Wednesday, 11th December 2024

Kangana Ranaut: ಬೆಂಗಳೂರು ಎಂಜಿನಿಯರ್‌ ಆತ್ಮಹತ್ಯೆ ಪ್ರಕರಣ; ಶೇ. 99ರಷ್ಟು ಮದುವೆಗಳಲ್ಲಿ ಪುರುಷರೇ ತಪ್ಪು ಮಾಡುತ್ತಾರೆ ಎಂದ ಕಂಗನಾ

Kangana Ranaut

ಹೊಸದಿಲ್ಲಿ: ಪತ್ನಿಯ ಕಿರುಕುಳದಿಂದ ಬೇಸತ್ತು ಉತ್ತರ ಪ್ರದೇಶ ಮೂಲದ ಎಂಜಿನಿಯರ್‌ ಅತುಲ್‌ ಸುಭಾಷ್‌ (Atul Subhash) ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಇದೀಗ ಬಾಲಿವುಡ್‌ ನಟಿ, ಸಂಸದೆ ಕಂಗನಾ ರಾಣಾವತ್‌ (Kangana Ranaut) ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಶೇ. 99ರಷ್ಟು ಮದುವೆಗಳಲ್ಲಿ ಪುರುಷರು ತಪ್ಪು ಮಾಡುತ್ತಾರೆ. ಇದೇ ಕಾರಣಕ್ಕೆ ಇಂತಹ ಘಟನೆ ನಡೆಯುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.

ಪತ್ನಿ ಮತ್ತು ಆಕೆಯ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು 24 ಪುಟಗಳ ಡೆತ್‌ನೋಟ್‌ ಬರೆದಿಟ್ಟು ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜತೆಗೆ ವಿಡಿಯೊ ಮಾಡಿ ಪತ್ನಿಯ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಹಿಳಾ ಪರ ಕಾನೂನಿನ ದುರುಪಯೋಗದ ಕುರಿತು ಇದು ಚರ್ಚೆ ಹುಟ್ಟು ಹಾಕಿದೆ. ಮೆನ್‌ಟೂ ಹ್ಯಾಶ್‌ಟ್ಯಾಗ್‌ ಸೋಶಿಯಲ್‌ ಮೀಡಿಯಾದಲ್ಲಿ ಟ್ರಂಡ್‌ ಆಗಿದೆ.

ಕಂಗನಾ ರಾಣಾವತ್‌ ಹೇಳಿದ್ದೇನು?

ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡಿದ ಕಂಗನಾ ಅವರು, ʼʼಈ ಘಟನೆಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಅತುಲ್‌ ಅವರ ವಿಡಿಯೊ ಹೃದಯ ವಿದ್ರಾವಕವಾಗಿದೆ. ನಕಲಿ ಸ್ತ್ರೀವಾದ ಖಂಡನೀಯ. ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಸುಲಿಗೆ ಮಾಡಲಾಗಿದೆ. ಇದೇ ಕಾರಣಕ್ಕೆ ಶೇ. 99ರಷ್ಟು ಮದುವೆಗಳಲ್ಲಿ ಪುರುಷರು ತಪ್ಪು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂತಹ ಘಟನೆ ನಡೆಯುತ್ತದೆʼʼ ಎಂದು ಕಂಗನಾ ಹೇಳಿದ್ದಾರೆ.

ʼʼಅತಿಯಾದ ಒತ್ತಡ ತಾಳಲಾರದೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ ದಿನ ಮಹಿಳೆಯರ ವಿರುದ್ಧ ಶೋಷಣೆ ನಡೆಯುತ್ತಿದೆ. ಓರ್ವ ಮಹಿಳೆಯ ಉದಾಹರಣೆ ತೆಗೆದುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲʼʼ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ʼʼಹಿಂದಿನಿಂದಲೂ ಸಾಂಪ್ರಾದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಮದುವೆ ವ್ಯವಸ್ಥೆ ಉತ್ತಮವಾಗಿತ್ತು. ಆದರೆ ಇತ್ತೀಚೆಗೆ ಇದರಲ್ಲಿ ಸೋಷಿಯಲಿಸಂ, ಕಮ್ಯುನಿಸಂ ತೂರಿಕೊಂಡಿದ್ದು, ವ್ಯವಸ್ಥೆಯನ್ನೇ ಬುಡಮೇಲಾಗಿಸಿದೆʼʼ ಎಂದು ಅವರು ಕಿಡಿ ಕಾರಿದ್ದಾರೆ. ಸದ್ಯ ಅವರ ಈ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಪರಿಚಯವಾದ ನಿಖಿತಾ ಸಿಂಘಾನಿಯಾ ಅವರನ್ನು ಅತುಲ್‌ 2019ರಲ್ಲಿ ವರಿಸಿದ್ದರು. ಈ ದಂಪತಿಗೆ 4 ವರ್ಷದ ಮಗನಿದ್ದಾನೆ. ಮದುವೆಯಾದಾಗಿನಿಂದಲೂ ಪತ್ನಿ ಮತ್ತು ಅವರ ಕುಟುಂಬದವರು ನಿರಂತರವಾಗಿ ಹಿಂಸೆ ನೀಡುತ್ತಿದ್ದರು ಎಂದು ಅತುಲ್‌ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಲಕ್ಷಾಂತರ ದುಡ್ಡಿಗಾಗಿ ಪತ್ನಿಯ ಕುಟುಂಬದವರು ಬೇಡಿಕೆ ಇಡುತ್ತಿದ್ದರು. ಹಣ ನೀಡಲು ನಿರಾಕರಿಸಿದಾಗ ನಿಖಿತಾ ಸಿಂಘಾನಿಯಾ ಮಗನೊಂದಿಗೆ ಬೆಂಗಳೂರಿನ ಮನೆ ಬಿಟ್ಟು 2021ರಲ್ಲಿ ತೆರಳಿದ್ದರು. 2022ರಲ್ಲಿ ತಮ್ಮ ಮತ್ತು ಮನೆಯವರ ವಿರುದ್ಧ ವರದಕ್ಷಿಣೆ ದೂರು ದಾಖಲಿಸಲಾಗಿತ್ತು. ಬಳಿಕ ಕೇಸ್‌ ಹಿಂಪಡೆಯಲಾಗಿತ್ತು ಎಂದು ಅತುಲ್‌ ವಿಡಿಯೊದಲ್ಲಿ ವಿವರಿಸಿದ್ದಾರೆ. ಜತೆಗೆ ಮಗನನ್ನು ತಮ್ಮ ಹೆತ್ತವರಿಗೆ ಒಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Bengaluru Techie: ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯರಿಂದ ಕಾನೂನು ದುರ್ಬಳಕೆ; ಟೆಕ್ಕಿ ಆತ್ಮಹತ್ಯೆ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಕಳವಳ