Wednesday, 11th December 2024

Mohammed Shami: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಮೊಹಮ್ಮದ್‌ ಶಮಿ ಅನುಮಾನ!

Mohammed Shami Not Flying To Australia Anytime Soon, Being Assessed Over Ability To Bowl Long Spells: Report

ನವದೆಹಲಿ: ಪ್ರಸ್ತುತ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳದ ಪರ ಆಡುತ್ತಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ (Mohammed Shami) ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು ದೀರ್ಘಾವಧಿ ಬೌಲಿಂಗ್‌ ಸ್ಪೆಲ್‌ ಮಾಡಲಿದ್ದಾರೆಯೇ ಎಂಬ ಬಗ್ಗೆ ಇನ್ನೂ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸಂಪೂರ್ಣ ವಿಶ್ವಾಸವಿಲ್ಲ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಮೊಹಮ್ಮದ್‌ ಶಮಿ ಸುಮಾರು ಒಂದು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಇತ್ತೀಚೆಗೆ ಬಂಗಾಳ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು ಹಾಗೂ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು.

ಇದೀಗ ಅವರು ಬಂಗಾಳ ತಂಡದ ಪರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅಂದ ಹಾಗೆ ಕಳೆದ ಕೆಲ ದಿನಗಳ ಹಿಂದೆ ಮೊಹಮ್ಮದ್‌ ಶಮಿ ಅವರು ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಲಭ್ಯರಾಗಲಿದ್ದಾರೆಂದು ವದಿಯಾಗಿತ್ತು. ಆದರೆ, ಬಂಗಾಳ ತಂಡದ ಕ್ಯಾಂಪ್‌ನಲ್ಲಿ ಶಮಿ ಆಸ್ಟ್ರೇಲಿಯಾಗೆ ತೆರಳುವುದಿಲ್ಲವೆಂದು ಹೇಳಲಾಗುತ್ತಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ತಿಳಿಸಿದೆ.

ಮೊಹಮ್ಮದ್‌ ಶಮಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದೀರ್ಘಾವಧಿ ಸ್ಪೆಲ್‌ ಬೌಲ್‌ ಮಾಡಬೇಕೆಂಬ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯ ವೈದ್ಯಕೀಯ ಸಿಬ್ಬಂದಿ ಮೊಹಮ್ಮದ್‌ ಶಮಿ ಅವರನ್ನು ನಿರ್ವಹಿಸುತ್ತಿದ್ದಾರೆ. ಈ ವಿಷಯದ ಜೊತೆಗೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಆಡುತ್ತಿರುವುದು ಬಂಗಾಳ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಅಲ್ಲದೆ ಹಾರ್ದಿಕ್‌ ಪಾಂಡ್ಯ ಮತ್ತು ಕೃಣಾಲ್‌ ಪಾಂಡ್ಯ ಅವರನ್ನು ಒಳಗೊಂಡಿರುವ ಬರೋಡಾ ವಿರುದ್ದ ಬಂಗಾಳ ತಂಡಕ್ಕೆ ಶನಿ ನೆರವಾಗಬಹುದು.

17 ಎಸೆತಗಳಲ್ಲಿ 32 ರನ್‌ ಗಳಿಸಿದ್ದ ಶಮಿ

ಚಂಡೀಗಢ ವಿರುದ್ಧದ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮೊಹಮ್ಮದ್‌ ಶಮಿ ಕೇವಲ 17 ಎಸೆತಗಳಲ್ಲಿ 32 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಬಂಗಾಳ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಗಳಿಸಿತ್ತು. ನಂತರ ಬೌಲಿಂಗ್‌ನಲ್ಲಿ 13 ರನ್‌ ನೀಡಿದ್ದ ಶಮಿ ಒಂದು ವಿಕೆಟ್‌ ಪಡೆದಿದ್ದರು.

ಮೊಹಮ್ಮದ್‌ ಶಮಿ, ಪಾಂಡ್ಯ ಸಹೋದರರು ಮಾತ್ರವಲ್ಲ ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ, ಶ್ರೇಯಸ್‌ ಅಯ್ಯರ್‌, ರಿಂಕು ಸಿಂಗ್‌, ಭುವನೇಶ್ವರ್‌ ಕುಮಾರ್‌, ರಜತ್‌ ಪಾಟಿದಾರ್‌, ವೆಂಕಟೇಶ್‌ ಅಯ್ಯರ್‌ ಹಾಗೂ ಆವೇಶ್‌ ಖಾನ್‌ ಕೂಡ ಬುಧವಾರ ನಡೆಯುತ್ತಿರುವ ಇತರೆ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಆಡುತ್ತಿದ್ದಾರೆ.

ಡಿ.14 ರಂದು ಮೂರನೇ ಟೆಸ್ಟ್‌ ಆರಂಭ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಮುಗಿಸಿವೆ. ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಟೆಸ್ಟ್‌ ಸರಣಿಯನ್ನ 1-1 ಸಮಬಲ ಕಾಯ್ದುಕೊಂಡಿವೆ. ಮೂರನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

ಈ ಸುದ್ದಿಯನ್ನು ಓದಿ: SMAT 2025: ʻ17 ಎಸೆತಗಳಲ್ಲಿ 32 ರನ್‌ʼ-ಬ್ಯಾಟಿಂಗ್‌ನಲ್ಲೂ ಮಿಂಚಿದ ಮೊಹಮ್ಮದ್‌ ಶಮಿ!