Wednesday, 11th December 2024

South Korea: ಅಂಡರ್‌ವೇರ್‌ನಿಂದ ಆತ್ಮಹತ್ಯೆಗೆ ಯತ್ನಿಸಿದ ದಕ್ಷಿಣ ಕೊರಿಯಾ ಮಾಜಿ ರಕ್ಷಣಾ ಸಚಿವ

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ (South Korea) ಕಳೆದ ಕೆಲವು ತಿಂಗಳಿಂದ ಮಿಲಿಟರಿ ಆಡಳಿತ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕಾನೂನು ಜಾರಿಗೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಹಿಂಪಡೆಯಲಾಗಿತ್ತಾದರೂ ಅದು ಮತ್ತೆ ಮತ್ತೆ ಸುದ್ದಿ ಮಾಡುತ್ತಲೇ ಇದೆ. ಇದೀಗ ಈ ಕಾನೂನಿನ ಮಾಸ್ಟರ್‌ಮೈಂಡ್‌ ಆಗಿದ್ದ ಮಾಜಿ ರಕ್ಷಣಾ ಸಚಿವ(Former Minister of Defence) ಕಿಮ್ ಯೋಂಗ್ ಹ್ಯುನ್(Kim Yong-hyun) ಪೊಲೀಸ್​ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶೌಚಾಲಯದಲ್ಲಿ ತಮ್ಮ ಒಳ ಉಡುಪು (Underwear) ಬಳಸಿ ನಿನ್ನೆ(ಡಿ.10) ತಡರಾತ್ರಿ ಕಿಮ್ ಯೋಂಗ್ ಹ್ಯುನ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್(Yoon Suk Yeol’s) ಅವರು ದೇಶದಲ್ಲಿ ಮಿಲಿಟರಿ ಆಡಳಿತ ಹೇರುವುದಾಗಿ ನಿರ್ಧರಿಸಿದ್ದರು. ಮಿಲಿಟರಿ ಆಡಳಿತದ ಕಲ್ಪನೆಯ ಮಾಸ್ಟರ್ ಮೈಂಡ್ ಎಂದು ರಕ್ಷಣಾ ಸಚಿವ ಕಿಮ್ ಅವರನ್ನು ಕರೆಯಲಾಗಿತ್ತು. ಯೂನ್ ಸುಕ್ ಯೋಲ್ ಅವರು ಬುಧವಾರ ರಾತ್ರಿ 11 ಗಂಟೆಗೆ ದಿಢೀರನೇ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಸಮರ ಕಾನೂನನ್ನು ಹೇರುವುದಾಗಿ ಘೋಷಿಸಿದರು.

ಆದರೆ ಪ್ರತಿಪಕ್ಷಗಳ ಭಾರೀ ವಿರೋಧ ಮತ್ತು ಸಾರ್ವಜನಿಕರ ಕೋಲಾಹಲದ ನಡುವೆ ಅವರು ಈ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಈ ಹಿಂದೆ ಸಂಸತ್ತಿನಲ್ಲಿ ಈ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿ ಅದನ್ನು ಕೈಬಿಡಲಾಗಿತ್ತು. ಸೇನಾ ಆಡಳಿತ ಹೇರಿಕೆಯ ಆರೋಪದ ಮೇಲೆ ಕಿಮ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸೌದಿ ಅರೇಬಿಯಾದ ರಾಯಭಾರಿ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ಹೊಸ ರಕ್ಷಣಾ ಸಚಿವರನ್ನಾಗಿ ಕೊರಿಯಾ ಸರ್ಕಾರ ನೇಮಿಸಿತು. ಗುರುವಾರ ರಾಜೀನಾಮೆ ನೀಡಿದ್ದ ಕಿಮ್ ಯೋಂಗ್ ಹ್ಯುನ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದರು.

ಈ ಮಧ್ಯೆ ಕಿಮ್ ಯೋಂಗ್-ಹ್ಯುನ್ ಅವರು ಸಿಯೋಲ್ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಧಿಕಾರಿಯೊಬ್ಬರು ಹೇಳುವಂತೆ ಕಿಮ್‌ ಮಧ್ಯರಾತ್ರಿ ಸಮಯದಲ್ಲಿ ತಮ್ಮ ಒಳ ಉಡುಪಿನ ಬಟ್ಟೆಯನ್ನು ಬಳಸಿ ಶೌಚಾಲಯದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಸದ್ಯ ಕಿಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಜೀವಕ್ಕೆ ಯಾವುದೇ ರೀತಿಯ ಅಪಾಯವಿಲ್ಲ ಎನ್ನಲಾಗಿದೆ.

ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಮಿಲಿಟರಿ ಆಡಳಿತ ಘೋಷಣೆಗೆ ಸಂಬಂಧಿಸಿದ ಬಂಡಾಯದ ಆರೋಪಗಳ ಮೇಲೆ ಕಿಮ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ನಡೆಸಲಾಗುತ್ತಿದೆ. ವರದಿಯೊಂದರ ಪ್ರಕಾರ ಸೇನಾ ಆಡಳಿತ ಹೇರುವಲ್ಲಿ ನಿರ್ಣಾಯಕ ಕರ್ತವ್ಯಗಳಲ್ಲಿ ತೊಡಗಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕಿಮ್ ಅವರನ್ನು ಬಂಧಿಸಲಾಗಿದೆ.

ಸಂಸತ್ತಿನ ವಿಚಾರಣೆಯ ಸಂದರ್ಭದಲ್ಲಿ ರಕ್ಷಣಾ ಸಚಿವ ಕಿಮ್‌ ಅವರು ತಮ್ಮ ಬಂಧನಕ್ಕೂ ಮೊದಲು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದು, ನನಗೆ ಜೀವ ಬೆದರಿಕೆ ಹಾಕಿದ್ದರು ಎಂದು ಕೊರಿಯಾ ತಿದ್ದುಪಡಿ ಸೇವೆಯ ಕಮಿಷನರ್ ಜನರಲ್ ಅರೋಪಿಸಿದ್ದಾರೆ.

ಕ್ಷಮೆಯಾಚಿಸಿದ ದಕ್ಷಿಣ ಕೊರಿಯಾ ಅಧ್ಯಕ್ಷ

ಸೇನಾ ಆಡಳಿತ ಜಾರಿಗೆ ಆದೇಶ ಮಾಡಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್, ದೇಶದ ಜನರ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕವಾಗಿ ಗದ್ದಲ ಸೃಷ್ಟಿಯಾಗುವಂತೆ ಆದೇಶ ಹೊರಡಿಸಿದ್ದಕ್ಕಾಗಿ ಕ್ಷಮೆ ಕೋರುತ್ತಿರುವುದಾಗಿ ದೂರದರ್ಶನದ ಭಾಷಣದಲ್ಲಿ ಶನಿವಾರ ಹೇಳಿರುವ ಅವರು, ಸೇನಾ ಆಡಳಿತ ಜಾರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ದೇಶದ ಪರಿಸ್ಥಿತಿಯು ಅತ್ಯಂತ ಕ್ಲಿಷ್ಟಕರ ಸ್ಥಿತಿ ತಲುಪಿದೆ’ ಎಂದು ಮಂಗಳವಾರ ಹೇಳಿಕೆ ನೀಡಿದ್ದ ಯೂನ್‌, ತುರ್ತು ಸೇನಾ ಆಡಳಿತ ಜಾರಿಗೊಳಿಸುವ ಸಾಂವಿಧಾನಿಕ ಆದೇಶ ಹೊರಡಿಸುತ್ತಿರುವುದಾಗಿ ಮಂಗಳವಾರ ಘೋಷಿಸಿದ್ದರು. ‘ಉತ್ತರ ಕೊರಿಯಾ, ದೇಶ ವಿರೋಧಿ ಕೃತ್ಯ ನಡೆಸುತ್ತಿದೆ. ಆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ದೇಶದ ವಿರೋಧ ಪಕ್ಷಗಳು ಸಂಸತ್‌ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿವೆ’ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ:Manipur Violence: ಮಣಿಪುರದಲ್ಲಿ ಸಂಘರ್ಷ ನಿಯಂತ್ರಿಸಲು ಕೇಂದ್ರ ಹರಸಾಹಸ; ಮತ್ತೆ 20,000 ಅರೆಸೇನಾ ಸಿಬ್ಬಂದಿ ನಿಯೋಜನೆ