Friday, 13th December 2024

IND vs AUS: ಮೂರನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

IND vs AUS: India va Australia's Probable Playing XI for 3rd Test, Pitch Report, Weather Conditions, Head to Head Record

ಬ್ರಿಸ್ಬೇನ್‌: ಆರಂಭಿಕ ಎರಡು ಪಂದ್ಯಗಳ ಅಂತ್ಯಕ್ಕೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಶನಿವಾರ ಇಲ್ಲಿನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಆರಂಭವಾಗುವ ಮೂರನೇ ಟೆಸ್ಟ್‌ಗೆ ಸಜ್ಜಾಗುತ್ತಿವೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ.

ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಭರ್ಜರಿ ಗೆಲುವು ಪಡೆದಿದ್ದ ಭಾರತ ತಂಡ, ಟೆಸ್ಟ್‌ ಸರಣಿಯಲ್ಲಿ ಶುಭಾರಂಭ ಕಂಡಿತ್ತು. ಆದರೆ, ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಟೀಮ್‌ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಅಂದ ಹಾಗೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಮೂರೂ ಪಂದ್ಯಗಳನ್ನು ಭಾರತ ಗೆಲ್ಲಬೇಕಾಗಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಟೀಮ್‌ ಇಂಡಿಯಾದ ಫೈನಲ್‌ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಭಾರತ ತಂಡ ಕೊನೆಯ ಪ್ರವಾಸದಲ್ಲಿ ಬ್ರಿಸ್ಬೇನ್‌ನಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಗೆದ್ದು ಸತತ ಎರಡನೇ ಬಾರಿ ಕಾಂಗರೂ ನಾಡಿನಲ್ಲಿ ಟೆಸ್ಟ್‌ ಸರಣಿಯನ್ನು ಜಯಿಸಿ ಐತಿಹಾಸಿಕ ಸಾಧನೆಯನ್ನು ಮಾಡಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಲು ಭಾರತ ತಂಡ ಎದುರು ನೋಡುತ್ತಿದೆ.

IND vs AUS: ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಮೂಡಿಬಂದ ಟಾಪ್‌ 3 ವಿವಾದಗಳು!

ಭಾರತದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಸಾಧ್ಯತೆ

ಮೂರನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಸಾಧ್ಯತೆ ಇದೆ. ಕೆಎಲ್‌ ರಾಹುಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮುಂದುವರಿದರೆ, ನಾಯಕ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಕಳೆದ ಪಂದ್ಯವಾಡಿದ್ದ ಅದೇ ಬ್ಯಾಟಿಂಗ್‌ ವಿಭಾಗ ಮೂರನೇ ಪಂದ್ಯದಲ್ಲಿಯೂ ಮುಂದುವರಿಯಲಿದೆ. ಇನ್ನು ಆರ್‌ ಅಶ್ವಿನ್‌ ಬದಲು ವಾಷಿಂಗ್ಟನ್‌ ಸುಂದರ್‌ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇನ್ನು ವೇಗದ ಬೌಲಿಂಗ್‌ ವಿಭಾಗದಲ್ಲಿ ಹರ್ಷಿತ್‌ ರಾಣಾ ಅವರ ಸ್ಥಾನದಲ್ಲಿ ಆಕಾಶ್‌ ದೀಪ್‌ಗೆ ಅವಕಾಶ ನೀಡಬಹುದು.

ಆಸ್ಟ್ರೇಲಿಯಾ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ

ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ ಇದೆ. ಗಾಯದ ಕಾರಣ ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಜಾಶ್‌ ಹೇಝಲ್‌ವುಡ್‌ ಅವರು ಮೂರನೇ ಪಂದ್ಯಕ್ಕೆ ಮರಳುವ ಸಾಧ್ಯತೆ ಇದೆ. ಆ ಮೂಲಕ ಸ್ಕಾಟ್‌ ಬೋಲೆಂಡ್‌ ತಮ್ಮ ಸ್ಥಾನವನ್ನು ಹಿರಿಯ ವೇಗಿಗೆ ಬಿಟ್ಟುಕೊಡಬಹುದು.

ದಿ ಗಬ್ಬಾ ಪಿಚ್‌ ರಿಪೋರ್ಟ್‌, ಹವಾಮಾನ

ಮೂರನೇ ಟೆಸ್ಟ್‌ ಪಂದ್ಯ ನಡೆಯುವ ದಿ ಗಬ್ಬಾ ಪಿಚ್‌ ಫಾಸ್ಟ್‌ ಬೌಲರ್‌ಗಳಿಗೆ ನೆರವು ನೀಡಲಿದೆ. ಪಿಚ್‌ ಮೇಲೆ ಹುಲ್ಲು ಕಾಣಿಸುತ್ತಿದ್ದು, ಇದು ಬೌನ್ಸ್‌, ಸ್ವಿಂಗ್‌ ಹಾಗೂ ಸೀಮ್‌ಗೆ ಸಹಕಾರಿಯಾಗಲಿದೆ. ಇಲ್ಲಿ 10 ಎಂಎಂ ಹುಲ್ಲಿದ್ದು ಇದು ಬ್ಯಾಟಿಂಗ್‌ಗೆ ಕಠಿಣವಾಗಿರಲಿದೆ. ಇನ್ನು ಪಂದ್ಯ ಸಾಗುತ್ತಿದ್ದಂತೆ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಅಂದ ಹಾಗೆ ಇಲ್ಲಿ ಟಾಸ್‌ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

IND vs AUS:‌ ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಆರ್‌ ಅಶ್ವಿನ್!

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಟೆಸ್ಟ್‌ ಪಂದ್ಯಗಳು: 109
ಭಾರತದ ಗೆಲುವು: 46
ಆಸ್ಟ್ರೇಲಿಯಾದ ಗೆಲುವು: 33
ಡ್ರಾ: 29

ಭಾರತದ ಪ್ಲೇಯಿಂಗ್‌ XI

ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿ.ಕೀ), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾದ ಪ್ಲೇಯಿಂಗ್‌ XI

ಥನ್ ಮೆಕ್‌ಸ್ವೀನಿ, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್‌, ಸ್ಟೀವನ್‌ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯಾನ್, ಜಾಶ್ ಹೇಝಲ್‌ವುಡ್

ಪಂದ್ಯದ ವಿವರ

ಭಾರತ vs ಆಸ್ಟ್ರೇಲಿಯಾ
ಮೂರನೇ ಟೆಸ್ಟ್‌ ಪಂದ್ಯ
ದಿನಾಂಕ: ಡಿಸೆಂಬರ್‌ 14, 2024
ಸಮಯ: ಮುಂಜಾನೆ 05: 50ಕ್ಕೆ ಭಾರತೀಯ ಕಾಲಮಾನ
ಸ್ಥಳ: ದಿ ಗಬ್ಬಾ, ಬ್ರಿಸ್ಬೇನ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌

ಈ ಸುದ್ದಿಯನ್ನು ಓದಿ:Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್‌ ಕೊಹ್ಲಿ ಕಣ್ಣು!