ನವದೆಹಲಿ: ಜಿಂಬಾಬ್ವೆ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ (AFG vs ZIM) ಫೀಲ್ಡ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿದ ಅಫಘಾನಿಸ್ತಾನ ತಂಡದ ಆಲ್ರೌಂಡರ್ ಗುಲ್ಬದದಿನ್ ನೈಬ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದಂಡವನ್ನು ವಿಧಿಸಿದೆ. ಈ ಪಂದ್ಯದಲ್ಲಿ ಆಫ್ಘನ್ ತಂಡ 50 ರನ್ಗಳಿಂದ ಭರ್ಜರಿ ಗೆಲುವು ಪಡೆದಿತ್ತು.
ಶುಕ್ರವಾರ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಎರಡನೇ ಟಿ20ಐ ಪಂದ್ಯದ ವೇಳೆ ಅಂಪೈರ್ನ ನಿರ್ಧಾರವನ್ನು ಗುಲ್ಬದಿನ್ ನೈಬ್ ವಿರೋಧಿಸಿದ್ದರು. ಆ ಮೂಲಕ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದರು. ಇದರ ಪರಿಣಾಮ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡವನ್ನು ವಿಧಿಸಲಾಗಿದೆ. ಈ ಪಂದ್ಯದ ಗೆಲುವಿನ ಮೂಲಕ ಆಫ್ಘನ್, 50 ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಶನಿವಾರ ರಾತ್ರಿ, ಅಫ್ಘಾನಿಸ್ತಾನವು ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಜಿಂಬಾಬ್ವೆಯನ್ನು ಮೂರು ವಿಕೆಟ್ಗಳಿಂದ ಸೋಲಿಸಿ ಸರಣಿಯನ್ನು ತನ್ನ ದಾಗಿಸಿಕೊಂಡಿತು.
ಐಸಿಸಿ ಹೇಳಿದ್ದೇನು?
“ಶುಕ್ರವಾರ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದಿದ್ದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘಿಸಿದ್ದಕ್ಕಾಗಿ ಅಫ್ಘಾನಿಸ್ತಾನದ ಗುಲ್ಬದಿನ್ ನೈಬ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ್ದಕ್ಕಾಗಿ ನೈಬ್ ಅವರನ್ನು ಶಿಕ್ಷಿಸಲಾಗಿದೆ. ಇದು ಅಂತಾರಾಷ್ಟ್ರೀಯ ಪಂದ್ಯದ ಸಂದರ್ಭದಲ್ಲಿ ಅಂಪೈರ್ ನಿರ್ಧಾರದ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದೆ,” ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿಕೆಯಲ್ಲಿ ತಿಳಿಸಿದೆ.
ಏನಿದು ಘಟನೆ?
ಪಂದ್ಯದ ಜಿಂಬಾಬ್ವೆ ಇನಿಂಗ್ಸ್ನ 11ನೇ ಓವರ್ನಲ್ಲಿ ತಾಶಿಂಗಾ ಮುಸೆಕಿವಾ ವಿರುದ್ಧ ನಾಯಕ ರಶೀದ್ ಖಾನ್ ಅವರ ಎಲ್ಬಿಡಬ್ಲ್ಯು ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರು. ಈ ವೇಳೆ ಗುಲ್ಬದಿನ್ ನೈಬ್ ಅಂಪೈರ್ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಅವರಿಗೆ ದಂಡದ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ. ಈ ಪ್ರಮಾದವನ್ನು ಆಫ್ಘನ್ ಆಲ್ರೌಂಡರ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಔಪಚಾರಿಕ ವಿಚಾರಣೆಯನ್ನು ತೆಗೆಯಲಾಗಿದೆ.