Saturday, 14th December 2024

Chikkaballapur News: ಸಂವಿಧಾನ ಭಾರತೀಯರಿಗೆ ಉತ್ತಮ ಜೀವನ ಕಟ್ಟಿಕೊಟ್ಟಿರುವ ಗ್ರಂಥವಾಗಿದೆ: ಕೆ.ವಿ.ನವೀನ್ ಕಿರಣ್

ಚಿಕ್ಕಬಳ್ಳಾಪುರ: ರಾಷ್ಟ್ರದ ಕಟ್ಟೆಯ ಕಡೆಯ ವ್ಯಕ್ತಿಗೂ ನೆಮ್ಮದಿಯ ಜೀವನವನ್ನು ಕಟ್ಟಿಕೊಟ್ಟಿರುವ ಸಂವಿಧಾನ ವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಲು ಪ್ರಜೆಗಳು ಮುಂದಾಗದಿರುವುದು ದುರಂತವಾಗಿದೆ ಎಂದು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಜಂಬೂದ್ವೀಪ ಜನಸೇವಾ ಸಂಘದಿಂದ ೧೦ನೇ ವರ್ಷದ ವಿಶ್ವಪರಿಸರ ದಿನ ಹಾಗೂ ವಿಶ್ವ ನೃತ್ಯದಿನ ಅಂಗವಾಗಿ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಂವಿಧಾನ ಪ್ರಾಥ ಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಬಹುಮಾನ ವಿತರಿಸಿ ಮಾತನಾಡಿ, ದೇಶದ ಸಂವಿಧಾನವನ್ನು ಓದಿ ಅರ್ಥೈಸಿಕೊಂಡಲ್ಲಿ ವಿದ್ಯಾರ್ಥಿ ಜೀವನವು ಉಜ್ವಲಗೊಳ್ಳುವುದು ಎಂದು ಸಲಹೆ ನೀಡಿದರು.

ದೇಶದಲ್ಲಿ ನೂರಾರು ಕೋಟಿ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಬೃಹತ್ ವ್ಯವಸ್ಥೆಯಾಗಿರುವ ಸಂವಿಧಾನವನ್ನು ಏಕೆ ಓದಬೇಕು, ಯಾಕೆ ರಕ್ಷಿಸಬೇಕೆಂಬ ಪ್ರಶ್ನೆ ಎಲ್ಲರಲ್ಲೂ ಮೂಡಬೇಕಿದೆ. ಭಾರತೀಯರಿಗೆ ರಕ್ಷಣಾ ಕವಚದಂತಿ ರುವ ಸಂವಿಧಾನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನ ಓದುವ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ೪ ತಿಂಗಳ ಮಗುವಿನಿಂದ ಎಲ್ಲ ವಯೋಮಾನದವರು ಮೊಬೈಲ್ ಗುಲಾಮರಾಗಿ ಕಾಲ ಕಾಲೆಯುತ್ತಿರುವುದು ದುರಂತ.ವಿದ್ಯಾರ್ಥಿಗಳು ಮೊಬೈಲ್‌ಗಳ ಸೆಳೆತಕ್ಕೆ ತುತ್ತಾಗದಿದ್ದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾದಿ ಸುಗಮವಾಗುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ತಂದೆತಾಯಿಗಳ ಕನಸನ್ನು ನನಸು ಮಾಡಬೇಕು ಎಂದು ಹೇಳಿದರು.

ಉಪನ್ಯಾಸಕ ಅರಿಕೆರೆ ಎಂ.ಮುನಿರಾಜು ಮಾತನಾಡಿ, ವ್ಯಾಸಂಗದ ವೇಳೆ ಯಾರು ಸುಖಕ್ಕೆ ಹಾತೋರೆಯುತ್ತಾರೋ ಅವರ ಬದುಕು ಹಾಳಾಗಲಿದೆ. ದುಶ್ಚಟಗಳಿಂದ ದೊರೆಯುವ ಕ್ಷಣಿಕ ಸುಖದ ಹಿಂದೆ ಬೀಳದೆ ಗುರುಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಉತ್ತಮ ಭವಿಷ್ಯಕ್ಕೆ ನೀವೇ ಶಿಲ್ಪಿಗಳು ಎಂಬ ಬಾಬಾಸಾಹೇಬ್ ಅಂಬೇಡ್ಕರರ ಮಾತನ್ನು ಮನಗಾಣಬೇಕಿದೆ. ಪರಿಶ್ರಮವೇ ಸಾಧನೆಯ ಕೀಲಿಕೈ ಎಂಬ ಸತ್ಯವನ್ನು ಅರಿತು ವ್ಯಾಸಂಗಕ್ಕೆ ಪ್ರಾಧಾನ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ನಡೆಸಿದ್ದ ಸಂವಿಧಾನ ವಿಷಯ ಕುರಿತ ಪ್ರಾಥಮಿಕ ಪರೀಕ್ಷೆಯಲ್ಲಿ ನಗರದ ೩ ಸಾವಿರ ಪಿಯು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಬೆಸ್ಟ್ ಪಿಯು ಕಾಲೇಜಿನ ಅಪರ್ಣ ಪ್ರಥಮ, ಪಂಚಗಿರಿ ಪಿಯು ಕಾಲೇಜಿನ ಎಂ.ಸಂಗೀತ ದ್ವಿತೀಯ, ಸರ್ಕಾರಿ ವೃತ್ತಿಪರ ವಸತಿ ನಿಲಯದ ವಿದ್ಯಾರ್ಥಿನಿ ವಿ.ಎನ್.ಪ್ರೀತಿ ತೃತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.ಬಹುಮಾತ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಆಕಾಶ್ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್, ಜಂಬೂದ್ವೀಪ ಜನಸೇವಾ ಸಂಘದ ರಮಣ್‌ ಅಕೇಶ್, ಆಂತರಿಕಾ ದೂರು ಸಮಿತಿಯ ಸದಸ್ಯೆ ನಿರ್ಮಲಾ ಮೇರಿ, ಸರ್ಕಾರಿ ವೃತ್ತಿಪರ ವಸತಿ ನಿಲಯದ ವಾರ್ಡನ್ ಪ್ರೀತಿ, ಮುಖಂಡ ಶ್ರೀನಿವಾಸ್, ಕಮಲ, ಲಕ್ಷ್ಮೀ ಇದ್ದರು.