Saturday, 14th December 2024

Viral Video: ED ಅಧಿಕಾರಿಗಳ ವೇಷ ಧರಿಸಿ ಚಿನ್ನದಂಗಡಿ ಮಾಲೀಕನ ಮನೆ ಲೂಟಿ ಮಾಡಿದ ಖತರ್ನಾಕ್‌ ಕಳ್ಳರು! ಕೊನೆಗೆ ಆಗಿದ್ದೇನು?

Viral Video

ಅಹ್ಮದಾಬಾದ್‌: ಗುಜರಾತ್‍ನ ಕಚ್ಛ್‌ನಲ್ಲಿರುವ ಆಭರಣ ಅಂಗಡಿಯ ಮಾಲೀಕನ ಮನೆಯ ಮೇಲೆ ನಕಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ತಂಡ ದಾಳಿ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌(Viral Video) ಆಗಿದೆ. ಈ ಘಟನೆಯು ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ ಚಿತ್ರ ಸ್ಪೆಷಲ್ 26 ರ ಕಥಾವಸ್ತುವನ್ನು ಪ್ರತಿಬಿಂಬಿಸುತ್ತದೆ. ಚಿನ್ನದ ಉದ್ಯಮಿಯೊಬ್ಬರ ಮನೆಯ ಮೇಲೆ ವಂಚಕರು ಇಡಿ ಅಧಿಕಾರಿಗಳ ವೇಷದಲ್ಲಿ ಬಂದು ನಕಲಿ ದಾಳಿ ನಡೆಸಿ 25 ಲಕ್ಷ ರೂ.ಮೌಲ್ಯದ ಆಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಆ 12 ಸದಸ್ಯರ ಗುಂಪನ್ನು ಕಚ್ಛ್ ಪೊಲೀಸರು ಭೇದಿಸಿದ್ದಾರೆ.

ಪೊಲೀಸರು ಬಂಧಿತ ಗ್ಯಾಂಗ್ ಸದಸ್ಯರನ್ನು ಹಗ್ಗದಿಂದ ಕೈಗಳನ್ನು ಕಟ್ಟಿ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ಮತ್ತು ದಾಳಿಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಡಿಸೆಂಬರ್ 2 ರಂದು ಆಭರಣ ವ್ಯಾಪಾರಿಯ ಮನೆಯಲ್ಲಿ ಈ ನಕಲಿ ದಾಳಿ ನಡೆಸಲಾಯಿತು ಎಂಬುದಾಗಿ ತಿಳಿದುಬಂದಿದೆ.

ವೈರಲ್ ವಿಡಿಯೊದಲ್ಲಿ ನಕಲಿ ಇಡಿ ಅಧಿಕಾರಿಯಂತೆ ನಟಿಸುವ ವ್ಯಕ್ತಿಯೊಬ್ಬ  ಉದ್ಯಮಿಯನ್ನು ಬೆದರಿಸಲು ತನ್ನ ಗುರುತಿನ ಚೀಟಿಯನ್ನು ಅವರಿಗೆ ತೋರಿಸಿದ್ದಾನೆ.  ಐಡಿಯನ್ನು ತೋರಿಸಿದ ನಂತರ ಆರೋಪಿ ವ್ಯಕ್ತಿ  ಉದ್ಯಮಿಯ ಹಣದ ಬಗ್ಗೆ ಮಾಹಿತಿ ಕೇಳಿದ್ದಾನೆ.  ಒಂದು ವೇಳೆ ಹೇಳಲು ನಿರಾಕರಿಸಿದರೆ ಜೈಲಿಗೆ ಕಳುಹಿಸುವುದಾಗಿ ವಂಚಕ ಉದ್ಯಮಿಗೆ ಬೆದರಿಕೆ ಹಾಕಿದ್ದಾನೆ. ಆಗ ಉದ್ಯಮಿ ಕೂಡ ಆತಂಕಕ್ಕೊಳಗಾಗಿದ್ದು, ತನ್ನ ಬಳಿ ಇರುವ ಮೊತ್ತದ ಬಗ್ಗೆ ಖಚಿತವಿಲ್ಲ ಎಂದು ಹೇಳುತ್ತಾರೆ. ನಂತರ ನಕಲಿ ಇಡಿ ಅಧಿಕಾರಿ ತನ್ನ ಬಳಿ ಲಭ್ಯವಿರುವ ಹಣದ ನಿಖರವಾದ ವಿವರಗಳನ್ನು ಒದಗಿಸಲು 15 ನಿಮಿಷಗಳನ್ನು ನೀಡುತ್ತಾನೆ. ತಪ್ಪು ವಿವರಗಳನ್ನು ನೀಡಿದ್ದರೆ ಅದರ ಪರಿಣಾಮಗಳ ಬಗ್ಗೆ ಉದ್ಯಮಿಗೆ ಎಚ್ಚರಿಕೆ ನೀಡಿದ್ದಾನೆ.

ವಂಚಕರು ಗಾಂಧಿಧಾಮದಲ್ಲಿರುವ ರಾಧಿಕಾ ಜ್ಯುವೆಲರ್ಸ್ ಎಂಬ ಅಂಗಡಿ ಮತ್ತು ಅದರ ಮಾಲೀಕರ ನಿವಾಸವನ್ನು ಗುರಿಯಾಗಿಸಿಕೊಂಡಿದ್ದಾರೆ. ಹಾಗಾಗಿ ಅದರಂತೆ 25 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಗಾಂಧಿಧಾಮ್ ವಿಭಾಗ-ಎ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ಪೊಲೀಸರು ಕ್ರಮ ಕೈಗೊಂಡು ದಂಧೆಯನ್ನು ಭೇದಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಕಳ್ಳತನಕ್ಕೂ ಮುನ್ನ ಈ ಕಿಲಾಡಿ ಕಳ್ಳ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ

ಗಾಂಧಿಧಾಮ್ ಮಾರುಕಟ್ಟೆಯಲ್ಲಿ ನಡೆದ ಘಟನೆಗಳನ್ನು ಪುನರಾವರ್ತಿಸಲು ಪೊಲೀಸರು ನಕಲಿ ಇಡಿ ಅಧಿಕಾರಿಗಳನ್ನು ಅಪರಾಧ ಸ್ಥಳಗಳಿಗೆ ಕರೆದೊಯ್ಯುವಾಗ ಮೆರವಣಿಗೆ ನಡೆಸಿದ್ದಾರೆ.  ಬಂಧಿತರಲ್ಲಿ ಓರ್ವ ಮಹಿಳೆ ಕೂಡ ಸೇರಿದ್ದಾಳೆ. ಬಂಧಿತ ಆರೋಪಿಗಳಿಂದ 45 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.