ಚಿಕ್ಕಮಗಳೂರು: ಇಂದು(ಡಿ.14) ದತ್ತ ಜಯಂತಿಯ(Datta Jayanthi) ಕೊನೆಯ ದಿನವಾದ ಹಿನ್ನೆಲೆ ಚಿಕ್ಕಮಗಳೂರಿನ(Chikmagaluru) ದತ್ತಪೀಠದಲ್ಲಿ ಸಾವಿರಾರು ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನವನ್ನು(Datta Paduka Darshan) ಪಡೆದುಕೊಂಡಿದ್ದಾರೆ.
ದತ್ತ ಜಯಂತಿಯ ಕೊನೆಯ ದಿನವಾದ ಇಂದು ರಾಜ್ಯಾದ್ಯಾಂತ ಸಹಸ್ರಾರು ದತ್ತ ಮಾಲಾಧಾರಿಗಳು ಆಗಮಿಸಿದ್ದು, ಶ್ರೀಗುರುದತ್ತಾತ್ರೇಯ ಪೀಠದಲ್ಲಿ ದತ್ತ ಪಾದುಕೆ ದರ್ಶನವನ್ನು ಮಾಡಿದ್ದಾರೆ. ಈ ವೇಳೆ ಗುಹೆಯ ಮುಂಭಾಗದ ತುಳಸಿ ಕಟ್ಟೆಯ ಬಳಿ ಹೋಮ ಪೂಜೆ ನಡೆದಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಬಂದ್ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಅಂಗಡಿ ಮುಂಗಟ್ಟು ಸಂಪೂರ್ಣವಾಗಿ ಬಂದ್ ಆಗಿದ್ದವು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್(Police High Alert) ನಲ್ಲಿದ್ದರು. ಭದ್ರತೆಗಾಗಿ ಸರಿ ಸುಮಾರು ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತಜಯಂತಿಯ ಕೊನೆಯ ದಿನದಲ್ಲಿ ಬಹಳ ಅದ್ಧೂರಿಯಾಗಿ ಪೂಜೆ ನೆರವೇರಿದೆ. ಕೆಲ ದಿನಗಳ ಹಿಂದೆಯಷ್ಟೇ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಸೇರಿದಂತೆ ಇತರೆ ಮುಖಂಡರು ದತ್ತಮಾಲೆ ಧರಿಸಿದ್ದರು. ಇಂದು ಅವರೆಲ್ಲರು ದತ್ತ ಪಾದುಕೆ ದರ್ಶನವನ್ನು ಮಾಡಿದ್ದಾರೆ ಎಂಬ ಮಾಹಿತಿಯಿದೆ.
ಇನ್ಮು ಮೊನ್ನೆ ಗುರುವಾರ ಅನಸೂಯಾ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು. ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಕಾಲ್ನಡಿಗೆ ಮೂಲಕ ಹೊರಟ ಸಂಕೀರ್ತನಾ ಯಾತ್ರೆ, ಐ.ಜಿ. ರಸ್ತೆ, ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನ ಹಾದು ಕಾಮಧೇನು ಗಣಪತಿ ದೇವಾಲಯ ತಲುಪಿತ್ತು. ಸಾವಿರಕ್ಕೂ ಹೆಚ್ಚು ಮಹಿಳೆಯರು ಕೊರಳಿಗೆ ಕೇಸರಿ ಶಾಲು ಧರಿಸಿ, ಅನಸೂಯಾ ದೇವಿಯ ಚಿತ್ರಪಟ ಹಿಡಿದು ಸಾಗಿದ್ದರು. ಬಳಿಕ ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದ್ದರು. ಅಲ್ಲಿ ಅನಸೂಯಾ ದೇವಿ ಪೂಜೆ, ಗಣಪತಿ ಪೂಜೆ, ದುರ್ಗಾಹೋಮ, ಕಲಾಶಾಭಿಷೇಕ ಮಾಡಿದ್ದರು.
ದತ್ತಪೀಠ ವಿವಾದ
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೇ, ಹಿಂದೂಗಳಿಗೆ ಸೇರಿದ್ದೇ ಎನ್ನುವುದು ಬಹಳ ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿತ್ತು ಎಂದು ಹೇಳಲಾಗಿದೆ. ಆದರೆ, ನಂತರ ಈ ಸ್ಥಳದಲ್ಲಿ ಭಾರೀ ವಿವಾದ ಹುಟ್ಟಿಕೊಂಡಿತು.
ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ಹೊಂದಿಕೊಂಡಿದ್ದರು. ಆದರೆ, ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವರ್ ಎರಡೂ ಪದ್ಧತಿಗಳ ಪ್ರಕಾರ ಈಗಲೂ ಪೂಜೆ ಮಾಡಿಕೊಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Mahamastakabhisheka: ಗೊಮ್ಮಟಗಿರಿಯ ಬಾಹುಬಲಿಗೆ ವಿಜೃಂಭಣೆಯ ಮಹಾಮಸ್ತಕಾಭಿಷೇಕ; ಕಣ್ತುಂಬಿಕೊಂಡ ಸಹಸ್ರಾರು ಭಕ್ತರು