಗೂ ವಿಜಯೇಂದ್ರ ಅವರ ನಡುವಿನ ಸ್ನೇಹದ ಬಗ್ಗೆ ಹಾಗೂ ಅವರ ಪತ್ರಗಳಿಗೆ ಸಹಿ ಹಾಕಿರುವ ವಿಡಿಯೋಗಳಿದ್ದು, ಅವುಗಳನ್ನು ಬಹಿರಂಗ ಮಾಡುತ್ತೇನೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈ ರಾಜ್ಯದ ಉಪಮುಖ್ಯಮಂತ್ರಿ. ಈ ಹಿಂದೆ ಯಡಿಯೂರಪ್ಪನವರು ಅವರ ಕ್ಷೇತ್ರದ ಕೆಲಸಗಳ ಕುರಿತು ಒಂದಷ್ಟು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹೋಗಿದ್ದರು” ಎಂದು ಹೇಳಿದರು.

“ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನನ್ನ ಕ್ಷೇತ್ರದ ಕೆಲಸವನ್ನು ಮಾಡಿಕೊಡುವುದಾಗಿ ಸದನದಲ್ಲಿ ಮಾತು ಕೊಟ್ಟಿದ್ದರು. ಆದರೆ ಮಾಡಿಕೊಟ್ಟಿರಲಿಲ್ಲ. ಆದಕಾರಣ ನಾನೇ ಖುದ್ದಾಗಿ ಭೇಟಿ ಮಾಡಿದ್ದೆ. ನಾನು ಅವರ ಕ್ಷೇತ್ರಕ್ಕೆ ಕೆಲಸ ಮಾಡಿಕೊಡಬಹುದು, ಮುಂದಕ್ಕೂ ಮಾಡಬಹುದು. ಏಕೆಂದರೆ ಅದು ನನ್ನ ಕರ್ತವ್ಯ. ನಾನು ಸಚಿವನಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವಾಗ, ಯಾವುದೇ ತಾರತಮ್ಯವಿಲ್ಲದೆ, ಸಂವಿಧಾನದ ಆಶಯಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡಿರುತ್ತೇನೆ” ಎಂದರು.

ಈ ಸುದ್ದಿಯನ್ನೂ ಓದಿ | BY Vijayendra: ಹೊಂದಾಣಿಕೆ ರಾಜಕಾರಣದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ: ಯತ್ನಾಳ್‌ಗೆ ವಿಜಯೇಂದ್ರ ಓಪನ್‌ ಚಾಲೆಂಜ್!

ನನಗೆ ಪಕ್ಷವೇ ಮುಖ್ಯ
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಅವರು ತೋರಿಸಿಕೊಳ್ಳುತ್ತಿಲ್ಲ. ಆದರೆ ಬಿಜೆಪಿಯ ಜಗಳ ಬೀದಿರಂಪವಾಗಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಎಂದಿಗೂ ವ್ಯಕ್ತಿಗತವಾಗಿ ಹೋಗುವವನಲ್ಲ. ವ್ಯಕ್ತಿ ಪೂಜೆಯನ್ನೂ ಮಾಡುವವನಲ್ಲ. ಬದಲಾಗಿ ಪಕ್ಷದ ಪೂಜೆ ಮಾಡುವವನು. ನಾನು ಇಲ್ಲದೇ ಹೋದರೂ ಪಕ್ಷ ಇದ್ದೇ ಇರುತ್ತದೆ, ಕೊನೆಯದಾಗಿ ಪಕ್ಷವೇ ಮುಖ್ಯ” ಎಂದರು.