ಬೆಂಗಳೂರು: ಕಂದಾಯ ಇಲಾಖೆಯಲ್ಲಿ (Revenue department) ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ (VAO jobs) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ನಡೆಸಲಾದ ಎರಡು ಸುತ್ತಿನ ಪರೀಕ್ಷೆಗಳಿಗೆ ಅಂತಿಮ ಅಂಕಪಟ್ಟಿಯನ್ನು (KEA Exam Result) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುರುವಾರ ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಅಂತಿಮ ಅಂಕಪಟ್ಟಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ನಲ್ಲಿ ಪರಿಶೀಲಿಸಬಹುದಾಗಿದೆ. ಪ್ರಾಧಿಕಾರ ಹೇಳುವ ಪ್ರಕಾರ, ರಾಜ್ಯ ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ದಿನಾಂಕ 29.09.2024 ಮತ್ತು 26.10.2024 ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲಾಗಿತ್ತು. ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪ್ರಕಟಿಸಲಾಗಿದೆ.
ದಿನಾಂಕ 27.10.2024 ರಂದು ಪತ್ರಿಕೆ-1 ಮತ್ತು ಪತ್ರಿಕೆ-2ರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಅಭ್ಯರ್ಥಿಗಳು ಗಳಿಸಿದ ತಾತ್ಕಾಲಿಕ ಅಂಕಪಟ್ಟಿಯನ್ನು ದಿನಾಂಕ 27.11.2024 ರಂದು ಪ್ರಕಟಿಸಲಾಗಿದೆ. ದಿನಾಂಕ 28.11.2024 ರವರೆಗೆ ತಾತ್ಕಾಲಿಕ ಅಂಕಪಟ್ಟಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ನಿಗದಿತ ದಿನಾಂಕದವರೆಗೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿದೆ.
ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 2021 (ತಿದ್ದುಪಡಿ) ರಲ್ಲಿ ನಿರ್ದೇಶಿಸಿರುವಂತೆ ಅಂತಿಮ ಅಂಕಪಟ್ಟಿ ಬಿಡುಗಡೆ ಮಾಡಲಾಗಿದೆ. ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಟ 50 ಅಂಕಗಳು ಮತ್ತು ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ಶೇಕಡಾ 35 ರಷ್ಟು ಅಂಕಗಳನ್ನು ಗಳಿಸಿ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಮಾತ್ರ ದಿನಾಂಕ 12.12.2024 ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸಂಬಂಧಪಟ್ಟ ಜಿಲ್ಲಾಧಿಕಾರಿಯವರು ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.
ಪ್ರಾಧಿಕಾರವು MSc AHS-24, #MSc Nursing/MPT-24 ಕೋರ್ಸ್ ಗಳ ಪ್ರವೇಶ ಕುರಿತ ಪೋರ್ಟಲ್ ನಲ್ಲಿ ತಪ್ಪಾಗಿ ಅಂಕಗಳನ್ನು ನಮೂದಿಸಿರುವವರಿಗೆ ಸರಿ ಮಾಡಿಕೊಳ್ಳಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಅದೇ ರೀತಿ RD ಸಂಖ್ಯೆ ಅಪ್ ಡೇಟ್ ಮಾಡಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳಿಗೆ ಒಂದು ಅವಕಾಶ ನೀಡಲಾಗಿದೆ. ಡಿಸೆಂಬರ್ 13ರ ಮೊದಲು ಒಳಗೆ ಸರಿ ಮಾಡಿಕೊಳ್ಳಬೇಕೆಂದು ಪ್ರಾಧಿಕಾರವು ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು PGCET-24 MBA, MCA, ME/M.Tech/M.Arch ಕೋರ್ಸ್ ಗಳ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ಪ್ರವೇಶಕ್ಕೆ ಡಿಸೆಂಬರ್14ರವರೆಗೆ ಅವಕಾಶ ನೀಡಿದೆ. ಅಂದೇ ಸಂಜೆ 6ಕ್ಕೆ ತಾತ್ಕಾಲಿಕ ಫಲಿತಾಂಶ ಹಾಗೂ ಡಿಸೆಂಬರ್ 16ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಶುಲ್ಕ ಪಾವತಿಗೆ ಡಿಸೆಂಬರ್ 18 ಕೊನೆಯ ದಿನವಾಗಿರುತ್ತದೆ ಎಂದು ಪ್ರಾಧಿಕಾರ ಹೇಳಿದೆ.